ನವದೆಹಲಿ, ಅಕ್ಟೋಬರ್ 29: ಎಪತ್ತು ವರ್ಷ ವಯಸ್ಸಿನ ಗಡಿ ದಾಟಿದ ವೃದ್ದರಿಗೆ ಆಯುಷ್ಮಾನ್ ಭಾರತ್ ಸ್ಕೀಮ್ ಅನ್ನು ಜಾರಿ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಈ ಸ್ಕೀಮ್ ವಿಸ್ತರಣೆಗೆ ಚಾಲನೆ ನೀಡಿದರು. ಯಾವುದೇ ಸಮುದಾಯದ, ಯಾವುದೇ ಆರ್ಥಿಕ ಸ್ತರಕ್ಕೆ ಸೇರಿದ ವೃದ್ಧರು ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯ ಮತ್ತು ಜನರಿಗೆಂದು ರೂಪಿಸಲಾಗಿದ್ದ ಈ ಸ್ಕೀಮ್ ಅನ್ನು ಈಗ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ವಿಸ್ತರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿ ನಗರಿ ದೆಹಲಿಯಲ್ಲಿ ಇಂದು ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಸ್ಕೀಮ್ ವಿಸ್ತರಣೆ ಸೇರಿದಂತೆ 12,850 ಕೋಟಿ ರೂ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಕೆಲ ಯೋಜನೆಗಳು ಆರಂಭವಾದರೆ, ಇನ್ನೂ ಕೆಲ ಯೋಜನೆಗಳಿಗೆ ಅಡಿಗಲ್ಲು ಹಾಕಲಾಗಿದೆ.
ವಿವಿಧ ಯೋಜನೆಗಳ ಉದ್ಘಾಟನೆ ವೇಳೆ ಮಾತನಾಡಿದ ನರೇಂದ್ರ ಮೋದಿ, ದೆಹಲಿ ಮತ್ತು ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಸ್ಕೀಮ್ ಲಭ್ಯ ಇರುವುದಿಲ್ಲ ಎಂದು ವಿಷಾದಿಸಿದರು.
ಇದನ್ನೂ ಓದಿ: ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಈ ಎರಡು ರಾಜ್ಯಗಳ ಸರ್ಕಾರಗಳು ಆಯುಷ್ಮಾನ್ ಭಾರತ್ ಸ್ಕೀಮ್ ಅನ್ನು ಜಾರಿಗೊಳಿಸುತ್ತಿಲ್ಲ. ಈ ಕಾರಣಕ್ಕೆ ಅಲ್ಲಿ ಸ್ಕೀಮ್ ಲಭ್ಯ ಇಲ್ಲ. ‘ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿರುವ 70 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಯೋವೃದ್ಧರಿಗೆ ನಾನು ಕ್ಷಮೆ ಯಾಚಿಸುತ್ತೇನೆ. ರಾಜಕೀಯ ಕಾರಣಕ್ಕೆ ನಿಮ್ಮ ರಾಜ್ಯ ಸರ್ಕಾರಗಳು ಯೋಜನೆ ಜಾರಿಗೊಳಿಸುತ್ತಿಲ್ಲ’ ಎಂದು ನರೇಂದ್ರ ಮೋದಿ ಹೇಳಿದರು.
ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರೂ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ವಯೋವೃದ್ಧರು ವಯ ವಂದನ ಕಾರ್ಡ್ ಅನ್ನು ಪಡೆದುಕೊಳ್ಳಬೇಕು. ಆ ಕಾರ್ಡ್ ಇಟ್ಟುಕೊಂಡು ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