
ನವದೆಹಲಿ, ಜನವರಿ 21: ಎಐ ಸಾಮರ್ಥ್ಯದಲ್ಲಿ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರು ಡಾವೊಸ್ ಶೃಂಗಸಭೆಯಲ್ಲಿ (Davos WEF Summit) ವಿವರಿಸಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ 2026 ವೇದಿಕೆಯಲ್ಲಿ ಎಐ ಸಿದ್ಧತೆ (AI Preparedness) ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವ ಎ ವೈಷ್ಣವ್ ಅವರು ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ನಿಯೋಜನೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ವಿಶದಪಡಿಸಿದ್ದಾರೆ.
ಬಹಳ ದೊಡ್ಡದಾದ, ತೀವ್ರ ಗಣಕದ ಅವಶ್ಯಕತೆ ಇರುವ ಮಾಡಲ್ಗಳ ಬದಲು 20ರಿಂದ 50 ಬಿಲಿಯನ್ ಪ್ಯಾರಾಮೀಟರ್ಗಳಿರುವ ಸಣ್ಣ ಸಣ್ಣ ಮಾಡಲ್ಗಳನ್ನು ನಿರ್ಮಿಸಿ ಭಾರತೀಯ ಭಾಷೆಗಳಿಗೆ ತಕ್ಕಂತೆ ರೂಪಿಸಿ ವಿವಿಧ ಸೆಕ್ಟರ್ಗಳಿಗೆ ಅವುಗಳನ್ನು ನಿಯೋಜಿಸಲಾಗುತ್ತಿದೆ. ಈ ರೀತಿಯಾಗಿ ಎಐನ ಫಲವನ್ನು ಅತಿಹೆಚ್ಚು ಪಡೆಯಲು ಸಾಧ್ಯವಾಗುತ್ತದೆ ಎಂದು ಎ ವೈಷ್ಣವ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?
ಡಬ್ಲ್ಯುಇಎಫ್ ಫೋರಂನ ಸಂವಾದದಲ್ಲಿ ಅಶ್ವಿನಿ ವೈಷ್ಣವ್ ಅವರು ಭಾರತದ ಎಐ ಸಿದ್ಧತೆಯಲ್ಲಿನ ಐದು ಎಳೆಗಳನ್ನು ವಿವರಿಸಿದ್ದಾರೆ.
ಈ ಐದು ಲೇಯರ್ಗಳಲ್ಲಿ ಭಾರತ ಪ್ರಗತಿ ಕಾಣುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಎಐ ಇನ್ಫ್ರಾಸ್ಟ್ರಕ್ಚರ್ನಲ್ಲಿ ಬಹಳ ಮುಖ್ಯವಾಗಿರುವ ಕಂಪ್ಯೂಟ್ ವ್ಯವಸ್ಥೆಗೆ ಜಿಪಿಯುಗಳು ಅಗತ್ಯ. ಅದಕ್ಕಾಗಿ ಭಾರತದಲ್ಲಿ 38,000 ಜಿಪಿಯುಗಳಿರುವ ಸಾಮಾನ್ಯ ಕಂಪ್ಯೂಟ್ ಫೆಸಿಲಿಟಿ ನಿರ್ಮಿಸಲಾಗುತ್ತಿದೆ. ಇದರಿಂದ ಜಿಪಿಯು ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದ್ಧಾರೆ.
ಇದನ್ನೂ ಓದಿ: ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್ನಲ್ಲಿ ಪ್ರಹ್ಲಾದ ಜೋಷಿ
1. ಅಪ್ಲಿಕೇಶನ್ ಲೇಯರ್: ಕೃಷಿ, ಹೆಲ್ತ್ಕೇರ್, ಶಿಕ್ಷಣ, ಆಡಳಿತ, ಉತ್ಪಾದನೆ ಇತ್ಯಾದಿ ವಿವಿಧ ಸೆಕ್ಟರ್ಗಳಿಗೆ ಎಐ ಅನ್ನು ಸೂಕ್ತವಾಗಿ ಅಳವಡಿಸಲಾಗುತ್ತದೆ. ಜನರು ಮತ್ತು ಉದ್ಯಮಗಳು ಎಐ ಫಲಾನುಭವಿಗಳಾಗುತ್ತಾರೆ.
