Covid 4th Wave: ಚೀನಾದಿಂದ ಭಾರತಕ್ಕೆ ಬರುವ ಎಲ್ಲ ವಿಮಾನಗಳ ನಿರ್ಬಂಧಕ್ಕೆ ಆಗ್ರಹ, ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳ ಮಹಾಪೂರ
‘ನನ್ನ ಅಪ್ಪ-ಅಮ್ಮ ಮತ್ತು ಸೊಸೆಯನ್ನು ಕೊವಿಡ್ನಿಂದ ಕಳೆದುಕೊಂಡೆ. ಅದೆಂಥ ಮಾರಣಾಂತಿಕ ಕಾಯಿಲೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು’ ಎಂದು ನೀನಾ ಸೇನ್ ಎನ್ನುವವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು: ಚೀನಾದಲ್ಲಿ ಕೊವಿಡ್ ಸೋಂಕು (Covid Infection) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿಶ್ವದಾದ್ಯಂತ ಭೀತಿ ವ್ಯಕ್ತವಾಗುತ್ತಿದೆ. ಕೊರೊನಾದ ಮೊದಲ ಮೂರು ಅಲೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಭಾರತದಲ್ಲಿ ಇದೀಗ ತಾನೆ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದು, ಮತ್ತೊಂದು ಲಾಕ್ಡೌನ್ ನಿರ್ಬಂಧ ವಿಧಿಸಿದರೆ ಆರ್ಥಿಕ ಸ್ಥಿತಿಗತಿ (Economic Situation) ಏನಾಗಬಹುದು ಎಂಬ ಬಗ್ಗೆ ಯಾರಲ್ಲಿಯೂ ಸ್ಪಷ್ಟ ಉತ್ತರವಿಲ್ಲ. ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿರುವ ಚೀನಾದಿಂದ ಉಳಿದೆಲ್ಲಾ ದೇಶಗಳು ಕಷ್ಟಕ್ಕೆ ಸಿಲುಕುವಂತೆ ಆಗಬಾರದು ಎನ್ನುವ ಆಗ್ರಹ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಚೀನಾದ ಪರಿಸ್ಥಿತಿಯನ್ನು ಬಿಂಬಿಸುವ ಚಿತ್ರಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಜನರು ಹಂಚಿಕೊಂಡಿದ್ದಾರೆ. ಚೀನಾದಲ್ಲಿ ಆಸ್ಪತ್ರೆಗಳು ಭರ್ತಿಯಾಗಿರುವುದು, ಶವಾಗಾರಗಳ ಎದುರು ಪಾಳಿ ನಿಂತಿರುವ ದೃಶ್ಯಗಳನ್ನೂ ಹಲವರು ಶೇರ್ ಮಾಡಿಕೊಂಡಿದ್ದಾರೆ.
‘ಈಗ ನಾವು ಹೆಚ್ಚು ಜಾಗರೂಕರಾಗಿರಬೇಕು. ಸರ್ಕಾರಕ್ಕೆ ನಮ್ಮಿಂದ ಒಂದು ಪ್ರಬಲ ಬೇಡಿಕೆಯಿದೆ. ಚೀನಾದಿಂದ ಬರುವ ಎಲ್ಲ ವಿಮಾನಗಳನ್ನು ತಕ್ಷಣ ರದ್ದುಪಡಿಸಿ. ಪ್ರಸ್ತುತ ಭಾರತದಿಂದ ಚೀನಾಕ್ಕೆ ನೇರ ವಿಮಾನ ಸಂಪರ್ಕವಿಲ್ಲ. ಆದರೆ ನೆರೆದೇಶಗಳ ಸಂಪರ್ಕ ವಿಮಾನಗಳ ಮೂಲಕ ಚೀನಾಕ್ಕೆ ಭೇಟಿ ನೀಡುವುದು, ಚೀನಾದಿಂದ ಭಾರತಕ್ಕೆ ಬರುವ ಸಾದ್ಯವಿದೆ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಸಾವಿರಾರು ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಶ್ಕರಣ್ ಸಿಂಗ್ ಭಂಡಾರಿ ಎನ್ನುವವರು ಈ ಸಂಬಂಧ ಮಾಡಿರುವ ಟ್ವೀಟ್ ಹೆಚ್ಚು ಸದ್ದು ಮಾಡಿದೆ. ‘ಚೀನಾದ ಕೊವಿಡ್ ಪರಿಸ್ಥಿತಿ ನಿಜವೇ ಆಗಿದ್ದರೆ ತಕ್ಷಣ ಅಲ್ಲಿಂದ ಬರುವ ವಿಮಾನಗಳನ್ನು ರದ್ದುಪಡಿಸಬೇಕು’ ಎಂದು ಇಶ್ಕರಣ್ ಸಿಂಗ್ ಭಂಡಾರಿ ಎನ್ನುವವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದರೆ, 1,600ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ.
