ಬೆಂಗಳೂರು: ಆದಾಯ ತೆರಿಗೆ ನಿಯಮಗಳಡಿ (Icome Tax Rules) ಬೆಂಗಳೂರನ್ನು (Bengaluru) ಕೂಡ ಮಹಾನಗರ ಅಥವಾ ಮೆಟ್ರೋ ಸಿಟಿ (Metro City) ಎಂದು ಪರಿಗಣಿಸುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಇತ್ತೀಚೆಗೆ ಸಂಸತ್ನಲ್ಲಿ ಹಣಕಾಸು ಸಚಿವರನ್ನು ಉದ್ದೇಶಿಸಿ ಮನವಿ ಮಾಡಿದ್ದರು. ದೆಹಲಿ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾಗಳ ಸಾಲಿಗೆ ಬೆಂಗಳೂರು ಹಾಗೂ ಇತರ ನಗರಗಳನ್ನು ಸೇರಿಸಿದಲ್ಲಿ ಕೋಟ್ಯಂತರ ಮಧ್ಯಮ ವರ್ಗದ ಸಂಬಳದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಬೆಂಗಳೂರು ಹಾಗೂ ವೇಗವಾಗಿ ಬೆಳೆಯುತ್ತಿರುವ ಇತರ ನಗರಗಳನ್ನು ಮಹಾನಗರಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಮಧ್ಯಮ ವೇತನದಾರ ವರ್ಗದ ಹಿತಾಸಕ್ತಿ ಕಾಯುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದೇನೆ. ಮನೆ ಬಾಡಿಗೆ ಭತ್ಯೆಯನ್ನು ಶೇಕಡಾ 40 ರಿಂದ 50ಕ್ಕೆ ಏರಿಸುವಂತೆ ಕೋರಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದರು. ಇದರಿಂದ ಉದ್ಯೋಗಿಗಳಿಗೆ, ಮಧ್ಯಮ ವರ್ಗದವರಿಗೆ ಪ್ರಯೋಜನವೇನು? ಇಲ್ಲಿದೆ ಮಾಹಿತಿ.
ಪ್ರಸ್ತುತ, ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ದೆಹಲಿ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾಗಳನ್ನು ಮೆಟ್ರೋ ನಗರಗಳೆಂದು ಪರಿಗಣಿಸಲಾಗಿದೆ. ಈ ನಗರಗಳ ವೇತನದಾರ ವರ್ಗದ ಮೂಲ ವೇತನದ ಶೇಕಡಾ 50ರಷ್ಟನ್ನು ಮನೆ ಬಾಡಿಗೆ ಭತ್ಯೆ ಎಂದು ಪರಿಗಣಿಸಲಾಗುತ್ತಿದ್ದು, ಅದಕ್ಕೆ ಅವರು ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಆದರೆ, ಮೆಟ್ರೋ ನಗರಗಳೆಂದು ಪರಿಗಣಿಸಿರದ ನಗರಗಳ ವೇತನದಾರ ವರ್ಗದವರು ಮೂಲ ವೇತನದ ಶೇಕಡಾ 40ರಷ್ಟಕ್ಕೆ ಮಾತ್ರ ಮನೆ ಬಾಡಿಗೆ ಭತ್ಯೆ ವಿನಾಯಿತಿ ಪಡೆಯಲು ಅವಕಾಶವಿದೆ. ಆದರೆ, ಮೆಟ್ರೊ ನಗರಗಳ ವೇತನ ವರ್ಗಕ್ಕೆ ಹೋಲಿಸಿದರೆ ಈ ನಗರಗಳ ಜನ ಪಡೆಯುವ ತೆರಿಗೆ ವಿನಾಯಿತಿ ಬಹು ಕಡಿಮೆ. ಬೆಂಗಳೂರಿನ ಉದ್ಯೋಗಿಗಳೂ ಇದಕ್ಕೆ ಹೊರತಲ್ಲ.
