ಆಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾದ ನೋಂದಾಯಿತ ಕಚೇರಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರ

ಬಹುರಾಷ್ಟ್ರೀಯ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾ ತನ್ನ ನೋಂದಾಯಿತ ಕಚೇರಿಯನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಿದ್ದು, ಮುಂಬೈನಲ್ಲಿ ಹೊಸ ಕಾರ್ಪೊರೇಟ್ ಕಚೇರಿ ಕಾರ್ಯಾರಂಭ ಮಾಡಿದೆ. ಬೆಂಗಳೂರು ಪ್ರಮುಖ ಕೇಂದ್ರವಾಗಿ ಮುಂದುವರಿಯಲಿದೆ ಎಂದು ಕಂಪನಿ ತಿಳಿಸಿದೆ. ಸ್ಥಳಾಂತರಕ್ಕೆ ನಿಖರ ಕಾರಣ ಏನು ಎಂಬ ಬಗ್ಗೆಯೂ ಆಸ್ಟ್ರಾಜೆನೆಕಾ ಪ್ರತಿನಿಧಿ ಸ್ಪಷ್ಟನೆ ನೀಡಿದ್ದಾರೆ.

ಆಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾದ ನೋಂದಾಯಿತ ಕಚೇರಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರ
ಸಾಂದರ್ಭಿಕ ಚಿತ್ರ

Updated on: Oct 21, 2026 | 11:51 AM

ಬೆಂಗಳೂರು, ಅಕ್ಟೋಬರ್​​ 21: ಬಹುರಾಷ್ಟ್ರೀಯ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾ ತನ್ನ ನೋಂದಾಯಿತ ಕಚೇರಿಯನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ಕಳೆದ ವಾರವಷ್ಟೇ ಮುಂಬೈನಲ್ಲಿ ಕಂಪನಿಯ ಹೊಸ ಕಾರ್ಪೊರೇಟ್ ಕಚೇರಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು. ಮೇ ತಿಂಗಳಲ್ಲಿ ಕಂಪನಿಯು ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದ್ದು, ಕಂಪನಿಯ ನೋಂದಾಯಿತ ಕಚೇರಿಯನ್ನು ಕರ್ನಾಟಕ ರಾಜ್ಯದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಗೆ ಷೇರುದಾರರು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿತ್ತು.

ಕರ್ನಾಟಕದಿಂದ ಸ್ಥಳಾಂತರ ಯಾಕೆ?

ಇದೀಗ ಕಾರ್ಪೊರೇಟ್ ಕಚೇರಿ ಮತ್ತು ಉದ್ಯೋಗಿಗಳ ಸ್ಥಳಾಂತರ ಪೂರ್ಣಗೊಂಡಿದ್ದು, ನಾವೀನ್ಯತೆಯ ಔಷಧೋಪಚಾರಗಳ ಲಭ್ಯತೆಯನ್ನು ವಿಸ್ತರಿಸುವುದು ಹಾಗೂ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಕಂಪನಿಯ ಬೆಳವಣಿಗೆಯ ಮುಂದಿನ ಹಂತಕ್ಕೆ ಇದು ನಾಂದಿ ಹಾಡಿದೆ ಎಂದು ಆಸ್ಟ್ರಾಜೆನೆಕಾ ತಿಳಿಸಿದೆ. ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಕಂಪನಿಯ ವಕ್ತಾರರು, ಪ್ರಮುಖ ಆರೋಗ್ಯ ಸಂಸ್ಥೆಗಳು, ಪಾಲುದಾರರು, ನೀತಿ ನಿರೂಪಣಾ ವ್ಯವಸ್ಥೆಗಳು ಹಾಗೂ ಹಣಕಾಸು ಕ್ಷೇತ್ರದ ವ್ಯವಸ್ಥೆಗಳಿಗೆ ಸಮೀಪದಲ್ಲಿರುವುದರಿಂದ, ದೇಶದ ಅತ್ಯಂತ ಪ್ರಮುಖ ಆರೋಗ್ಯ ಅಗತ್ಯಗಳನ್ನು ಪೂರೈಸಲು ನಮಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಎಸ್‌ಬಿಐ ಡೇಟಾ ಡಾರ್ಕ್ ವೆಬ್‌ನಲ್ಲಿ ಸೋರಿಕೆ: 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಪತ್ತೆ

ಹೊಸ ಕಾರ್ಪೊರೇಟ್ ಕಚೇರಿಯು 25,600 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ವೈದ್ಯಕೀಯ ವ್ಯವಹಾರಗಳು, ಕಾರ್ಯತಂತ್ರ, ಮಾರುಕಟ್ಟೆ ಮತ್ತು ವ್ಯವಹಾರ ನಿರ್ವಹಣೆ, ಮಾನವ ಸಂಪನ್ಮೂಲ ಹಾಗೂ ಕಾರ್ಪೊರೇಟ್ ವ್ಯವಹಾರಗಳು ಸೇರಿದಂತೆ ವಿವಿಧ ವಿಭಾಗಗಳ ಸುಮಾರು 300 ಉದ್ಯೋಗಿಗಳಿಗೆ ನೆಲೆಯಾಗಲಿದೆ ಎಂದು ಕಂಪನಿಯ ಪ್ರತಿನಿಧಿ ತಿಳಿಸಿದ್ದಾರೆ. ನಮ್ಮ ವಾಣಿಜ್ಯ ಮಾರಾಟ ವಿಭಾಗವು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಬೆಂಗಳೂರು ಆಸ್ಟ್ರಾಜೆನೆಕಾಗೆ ಪ್ರಮುಖ ಕೇಂದ್ರವಾಗಿ ಮುಂದುವರಿಯಲಿದೆ. ನಗರದ ಕೇಂದ್ರದಿಂದಲೇ ನಮ್ಮ ಜಾಗತಿಕ ಕಾರ್ಯಾಚರಣೆಗಳ ಪ್ರಮುಖ ಭಾಗಗಳಿಗೆ ಬೆಂಬಲ ನೀಡಲಾಗುತ್ತಿದ್ದು, ಮುಂದೆಯೂ ಬೆಂಗಳೂರು ನಮ್ಮ ಕಾರ್ಯತಂತ್ರದ ನೆಲೆಗಳಲ್ಲಿ ಒಂದಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us