‘ಈ ನಿರ್ಧಾರವನ್ನು ಸರ್ಕಾರ ತಕ್ಷಣ ಪ್ರಕಟಿಸಬೇಕಿದೆ. ಕಳೆದ ಬಾರಿಯೂ ಅತಿಮುಖ್ಯ ನಿರ್ಧಾರ ತೆಗೆದುಕೊಳ್ಳುವುದು ತಡವಾಗಿತ್ತು’ ಎಂದು ಟ್ವಿಟರ್ ಬಳಕೆದಾರರೊಬ್ಬರು ನೆನಪಿಸಿಕೊಂಡಿದ್ದಾರೆ. ‘ಚೀನಾದಲ್ಲಿ Bf7 COVID ಪ್ರಕರಣಗಳು ಆತಂಕಕಾರಿ ಎನಿಸುವಷ್ಟು ಹೆಚ್ಚಾಗುತ್ತಿದೆ. 2019ರ ಅಂತ್ಯದಲ್ಲಿ ಇದೇ ರೀತಿ ಆಗಿತ್ತು. ತಪ್ಪಿನಿಂದ ನಾವು ಪಾಠ ಕಲಿಯಬೇಕಲ್ಲವೇ’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್.ಜಯಶಂಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ‘ಈಗಾಗಲೇ ತಡವಾಗಿದೆ. ಇಷ್ಟೊತ್ತಿಗೆ ವಿಮಾನಗಳನ್ನು ನಿರ್ಬಂಧಿಸಬೇಕಿತ್ತು. ನನ್ನ ಅಪ್ಪ-ಅಮ್ಮ ಮತ್ತು ಸೊಸೆಯನ್ನು ಕೊವಿಡ್ನಿಂದ ಕಳೆದುಕೊಂಡೆ. ಅದೆಂಥ ಮಾರಣಾಂತಿಕ ಕಾಯಿಲೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು’ ಎಂದು ನೀನಾ ಸೇನ್ ಎನ್ನುವವರು ಬರೆದುಕೊಂಡಿದ್ದಾರೆ.
If reports of China Covid cases is true, time we immediately ban all flights from China.
— Ishkaran Singh Bhandari (@ishkarnBHANDARI) December 20, 2022
ಇದನ್ನೂ ಓದಿ: ದಿನಕ್ಕೆ 5 ಸಾವಿರ ಸಾವು, 10 ಲಕ್ಷ ಮಂದಿಗೆ ಸೋಂಕು: ಜಗತ್ತಿನಾದ್ಯಂತ ತಲ್ಲಣ ಹುಟ್ಟಿಸುತ್ತಿದೆ ಚೀನಾದ ಕೊವಿಡ್ ಪರಿಸ್ಥಿತಿ
ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಪ್ರಪಂಚದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು (Covid-19) ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡಿ 22ರಂದು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದು, ಇದೀಗ ಕೇಂದ್ರ ಸರ್ಕಾರ ವಿದೇಶದಿಂದ ಆಗಮಿಸುವವರಿಗೆ ಹೊಸ ಮಾರ್ಗಸೂಚಿ (guidelines) ಪ್ರಕಟಿಸಿದೆ.
ವಿದೇಶದಿಂದ ಬರುವವರು ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು. ಏರ್‌ಪೋರ್ಟ್‌ಗಳಲ್ಲಿ ಮಾಸ್ಕ್ ಹಾಗೂ ದೈಹಿಕ ಅಂತರ ಪಾಲಿಸಬೇಕು. ಏರ್‌ಪೋರ್ಟ್‌ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಕೊವಿಡ್ ಗುಣಲಕ್ಷಣ ಕಂಡುಬಂದ್ರೆ ಐಸೋಲೇಷನ್ ಕಡ್ಡಾಯ. ಇನ್ಮುಂದೆ ಏರ್‌ಪೋರ್ಟ್‌ಗಳಲ್ಲಿ ಱಂಡಮ್ ಟೆಸ್ಟ್ ಕಡ್ಡಾಯ. ಪಾಸಿಟಿವ್ ಬಂದ್ರೆ ಜಿನೋಮಿಕ್ ಸೀಕ್ವೆನ್ಸ್ ಕಡ್ಡಾಯ. 12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್ ಅಗತ್ಯವಿಲ್ಲ. 12 ವರ್ಷದೊಳಗಿನವರಿಗೆ ಸೋಂಕಾದ್ರೆ ಮನೆಯಲ್ಲೇ ಐಸೋಲೇಷನ್.
ಇದನ್ನೂ ಓದಿ: ಕೊವಿಡ್ ವ್ಯಾಪಿಸಿದ ನಂತರ ಚೀನಾದಲ್ಲಿ ನಿಂಬೆಹಣ್ಣಿಗೆ ಭಾರೀ ಬೇಡಿಕೆ