ಸರಿಯಾಗಿ ಮೀಸೆ ಮೂಡದ ಭಾರತೀಯ ಹುಡುಗರಿಂದ ಎಐ ಉದ್ಯಮದಲ್ಲಿ ಸಂಚಲನ; ಫೋರ್ಬ್ಸ್ ಪಟ್ಟಿಯಲ್ಲಿ 19 ವರ್ಷದ ಆಯುಷ್, ಆರ್ಯನ್

|

Updated on: May 17, 2024 | 1:43 PM

Induced AI co-founders Aryan Sharma and Ayush Pathak: 19 ವರ್ಷದ ಆರ್ಯನ್ ಶರ್ಮಾ ಮತ್ತು ಆಯುಷ್ ಪಾಠಕ್ ಅವರು ಕಟ್ಟಿರುವ ಇಂಡ್ಯೂಸ್ಡ್ ಎಐ ಎಂಬ ಕಂಪನಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದವರಿಗೆ ಅಚ್ಚರಿ ಮೂಡಿಸಿದೆ. ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರಿಂದಲೇ ಬಂಡವಾಳ ಪಡೆದಿರುವ ಈ ಹುಡುಗರು ಈ ಹಂತಕ್ಕೆ ಬೆಳೆದದ್ದು ಸುಮ್ಮನೆ ಅಲ್ಲ. ಸಣ್ಣ ವಯಸ್ಸಿಗೇ ಬಹಳ ಪ್ರೌಢಿಮೆ ಹೊಂದಿರುವ ಆರ್ಯನ್ ಮತ್ತು ಆಯುಷ್ ಭವಿಷ್ಯದಲ್ಲಿ ಎಐ ಕ್ಷೇತ್ರದಲ್ಲಿ ಭಾರತದ ನೇತೃತ್ವ ವಹಿಸಿದರು ವಹಿಸಬಹುದು.

ಸರಿಯಾಗಿ ಮೀಸೆ ಮೂಡದ ಭಾರತೀಯ ಹುಡುಗರಿಂದ ಎಐ ಉದ್ಯಮದಲ್ಲಿ ಸಂಚಲನ; ಫೋರ್ಬ್ಸ್ ಪಟ್ಟಿಯಲ್ಲಿ 19 ವರ್ಷದ ಆಯುಷ್, ಆರ್ಯನ್
ಆರ್ಯನ್ ಶರ್ಮಾ
Follow us on

ನವದೆಹಲಿ, ಮೇ 17: ಟೀನೇಜ್ ಅಥವಾ ಹದಿಹರೆಯ ಎಂದರೆ ಮೋಜು, ಮಸ್ತಿಗೆ ಮನಸು ನಿಲುಕುವ ವಯಸ್ಸಾಗಿರುತ್ತದೆ. ಇನ್ನೂ ಕಾಲೇಜು ಶಿಕ್ಷಣ ಮುಗಿಯದ ವಯಸ್ಸು. ಈ ವಯಸ್ಸಿನಲ್ಲಿ ಕಂಪನಿ ಸ್ಥಾಪಿಸಿ ಯಶಸ್ವಿಯಾದವರ ಸಂಖ್ಯೆ ಕಡಿಮೆ. ಮಾರ್ಕ್ ಜುಕರ್ಬರ್ಗ್ ಅವರಂಥವರು ಕೆಲವರು ಕಾಲೇಜು ಓದುವಾಗಲೇ ಉದ್ದಿಮೆ ಸ್ಥಾಪಿಸಿ ಬಳಿಕ ವಿಜೃಂಬಿಸಿದ್ದಿದೆ. ಭಾರತದ ಆರ್ಯನ್ ಶರ್ಮಾ ಮತ್ತು ಆಯುಷ್ ಪಾಠಕ್ (Aryan Sharma, Ayush Pathak) ಎಂಬಿಬ್ಬರು ಟೀನೇಜ್ ಯುವಕರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. 18 ವರ್ಷದ ಆರ್ಯನ್ ಶರ್ಮಾ ಮತ್ತು 19 ವರ್ಷದ ಆಯುಷ್ ಪಾಠಕ್ ಅವರಿಬ್ಬರು ಏಷ್ಯಾ ಫೋರ್ಬ್ಸ್ 30 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇಂಡ್ಯೂಸ್ಡ್ ಎಐ (Induced AI) ಎಂಬ ಸ್ಟಾರ್ಟಪ್ ಕಂಪನಿಯನ್ನು ಕಟ್ಟಿರುವ ಈ ಹುಡುಗರು ಅಮೆರಿಕದ ಎಐ ಸಾಮ್ರಾಟ ಎನಿಸಿರುವ ಸ್ಯಾಮ್ ಆಲ್ಟ್​ಮ್ಯಾನ್ ಅವರಿಂದ ಬಂಡವಾಳ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹುಡುಗರಲ್ಲ ಇವರು, ಛಲದಂಕಮಲ್ಲರು…

