COVID-19 In China: ಕೋವಿಡ್ ಹೆಚ್ಚಳ; ಚೀನಾಕ್ಕೆ ಜ್ವರದ ಔಷಧ ರಫ್ತಿಗೆ ಸಿದ್ಧ ಎಂದ ಭಾರತ

| Updated By: Ganapathi Sharma

Updated on: Dec 23, 2022 | 10:10 AM

ವಿಶ್ವದಲ್ಲೇ ಅತಿಹೆಚ್ಚು ಔಷಧ ತಯಾರಿಸುವ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು, ಚೀನಾಕ್ಕೆ ಔಷಧ ರಫ್ತು ಮಾಡಲು ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

COVID-19 In China: ಕೋವಿಡ್ ಹೆಚ್ಚಳ; ಚೀನಾಕ್ಕೆ ಜ್ವರದ ಔಷಧ ರಫ್ತಿಗೆ ಸಿದ್ಧ ಎಂದ ಭಾರತ
ಔಷಧ ರಫ್ತು (ಸಾಂದರ್ಭಿಕ ಚಿತ್ರ)
Follow us on

ನವದೆಹಲಿ: ಚೀನಾದಲ್ಲಿ (China) ಕೋವಿಡ್-19 (COVID-19) ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆ ದೇಶಕ್ಕೆ ಜ್ವರದ ಔಷಧಗಳನ್ನು ರಫ್ತು ಮಾಡಲು ಸಿದ್ಧ ಎಂದು ಭಾರತದ ಔಷಧ ರಫ್ತು ಮಂಡಳಿ ತಿಳಿಸಿದೆ. ಚೀನಾದಲ್ಲಿ ಈ ತಿಂಗಳ ಆರಂಭದಲ್ಲಿ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡಿದ್ದು, ಜ್ವರದ ಔಷಧಗಳಿಗೆ ಹಾಗೂ ಕೋವಿಡ್ ಪರೀಕ್ಷಾ ಕಿಟ್​​​ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಮೆಡಿಕಲ್​​ಗಳಲ್ಲಿ ಖರೀದಿಗಳ ಮೇಲೆ ಮಿತಿ ಹೇರಲಾಗಿದ್ದು, ಉತ್ಪಾದನೆ ಹೆಚ್ಚಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಸೂಚಿಸಲಾಗಿತ್ತು.

‘ಐಬ್ರೂಫೇನ್ ಮತ್ತು ಪ್ಯಾರಸಿಟಮೋಲ್​​ ಔಷಧ ತಯಾರಿಕಾ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಎರಡು ಔಷಧಗಳ ಕೊರತೆ ಚೀನಾದಲ್ಲಿದ್ದು, ಬೇಡಿಕೆ ಹೆಚ್ಚಾಗಿದೆ’ ಎಂದು ಭಾರತೀಯ ಔಷಧ ರಪ್ತು ಉತ್ತೇಜನಾ ಮಂಡಳಿಯ (Pharmexcil) ಅಧ್ಯಕ್ಷ ಶಾಹಿಲ್ ಮುಂಜಲ್ ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಕುರಿತು ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಔಷಧ ತಯಾರಿಸುವ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು, ಚೀನಾಕ್ಕೆ ಔಷಧ ರಫ್ತು ಮಾಡಲು ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ದಿನಕ್ಕೆ 5 ಸಾವಿರ ಸಾವು, 10 ಲಕ್ಷ ಮಂದಿಗೆ ಸೋಂಕು: ಜಗತ್ತಿನಾದ್ಯಂತ ತಲ್ಲಣ ಹುಟ್ಟಿಸುತ್ತಿದೆ ಚೀನಾದ ಕೊವಿಡ್ ಪರಿಸ್ಥಿತಿ

‘ಚೀನಾದಲ್ಲಿನ ಕೋವಿಡ್ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ. ಔಷಧ ಕ್ಷೇತ್ರದಲ್ಲಿ ನಾವು ಸದಾ ಇತರ ದೇಶಗಳಿಗೆ ನೆರವಾಗಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

2021-22ರಲ್ಲಿ ಭಾರತದ ಒಟ್ಟು ಔಷಧ ರಫ್ತಿನ ಶೇಕಡಾ 1.4ರಷ್ಟು ಮಾತ್ರವೇ ಚೀನಾಕ್ಕೆ ರಫ್ತು ಮಾಡಲಾಗಿದೆ. ಅಮೆರಿಕಕ್ಕೆ ಅತಿಹೆಚ್ಚು ರಫ್ತು ಮಾಡಲಾಗಿದೆ ಎಂಬುದು ಫಾರ್ಮೆಕ್ಸಿಲ್​ ಅಂಕಿಅಂಶಗಳಿಂದ ತಿಳಿದುಬಂದಿದೆ. ಕೋವಿಡ್ ಸಾಂಕ್ರಾಮಿಕವು ವಿಶ್ವದ ಹಲವೆಡೆ ಏರಿಕೆ ಕಾಣುತ್ತಿದ್ದಂತೆಯೇ ಕಳೆದ ಕೆಲವು ದಿನಗಳಲ್ಲಿ ಭಾರತದ ಔಷಧ ಕಂಪನಿಗಳ ಷೇರು ಮೌಲ್ಯದಲ್ಲಿಯೂ ವೃದ್ಧಿ ಕಾಣಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