IND vs SL T20: ಸ್ಟಾರ್ ಆಟಗಾರರು ಅಲಭ್ಯ: ಲಂಕಾ ವಿರುದ್ಧದ ಮೊದಲ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
India Playing XI 1st T20 vs Sri Lanka: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತಕ್ಕೆ ಪ್ಲೇಯಿಂಗ್ ಇಲೆವೆನ್ ನದ್ದೇ ದೊಡ್ಡ ತಲೆನೋವಾಗಿದೆ. ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿ ತಂಡದಲ್ಲಿ ಎದ್ದು ಕಾಣುತ್ತಿದ್ದು, ಬೌಲರ್ಗಳ ಮೇಲೆ ಎಲ್ಲ ಒತ್ತಡವಿದೆ. ಹಾಗಾದ್ರೆ ಭಾರತಸ ಸಂಭಾವ್ಯ ಪ್ಲೇಯಿಂಗ್ XI ಬಗ್ಗೆ ನೋಡುವುದಾದರೆ...
ಲಖನೌದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡ ಸಂಯೋಜನೆಗೆ ಪ್ರಾಯೋಗಿಕ ಎನಿಸಿರುವ ಶ್ರೀಲಂಕಾ ಟಿ20 ಸರಣಿ ಭಾರತಕ್ಕೆ ಮಹತ್ವದ್ದಾಗಿದೆ. ಕಳೆದ ಭಾನುವಾರವಷ್ಟೇ ಬಲಿಷ್ಠ ವೆಸ್ಟ್ ಇಂಡೀಸ್ ಎದುರು ವೈಟ್‌ವಾಷ್ ಸಾಧಿಸಿರುವ ರೋಹಿತ್ ಶರ್ಮ (Rohit Sharma) ಪಡೆ ಈ ಸರಣಿಯಲ್ಲೂ ತನ್ನ ಗೆಲುವಿನ ಓಟ ಮುಂದುವರೆಸುವ ಯೋಜನೆಯಲ್ಲಿದೆ. ಆದರೆ, ಭಾರತಕ್ಕೆ ಪ್ಲೇಯಿಂಗ್ ಇಲೆವೆನ್ ನದ್ದೇ ದೊಡ್ಡ ತಲೆನೋವಾಗಿದೆ. ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿ ತಂಡದಲ್ಲಿ ಎದ್ದು ಕಾಣುತ್ತಿದ್ದು, ಬೌಲರ್ಗಳ ಮೇಲೆ ಎಲ್ಲ ಒತ್ತಡವಿದೆ. ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್, ರಿಷಭ್ ಪಂತ್, ಸೂರ್ಯಕುಮಾರ್, ದೀಪಕ್ ಚಹರ್ ಹೀಗೆ ಪ್ರಮುಖರು ವಿಶ್ರಾಂತಿ ಮತ್ತು ಇಂಜುರಿಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಹೌದು, ವಿಂಡೀಸ್ ಸರಣಿಯಲ್ಲಿ ಆಡಿದ ಕೆಲ ಆಟಗಾರರು ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿರುವುದು ಕೊಂಚ ಬಲ ನೀಡಿದೆ. ಸೂರ್ಯಕುಮಾರ್ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಅಲ್ಲದೆ ರೋಹಿತ್ ಶರ್ಮಾ ಓಪನರ್ ಆಗಿ ಆಡ್ತಾರಾ? ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬರುತ್ತಾರಾ ಎಂಬುದು ನೋಡಬೇಕಿದೆ. ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಬಹುದಾ ಎಂಬ ಪ್ರಶ್ನೆ ಕೂಡ ಇದೆ. ಆಲ್ರೌಂಡರ್ ಜಡೇಜಾಗೆ ರವಿ ಬಿಷ್ಣೋಯ್ ಅಥವಾ ಚಹಲ್ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಇದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಡಿದಂತೆ ಓಪನರ್ಗಳಾಗಿ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಕಣಕ್ಕಿಳಿಯುವುದು ಖಚಿತ. ವಿಂಡೀಸ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಕಿಶನ್ಗೆ ತಾನೋಬ್ಬ ಶ್ರೇಷ್ಠ ಆಟಗಾರ ಎಂದು ಸಾಭೀತು ಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ. ನಾಯಕ ರೋಹಿತ್ ಶರ್ಮ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 4ನೇ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಬ್ಯಾಟ್ಸ್‌ಮನ್ ಆಗಿರುವ ಶ್ರೇಯಸ್ ಅಯ್ಯರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.
ಇಂಜುರಿಯಿಂದಾಗಿ ಟಿ20 ಸರಣಿಯಿಂದ ಹೊರಬಿದ್ದಿರುವ ಸೂರ್ಯಕುಮಾರ್ ಯಾದವ್ ಜಾಗದಲ್ಲಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ರೋಹಿತ್ ಶರ್ಮಾ ಈ ಬಗ್ಗೆ ಹಿಂಟ್ ಕೂಡ ನೀಡಿದ್ದಾರೆ. “ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಅವರಂತಹ ಬ್ಯಾಟ್ಸ್‌ಮನ್ ವಿಧ್ವಂಸಕರಾಗಬಹುದು. ಸ್ಯಾಮ್ಸನ್ ಅವರ ಬ್ಯಾಕ್‌ಫೂಟ್ ಆಟ ಅದ್ಭುತವಾಗಿದೆ. ಅವರು ಎಲ್ಲಾ ರೀತಿಯ ಹೊಡೆತಗಳನ್ನು ಹೊಂದಿದ್ದಾರೆ. ಸ್ಯಾಮ್ಸನ್ ಆಡುವ ಹೊಡೆತಗಳನ್ನು ಆಡಲು ತುಂಬಾ ಕಷ್ಟ. ಇಂತಹ ಬ್ಯಾಟ್ಸ್‌ಮನ್ ಅಗತ್ಯ ಭಾರತಕ್ಕಿದೆ”, ಎನ್ನುವ ಮೂಲಕ ತಂಡದಲ್ಲಿ ಸ್ಥಾನ ನೀಡುವ ಸೂಚನೆ ಕೊಟ್ಟಿದ್ದಾರೆ.
ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ವೆಂಕಟೇಶ್ ಅಯ್ಯರ್ ಕೂಡ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಹರ್ಷಲ್ ಪಟೇಲ್ ಕೂಡ ಸ್ಥಾನ ಪಡೆದುಕೊಳ್ಳಬಹುದು. ರವಿ ಬಿಷ್ಣೋಯಿ ಮತ್ತು ಯುಜ್ವೇಂದ್ರ ಚಹಲ್ ಪೈಕಿ ಒಬ್ಬರಿಗೆ ಮಾತ್ರ ಸ್ಥಾನ. ಭುವನೇಶ್ವರ್ ಮತ್ತು ಜಸ್‌ಪ್ರೀತ್ ಬುಮ್ರ ತಂಡದ ಸ್ಟಾರ್ ಬೌಲರ್ಗಳಾಗಿದ್ದಾರೆ.
ಭಾರತ ಸಂಭಾವ್ಯ ತಂಡ: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯಿ/ಚಹಲ್, ಭುವನೇಶ್ವರ್, ಜಸ್‌ಪ್ರೀತ್ ಬುಮ್ರಾ.
IND vs SL T20: ಇಂದು ಭಾರತ–ಶ್ರೀಲಂಕಾ ಮೊದಲ ಟಿ20: ಗೆಲುವಿನ ಓಟ ಮುಂದುವರೆಸುತ್ತಾ ರೋಹಿತ್ ಪಡೆ?