ಆರ್ಯನ್ ಶರ್ಮಾ ಮತ್ತು ಆಯುಷ್ ಪಾಠಕ್ ಯಾವುದೊ ಅದೃಷ್ಟ ಘಳಿಗೆಯಲ್ಲಿ ಕಂಪನಿ ಕಟ್ಟಿದ್ದಲ್ಲ. ಅಥವಾ ಆಕಸ್ಮಿಕ ಮಾಲೀಕರೂ ಅಲ್ಲ. ಇದರ ಹಿಂದೆ ವರ್ಷಗಳ ಶ್ರಮ, ತುಡಿತ ಇದೆ. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಇನ್ನೂ ಶಾಲೆ ಓದುವ ದಿನದಲ್ಲೇ ಇವರು ಎಐ ಉದ್ದಿಮೆ ಕನಸು ಕಂಡಿದ್ದರು. ತಮ್ಮ ಕನಸು ಸಾಕಾರ ಮಾಡಲು ಪ್ರಯತ್ನಗಳನ್ನೇ ಶುರು ಮಾಡಿದ್ದರು.

ಇದನ್ನೂ ಓದಿ: Forbes 30 Under 30 List: ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚುತ್ತಿರುವ ಭಾರತೀಯ ಯುವ ಉದ್ಯಮಿಗಳು

ಆರ್ಯನ್ ಶರ್ಮಾ ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಾ, ತಮ್ಮ ಬೆಳವಣಿಗೆ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದರು. ಅವರು ಮತ್ತು ಆಯುಷ್ ಪಾಠಕ್ ಇಬ್ಬರೂ 13ನೇ ವಯಸ್ಸಿನಲ್ಲಿ ಕೋಡಿಂಗ್ ಕಲಿತು ಅದರಲ್ಲಿ ಆಸಕ್ತರಾಗಿದ್ದರು. 14ರ ವಯಸ್ಸಿನಲ್ಲಿ ಅವರು ವಿಶ್ವದ ಟೆಕ್ ವಲಯದ ದಿಗ್ಗಜರನ್ನು ಭೇಟಿಯಾಗಲು ಕೋರಿ ಇಮೇಲ್​ಗಳನ್ನು ಕಳುಹಿಸುತ್ತಿದ್ದರಂತೆ. ಕೆಲವರಂತೂ ರೋಸಿ ಹೋಗಿ ಇಮೇಲ್ ಕಳುಹಿಸೋದನ್ನು ನಿಲ್ಲಿಸಿ ಎಂದು ಇವರಿಗೆ ಹೇಳಿದ್ದುಂಟು.

