PhonePe: ಸಂಪೂರ್ಣವಾಗಿ ಪ್ರತ್ಯೇಕಗೊಂಡ ಫ್ಲಿಪ್​ಕಾರ್ಟ್, ಫೋನ್ ಪೇ

Flipkart, PhonePe Separation; ಫಿನ್​ಟೆಕ್ ಕಂಪನಿ ಫೋನ್ ಪೇ ಮತ್ತು ಇ-ಕಾಮರ್ಸ್ ಕಂಪನಿ ಫ್ಲಿಪ್​ಕಾರ್ಟ್ ಸಂಪೂರ್ಣವಾಗಿ ಬೇರೆ ಬೇರೆಯಾಗಿವೆ. ಪ್ರತ್ಯೇಕಗೊಂಡಿರುವ ಬಗ್ಗೆ ಉಭಯ ಕಂಪನಿಗಳು ಜಂಟಿ ಪ್ರಕಟಣೆ ಬಿಡುಗಡೆ ಮಾಡಿವೆ.

PhonePe: ಸಂಪೂರ್ಣವಾಗಿ ಪ್ರತ್ಯೇಕಗೊಂಡ ಫ್ಲಿಪ್​ಕಾರ್ಟ್, ಫೋನ್ ಪೇ
ಫೋನ್ ಪೇ
Updated By: Ganapathi Sharma

Updated on: Dec 23, 2022 | 4:15 PM

ನವದೆಹಲಿ: ಫಿನ್​ಟೆಕ್ ಕಂಪನಿ ಫೋನ್ ಪೇ (PhonePe) ಮತ್ತು ಇ-ಕಾಮರ್ಸ್ ಕಂಪನಿ ಫ್ಲಿಪ್​ಕಾರ್ಟ್ (Flipkart) ಸಂಪೂರ್ಣವಾಗಿ ಬೇರೆ ಬೇರೆಯಾಗಿವೆ. ಪ್ರತ್ಯೇಕಗೊಂಡಿರುವ ಬಗ್ಗೆ ಉಭಯ ಕಂಪನಿಗಳು ಜಂಟಿ ಪ್ರಕಟಣೆ ಬಿಡುಗಡೆ ಮಾಡಿವೆ. ಇನ್ನು ಮುಂದೆ ಎರಡೂ ಕಂಪನಿಗಳು ಪ್ರತ್ಯೇಕವಾಗಿ ಕಾರ್ಯಾಚರಿಸಲಿವೆ. ಆದರೆ, ಇವೆರಡರಲ್ಲಿಯೂ ವಾಲ್​ಮಾರ್ಟ್ (Walmart) ಅತಿಹೆಚ್ಚಿನ ಪಾಲು ಹೊಂದಿದೆ. ಈ ವಹಿವಾಟಿನ ಭಾಗವಾಗಿ ಫ್ಲಿಪ್​ಕಾರ್ಟ್ ಸಿಂಗಾಪುರ ಮತ್ತು ಫೋನ್​ ಪೇ ಸಿಂಗಾಪುರದ ಪಾಲುದಾರ ವಾಲ್​ಮಾರ್ಟ್ ಫೋನ್​ ಪೇ ಭಾರತದ ಷೇರುಗಳನ್ನು ನೇರವಾಗಿ ಖರೀದಿಸಿದೆ. ಇದರೊಂದಿಗೆ ಫೋನ್ ಪೇಯನ್ನು ಸಂಪೂರ್ಣವಾಗಿ ಭಾರತದಲ್ಲಿ ಕಾರ್ಯಾಚರಿಸುವ ಕಂಪನಿಯನ್ನಾಗಿ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ವರ್ಷ ಆರಂಭದಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

ಫೋನ್ ಪೇಯನ್ನು ಫ್ಲಿಪ್​ಕಾರ್ಟ್​ನ ಮಾಜಿ ಕಾರ್ಯನಿರ್ವಾಹಕರಾದ ಸಮೀರ್ ನಿಗಮ್, ರಾಹುಲ್ ಚರಿ ಹಾಗೂ ಬರ್ಜಿನ್ ಇಂಜಿನಿಯರ್ ಸ್ಥಾಪಿಸಿದ್ದರು. ಕಂಪನಿಯನ್ನು ಸಚಿನ್ ಹಾಗೂ ಸಂಜಯ್ ಬನ್ಸಲ್ ಖರೀದಿಸಿದ್ದರಿಂದ ನಂತರ ಅವರ ಒಡೆತನಕ್ಕೆ ಒಳಪಟ್ಟಿತ್ತು. 2018ರಲ್ಲಿ ಫ್ಲಿಪ್​ಕಾರ್ಟ್ ಅನ್ನು ವಾಲ್​ಮಾರ್ಟ್ ಖರೀದಿ ಮಾಡಿತು. ಫೋನ್​ ಪೇ ಸಹ ಈ ಒಪ್ಪಂದದ ಭಾಗವಾಗಿತ್ತು. ಎನ್​ಜಿಪೇ ಮತ್ತು ಎಫ್​ಎಕ್ಸ್ ಮಾರ್ಟ್ ಖರೀದಿಯ ನಂತರ ಫ್ಲಿಪ್​ಕಾರ್ಟ್ ಖರೀದಿಸಿದ ಅತಿದೊಡ್ಡ ಡಿಜಿಟಲ್ ಪಾವತಿ ಕಂಪನಿಯಾಗಿತ್ತು ಫೋನ್ ಪೇ.

ಇದನ್ನೂ ಓದಿ: ಐಟಿ ನಿಯಮ ಮಾತ್ರ ಬೆಂಗಳೂರು ಮೆಟ್ರೊ ನಗರವಲ್ಲ ಎನ್ನುತ್ತಿದೆ. ಇದೇಕೆ ಹೀಗೆ?

ಫ್ಲಿಪ್​ಕಾರ್ಟ್ ಅನೇಕ ಯಶಸ್ವಿ ಉದ್ಯಮಗಳನ್ನು ನಡೆಸಿದೆ ಮತ್ತು ಮಾಜಿ ಉದ್ಯೋಗಿಗಳು ಆರಂಭಿಸಿದ್ದ ಉದ್ದಿಮೆಗಳನ್ನು ಪರಿಣಾಮಕಾರಿಯಾಗಿ ನಡೆಸಿಕೊಂಡು ಬಂದಿದೆ. ಫೋನ್​ ಪೇ ಯಶಸ್ವಿ ಸಂಸ್ಥೆಯಾಗಿ ಬೆಳವಣಿಗೆ ಹೊಂದಿರುವ ಬಗ್ಗೆ ಹೆಮ್ಮೆಯಿದೆ ಎಂದು ಫ್ಲಿಪ್​ಕಾರ್ಟ್​ ಗ್ರೂಪ್​ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಕಂಪನಿಯು ಮುಂದಿನ ಹಂತದ ಹೂಡಿಕೆ ಯೋಜನೆಗಳ ಬಗ್ಗೆ ಎದುರುನೋಡುತ್ತಿದೆ. ವಿಮೆ, ಸಾಲ ನೀಡಿಕೆ, ಸಂಪತ್ತು ನಿರ್ವಹಣೆ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಿಂದ ಕೋಟ್ಯಂತರ ಭಾರತೀಯರಲ್ಲಿ ಹಣಕಾಸಿನ ಚಲಾವಣೆಯಾಗುವಂತೆ ನೋಡಿಕೊಳ್ಳಬಹುದಾಗಿದೆ ಎಂದು ಫೋನ್​ ಪೇ ಸಂಸ್ಥಾಪಕ ಸಮೀರ್ ನಿಗಮ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