ಐಟಿ ನಿಯಮದ ಅಡಿಯಲ್ಲಿ ಬೆಂಗಳೂರನ್ನು ಮೆಟ್ರೋ ಅಥವಾ ಮಹಾ ನಗರವೆಂದು ಪರಿಗಣಿಸಿದಲ್ಲಿ ಇಲ್ಲಿ ಕೆಲಸ ಮಾಡುವ ಲಕ್ಷಾಂತರ ವೇತನ ವರ್ಗದ ತೆರಿಗೆದಾರರಿಗೆ ಪ್ರಯೋಜನವಾಗಲಿದೆ. ಇವರ ಮೂಲ ವೇತನದ ಶೇಕಡಾ 50ರಷ್ಟನ್ನು ಮನೆ ಭತ್ಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ತೆರಿಗೆ ವಿನಾಯಿತಿ ದೊರೆಯಲಿದೆ. ಬೆಂಗಳೂರು ನಗರವು ದೇಶದಲ್ಲೇ ಅತಿಹೆಚ್ಚು ವೇತನದಾರ ಮಧ್ಯಮ ವರ್ಗದ ಜನ ವಾಸಿಸುವ ಪ್ರದೇಶ ಎಂದು ಹೇಳಲಾಗಿದೆ.
ಇದನ್ನೂ ಓದಿ: Karnataka Startup Policy: ಸ್ಟಾರ್ಟಪ್ಗಳ ಉತ್ತೇಜನಕ್ಕೆ ಮಾಸ್ಟರ್ ಪ್ಲ್ಯಾನ್; 100 ಕೋಟಿ ರೂ. ನಿಧಿಗೆ ಸಚಿವ ಸಂಪುಟ ಅಸ್ತು
‘ಕರ್ನಾಟಕದ ಒಟ್ಟು ಜಿಡಿಪಿಗೆ ಬೆಂಗಳೂರಿನ 1.18 ಕೋಟಿ ಜನರ ಕೊಡುಗೆ ಶೇಕಡಾ 80ರಷ್ಟಿದೆ. ಬೆಂಗಳೂರಿನಲ್ಲಿ 47 ಐಟಿ-ಐಟಿಇಎಸ್ ವಿಶೇಷ ಆರ್ಥಿಕ ವಲಯ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಗಳು ಇದ್ದು ಭಾರತದ ಒಟ್ಟು ಐಟಿ ಆದಾಯಕ್ಕೆ ಶೇಕಡಾ 40ರಷ್ಟು ಕೊಡುಗೆ ನೀಡುತ್ತಿದೆ. ದೇಶದ ಹೆಚ್ಚಿನ ತಂತ್ರಜ್ಞಾನ ಕಂಪನಿಗಳೆಲ್ಲ ಬೆಂಗಳೂರಿನಲ್ಲೇ ಇವೆ. ದೇಶದ ಸೆಮಿಕಂಡಕ್ಟರ್ ಉತ್ಪಾದನೆಯ ಶೇಕಡಾ 80ರಷ್ಟು ಬೆಂಗಳೂರಿನಲ್ಲೇ ಆಗುತ್ತಿದೆ. 7,500 ನೋಂದಾಯಿತ ಸ್ಟಾರ್ಟಪ್ಗಳಿವೆ’ ಎಂದೂ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದರು.