ಪೋಡ್​​ಕ್ಯಾಸ್ಟ್ ವಿಡಿಯೋ ನೋಡಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಅಪಾರ ಆಸಕ್ತಿ ಮತ್ತು ಜ್ಞಾನ ಹೊಂದಿದ ಇಬ್ಬರಿಗೂ ಏನೋ ಸಾಧಿಸುವ ಛಲವಿತ್ತು. ಇಂಡ್ಯೂಸ್ಡ್ ಎಐ ಶುರು ಮಾಡುವ ಮುನ್ನ ಇಬ್ಬರೂ ಬೇರೆ ಬೇರೆ ಕಡೆ ಕೆಲಸ ಕೂಡ ಮಾಡಿದ್ದರು. ಕ್ಯಾಲಿಫೋರ್ನಿಯಾಗೆ ಹೋಗಿ ಅಲ್ಲಿ ತಂತ್ರಜ್ಞಾನ ದಿಗ್ಗಜರನ್ನು ಭೇಟಿಯಾಗುವ ಪ್ರಯತ್ನಗಳನ್ನೂ ಮಾಡಿದ್ದರು. ಟೆಕ್ ಕಾರ್ಯಕ್ರಮವೊಂದಲ್ಲಿ ಆಲ್ಟ್​ಮ್ಯಾನ್​ರನ್ನು ಭೇಟಿ ಕೂಡ ಮಾಡಿದ್ದರು. ಇವರ ಆಸಕ್ತಿ ಮತ್ತು ಛಲ ಕಂಡು ಸ್ಯಾಮ್ ಅಚ್ಚರಿಗೊಂಡಿದ್ದರು.

ಅದೇ ರೀತಿ ಮತ್ತೊಂದು ಬಾರಿ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ಇವರು ಭೇಟಿಯಾಗಿ ತಮ್ಮ ಎಐ ಆಕಾಂಕ್ಷೆಗಳನ್ನು ಹುಡುಗರು ಪುನರುಚ್ಚರಿಸಿದ್ದರು. ಇವರ ಬದ್ಧತೆ ಕಂಡು ಮೆಚ್ಚಿದ ಸ್ಯಾಮ್ 2.3 ಮಿಲಿಯನ್ ಡಾಲರ್ ಹಣವನ್ನು ಇಂಡ್ಯೂಸ್ಟ್ ಎಐ ಸಂಸ್ಥೆಗೆ ಫಂಡಿಂಗ್ ಆಗಿ ಕೊಟ್ಟಿದ್ದಾರೆ. ಓಪನ್ ಎಐನಿಂದ ಮಾತ್ರವಲ್ಲ, ಇನ್ನೂ ಕೆಲ ಸಂಸ್ಥೆಗಳಿಂದಲೂ ಶರ್ಮಾ ಮತ್ತು ಪಾಠಕ್ ಬಂಡವಾಳ ಪಡೆಯಲು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಈ ಹಣಕಾಸು ವರ್ಷದಲ್ಲೇ 4 ಟ್ರಿಲಿಯನ್ ಡಾಲರ್ ಆರ್ಥಿಕತೆ; ಶೀಘ್ರದಲ್ಲೇ ಜಪಾನ್ ಹಿಂದಿಕ್ಕಲಿದೆ ಭಾರತ: ಸಂಜೀವ್ ಸಾನ್ಯಾಲ್

ಇಂಡ್ಯೂಸ್ಡ್ ಎಐ ಏನು ಮಾಡುತ್ತೆ?

ಇಮೇಲ್ ಬರೆಯುವುದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡುವುದು ಇತ್ಯಾದಿ ಹಲವು ಬ್ಯಾಕ್ ಆಫೀಸ್ ಕೆಲಸ ಅಥವಾ ಕ್ಲೆರಿಕಲ್ ಕೆಲಸವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಮಾಡಿಸುವುದು ಇತ್ಯಾದಿ ಕೆಲಸಗಳನ್ನು ಇವರ ಕಂಪನಿ ಮಾಡುತ್ತದೆ. ಬ್ರೌಸರ್​ನಲ್ಲಿ ಇವರ ಬೋಟ್​ಗಳು ಮನುಷ್ಯರ ರೀತಿಯಲ್ಲಿ ಇವನ್ನು ಮಾಡಬಲ್ಲುವು. ಇವು ಕ್ಲೌಡ್ ಸ್ಟೋರೇಜ್ ಬಳಸುವುದರಿಂದ ಕಂಪ್ಯೂಟರ್​ನಲ್ಲಿ ಮಾಡಲಾಗುವ ಇತರ ಕಾರ್ಯಗಳಿಗೆ ಅಡಚಣೆ ಆಗದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