10,000 ರೂಪಾಯಿ ಹೂಡಿಕೆ ಮಾಡಿ, 2 ಕೋಟಿ ರೂಪಾಯಿ ರಿಟರ್ನ್ ಪಡೆದ ಉದಾಹರಣೆ ಎಲ್ಲಾದರೂ ಕೇಳಿದ್ದೀರಾ? ಷೇರುಪೇಟೆಯಲ್ಲಿ ಅಂಥ ಹಲವು ರತ್ನಗಳಿವೆ. ಕಾಲ ಕಳೆದಂತೆ ಹೂಡಿಕೆದಾರರನ್ನು ಕೋಟ್ಯಧಿಪತಿ ಮಾಡಿದ ಕಂಪೆನಿಗಳವು. ಅಂಥದ್ದೇ ಒಂದು ಕಂಪೆನಿ ಬಜಾಜ್ ಫೈನಾನ್ಸ್. ಈ ಷೇರಿನ ಬೆಲೆ ಶೇ 2,16,466 ಅಥವಾ 2165 ಪಟ್ಟು ಹೆಚ್ಚಳವಾಗಿ, 20 ವರ್ಷದಲ್ಲಿ ರೂ. 5,484.75 ಮುಟ್ಟಿದೆ. ಅಡ್ಜಸ್ಟೆಡ್ ಷೇರು ಬೆಲೆ 2001ರ ಏಪ್ರಿಲ್ನಲ್ಲಿ ರೂ. 2.53 ಇತ್ತು. ಇದೇ ಅವಧಿಯಲ್ಲಿ ಬಿಎಸ್ಇ ಸೆನ್ಸೆಕ್ಸ್ 1,354 ಗಳಿಕೆ ಕಂಡಿದೆ.
ಕೋವಿಡ್-19 ಬಿಕ್ಕಟ್ಟಿನ ಅನಿಶ್ಚಿತತೆ ಮಧ್ಯೆಯೂ ಷೇರು ಪೇಟೆ ವಿಶ್ಲೇಷಕರು ಸಕಾರಾತ್ಮಕ ಭಾವವನ್ನೇ ಈ ಕಂಪೆನಿಯ ಪರ್ಫಾರ್ಮೆನ್ಸ್ ಬಗ್ಗೆ ಹೊಂದಿದ್ದಾರೆ. ಏಪ್ರಿಲ್ 27ನೇ ತಾರೀಕು ಫಲಿತಾಂಶ ಪ್ರಕಟಿಸಿರುವ ಬಜಾಜ್ ಫೈನಾನ್ಸ್, ಶೇ 42ರಷ್ಟು ಬೆಳವಣಿಗೆ ದಾಖಲಿಸಿ, ಮಾರ್ಚ್ ಕೊನೆಗೆ ನಾಲ್ಕನೇ ತ್ರೈಮಾಸಿಕದಲ್ಲಿ 1347 ಕೋಟಿ ರೂಪಾಯಿ ಕನ್ಸಾಲಿಡೇಟೆಡ್ ನಿವ್ವಳ ಲಾಭ ಗಳಿಸಿದೆ. ಇದಕ್ಕೂ ಮುಂಚಿನ ವರ್ಷದ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ 948 ಕೋಟಿ ರೂಪಾಯಿ ಲಾಭ ಮಾಡಿತ್ತು.
ಕಳೆದ ಒಂದು ವರ್ಷದಲ್ಲಿ ಬಜಾಜ್ ಫೈನಾನ್ಸ್ ಕಂಪೆನಿ ಷೇರು ಶೇ 139ರಷ್ಟು ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಸೆನ್ಸೆಕ್ಸ್ ಶೇ 52ರಷ್ಟು ಮೇಲೇರಿದೆ. ಅದೇ ರೀತಿ ಕಳೆದ ಹತ್ತು ವರ್ಷದಲ್ಲಿ ಕಂಪೆನಿಯು ಶೇ 7,963ರಷ್ಟು ಬೆಳವಣಿಗೆ ದಾಖಲಿಸಿದ್ದರೆ, ಸೂಚ್ಯಂಕವು ಶೇ 160ರಷ್ಟು ಪ್ರಗತಿ ಕಂಡಿದೆ. ಸದ್ಯಕ್ಕೆ ಜೆಎಂ ಫೈನಾನ್ಷಿಯಲ್ನಿಂದ ಬಜಾಜ್ ಫೈನಾನ್ಸ್ಗೆ 5,750ರ ಗುರಿ ನಿಗದಿಪಡಿಸಿ ಖರೀದಿಗೆ ಶಿಫಾರಸು ಮಾಡಲಾಗಿದೆ. ಇನ್ನು ಕಂಪೆನಿ ಕನ್ಸಾಲಿಡೇಟೆಡ್ ನಿವ್ವಳ ಲಾಭ ವಾರ್ಷಿಕ ಬೆಳವಣಿಗೆ ದರವು ಕಳೆದ 6 ವರ್ಷದಲ್ಲಿ ಶೇ 30ರ ದರದಲ್ಲಿ ಬೆಳೆದಿದೆ. FY21ರಲ್ಲಿ ಬಜಾಜ್ ಫೈನಾನ್ಸ್ ನಿವ್ವಳ ಲಾಭ ರೂ. 4419.82 ಕೋಟಿ ಇದ್ದರೆ, FY15ರಲ್ಲಿ ರೂ. 897.88 ಕೋಟಿ ಇತ್ತು.
ಬ್ರೋಕರೇಜ್ ಶಿಫಾರಸು
ಮೋತಿಲಾಲ್ ಓಸ್ವಾಲ್ನಿಂದ ಷೇರನ್ನು ಖರೀದಿಗೆ ಶಿಫಾರಸು ಮಾಡಿದ್ದು, ರೂ. 5865 ಬೆಲೆಗೆ ಗುರಿ ನಿಗದಿ ಮಾಡಲಾಗಿದೆ.
(ಈ ಲೇಖನ ಮಾಹಿತಿ ಉದ್ದೇಶಕ್ಕಾಗಿಯೇ ವಿನಾ ಷೇರು ಖರೀದಿ ಶಿಫಾರಸಲ್ಲ. ಒಂದು ವೇಳೆ ಖರೀದಿಸಿ ನಷ್ಟ ಸಂಭವಿಸಿದಲ್ಲಿ ಕಂಪೆನಿಯಾಗಲೀ ಲೇಖಕರಾಗಲೀ ಜವಾಬ್ದಾರರಲ್ಲ)
(ಮಾಹಿತಿ: ಮನಿ9.ಕಾಮ್)
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
( Investment of Rs 10,000 made 20 years ago become Rs 2 crore in Bajaj Finance shares)