ಐಟಿ ನಿಯಮಗಳ ಅಡಿಯಲ್ಲಿ ಬೆಂಗಳೂರು ಮೆಟ್ರೋ ನಗರ ಅಲ್ಲ ಎಂದ ಕೂಡಲೇ ಇದ್ಯಾವ ಲೆಕ್ಕಾಚಾರ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಭಾರತದ ಸಂವಿಧಾನಕ್ಕೆ ಮಾಡಿರುವ 74ನೇ ತಿದ್ದುಪಡಿಯ ಪ್ರಕಾರ ದೇಶದಲ್ಲಿ 23 ಮೆಟ್ರೋ ನಗರಗಳಿವೆ. ಅದರಲ್ಲಿ ಬೆಂಗಳೂರು ಸಹ ಸೇರಿದೆ! ಆದರೆ ಅದಕ್ಕಿಂತಲೂ ಹಳೆಯದಾದ ಐಟಿ ಕಾಯ್ದೆಯ ಪ್ರಕಾರ ಮಾತ್ರ ಈ ನಗರಗಳು ಮೆಟ್ರೋ ಸಿಟಿಗಳಲ್ಲ. ಅಂದರೆ, ಸಂವಿಧಾನಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಗುಣವಾಗಿ ಐಟಿ ಕಾಯ್ದೆಯಲ್ಲಿಯೂ ಬದಲಾವಣೆ ಮಾಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಜತೆಗೆ ಐಟಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ ಅಗತ್ಯವನ್ನೂ ಎತ್ತಿತೋರಿಸಿದೆ.
1992ರಲ್ಲಿ ಸಂವಿಧಾನಕ್ಕೆ ಮಾಡಲಾದ 74ನೇ ತಿದ್ದುಪಡಿಯ ಪ್ರಕಾರ, 10 ಲಕ್ಷ ಹಾಗೂ ಅದಕ್ಕಿಂತ ಹೆಚ್ಚುನ ಜನರು ವಾಸಿಸುವ ನಗರವನ್ನು ಮೆಟ್ರೋಪಾಲಿಟನ್ ಸಿಟಿ ಎಂದು ಪರಿಗಣಿಸಬಹುದಾಗಿದೆ. ಈ ವ್ಯಾಖ್ಯಾನದಡಿ ದೇಶದಲ್ಲಿ 23 ಮೆಟ್ರೋ ನಗರಗಳಿವೆ ಎಂದು ಆಗಲೇ ಗುರುತಿಸಲಾಗಿತ್ತು. ಬೆಂಗಳೂರನ್ನೂ ಮೆಟ್ರೋ ನಗರ ಎಂದೇ ಪರಿಗಣಿಸಲಾಗಿತ್ತು. ಸದ್ಯ ಬೆಂಗಳೂರಿನಲ್ಲಿ ಸುಮಾರು 1.30 ಕೋಟಿ ಸಂಖ್ಯೆಯ ಜನರು ವಾಸಿಸುತ್ತಿದ್ದಾರೆ ಎಂಬುದು ಕೆಲವು ಮೂಲಗಳ ದತ್ತಾಂಶಗಳಿಂದ ತಿಳಿದುಬಂದಿದೆ.
ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ಗೋರಖ್ಪುರ, ಹೈದರಾಬಾದ್, ಜೈಪುರ, ಜೋಧ್ಪುರ, ಕಾನ್ಪುರ, ಕೊಚ್ಚಿ, ಕೋಲ್ಕತ್ತ, ಕೋಝಿಕ್ಕೋಡ್, ಮದುರೈ, ಮುಂಬೈ, ನಾಗ್ಪುರ, ದಿ ನ್ಯಾಷನಲ್ ಕ್ಯಾಪಿಟಲ್ ರೀಜನ್, ಪಟ್ನಾ, ಪುಣೆ, ರಾಯ್ಪುರ, ಸೇಲಂ, ಸೂರತ್, ತಿರುವನಂತಪುರ ಹಾಗೂ ವಿಶಾಖಪಟ್ಟಣಗಳನ್ನು ಸಂವಿಧಾನಕ್ಕೆ ತಿದ್ದುಪಡಿ ಮಾಡಿದ ಸಂದರ್ಭದಲ್ಲಿ ಮೆಟ್ರೋಪಾಲಿಟನ್ ನಗರಗಳೆಂದು ಪರಿಗಣಿಸಲಾಗಿತ್ತು.
Published On - 1:33 pm, Fri, 23 December 22