2. ಮಾಡಲ್ ಲೇಯರ್: ವಿವಿಧ ಎಐ ಮಾಡಲ್ಗಳನ್ನು ತಯಾರಿಸುವುದು. ಭಾರತೀಯ ಭಾಷೆಗಳು, ಸೆಕ್ಟರ್ಗಳು ಮತ್ತು ನಿಯಮಾವಳಿಗಳಿಗೆ ಅನುಗುಣವಾದ ಮಾಡಲ್ಗಳನ್ನು ನಿರ್ಮಿಸಲಾಗುವುದು.
3. ಚಿಪ್ ಲೇಯರ್: ಸಬ್ಸಿಡಿಗಳ ಮೂಲಕ ಬಹಳ ಕಡಿಮೆ ಬೆಲೆಗೆ 38,000ಕ್ಕೂ ಅಧಿಕ ಜಿಪಿಯುಗಳನ್ನು ತಯಾರಿಸಲಾಗುತ್ತದೆ. ಎಐ ಅಭಿವೃದ್ಧಿಯಲ್ಲಿ ತೊಡಗಿರುವವರೆಲ್ಲರಿಗೂ ಈ ಜಿಪಿಯುಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು.
4. ಡಾಟಾ ಸೆಂಟರ್ ಲೇಯರ್: ಎಐ ಮಾಡಲ್ಗಳು, ಡಾಟಾ ಮತ್ತು ಕಂಪ್ಯೂಟ್ ರಿಸೋರ್ಸ್ಗಳನ್ನು ಹೋಸ್ಟ್ ಮಾಡಲು ಡಾಟಾ ಸೆಂಟರ್ ಬೇಕು. ಈ ಡಾಟಾ ಸೆಂಟರ್ಗಳನ್ನು ಕೂಲಿಂಗ್ ಮಾಡಲು, ಸಮರ್ಪಕವಾಗಿ ನೀರು ಉಪಯೋಗಿಸಲು ಮತ್ತು ವಿದ್ಯುತ್ ಉಪಯೋಗಿಸಲು ಇನ್ನೋವೇಟಿವ್ ಮಾರ್ಗಗಳನ್ನು ಅನುಸರಿಸಲಾಗುವುದು.
5. ಎನರ್ಜಿ ಲೇಯರ್: ಎಐ ಇನ್ಫ್ರಾಸ್ಟ್ರಕ್ಚರ್ ಸಮರ್ಪಕವಾಗಿರಬೇಕು. ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಬೇಕು. ಡಾಟಾ ಸೆಂಟರ್ ಹೆಚ್ಚಬೇಕು. ರಿನಿವಬಲ್ ಎನರ್ಜಿ ಹೆಚ್ಚಬೇಕು. ನ್ಯೂಕ್ಲಿಯಾರ್ ಎನರ್ಜಿ ಅಳವಡಿಸಬೇಕು. ಸಣ್ಣ ಸಣ್ಣ ಮಾಡ್ಯುಲಾರ್ ಮತ್ತು ಮೈಕ್ರೋ ರಿಯಾಕ್ಟರ್ಗಳ ನಿರ್ಮಾಣ, ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಶಿಪ್, ವಿದೇಶೀ ಹೂಡಿಕೆ ಇತ್ಯಾದಿಗೆ ಅನುವು ಮಾಡಿಕೊಡಬಲ್ಲ ಶಾಂತಿ ಕಾಯ್ದೆ ಜಾರಿ ಮಾಡಲಾಗುತ್ತಿದೆ.
ಅಶ್ವಿನಿ ವೈಷ್ಣವ್ ಅವರೊಂದಿಗಿನ ಸಂವಾದದ ವಿಡಿಯೋ ಲಿಂಕ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