AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಕ್ಕೆ 5 ಸಾವಿರ ಸಾವು, 10 ಲಕ್ಷ ಮಂದಿಗೆ ಸೋಂಕು: ಜಗತ್ತಿನಾದ್ಯಂತ ತಲ್ಲಣ ಹುಟ್ಟಿಸುತ್ತಿದೆ ಚೀನಾದ ಕೊವಿಡ್ ಪರಿಸ್ಥಿತಿ

ಚೀನಾದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಸರಾಸರಿ ಸೋಂಕು ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿದೆ.

ದಿನಕ್ಕೆ 5 ಸಾವಿರ ಸಾವು, 10 ಲಕ್ಷ ಮಂದಿಗೆ ಸೋಂಕು: ಜಗತ್ತಿನಾದ್ಯಂತ ತಲ್ಲಣ ಹುಟ್ಟಿಸುತ್ತಿದೆ ಚೀನಾದ ಕೊವಿಡ್ ಪರಿಸ್ಥಿತಿ
ಚೀನಾದಲ್ಲಿ ಕೊವಿಡ್ ವ್ಯಾಪಿಸಿದೆ.
TV9 Web
| Edited By: |

Updated on:Dec 23, 2022 | 6:33 AM

Share

ಬೀಜಿಂಗ್: ಕೊರೊನಾ ವೈರಸ್ ಸೋಂಕಿನ (Coronavirus) ಮೊದಲು ಮೂರು ಅಲೆಗಳಿಂದ ಬಚಾವಾಗಿದ್ದ ಚೀನಾ (China) ಇದೀಗ ವೈರಾಣು ಬಲೆಯಲ್ಲಿ ಸಿಲುಕಿದ್ದು, ಹೊರಬರುವ ಮಾರ್ಗ ಕಾಣದೆ ಪರಿತಪಿಸುತ್ತಿದೆ. ಚೀನಾದಲ್ಲಿ ಪ್ರತಿದಿನ ಸರಾಸರಿ 5,000 ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಪ್ರತಿದಿನ ವರದಿಯಾಗುತ್ತಿರುವ ಸರಾಸರಿ ಸೋಂಕು ಪ್ರಕರಣಗಳು 10 ಲಕ್ಷ ದಾಟಿದೆ. ಜಗತ್ತಿನಲ್ಲಿ ಈವರೆಗೆ ವರದಿಯಾಗಿದ್ದ ಸೋಂಕು ಪ್ರಸರಣದ ದಾಖಲೆಗಳನ್ನು ಇದು ಮುರಿದಿದೆ. ಚೀನಾ ಮೇಲೆ ಹಲವು ಕಾರಣಗಳಿಂದ ಅವಲಂಬಿತವಾಗಿರುವ ದೇಶಗಳಲ್ಲಿ ಆರ್ಥಿಕತೆ ಕುಸಿದು ಬೀಳುವ ಆತಂಕ ಎದುರಾಗಿದೆ.

ಚೀನಾದ ಜನಸಂಖ್ಯೆ ಸುಮಾರು 140 ಕೋಟಿ. ಸೋಂಕು ಹರಡುವಿಕೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಜನವರಿ ತಿಂಗಳ ಮಧ್ಯಭಾಗದ ಹೊತ್ತಿಗೆ ದಿನಕ್ಕೆ ಸರಾಸರಿ 37 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ ಎಂದು ಲಂಡನ್ ಮೂಲದ ಏರ್​ಫಿನಿಟಿ ಲಿಮಿಟೆಡ್​ನ ಸಮೀಕ್ಷೆಯು ತಿಳಿಸಿದೆ. ಮಾರ್ಚ್​​ ವೇಳೆಗೆ ದೈನಂದಿನ ಸೋಂಕು ಪ್ರಮಾಣ 42 ಲಕ್ಷಕ್ಕೆ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಈ ಅಂಕಿಅಂಶಗಳು ಚೀನಾ ಸರ್ಕಾರ ಒದಗಿಸುತ್ತಿರುವ ರಾಷ್ಟ್ರೀಯ ಸರಾಸರಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ. ಕೊವಿಡ್​ ವಿಚಾರದಲ್ಲಿ ಈವರೆಗೆ ಅನುಸರಿಸುತ್ತಿದ್ದ ಶೂನ್ಯ ಸಹಿಷ್ಣುತೆ ನೀತಿಯಿಂದ ಹೊರಬರುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದ ನಂತರ ಚೀನಾದಲ್ಲಿ ಏಕಾಏಕಿ ಸೋಂಕು ಪ್ರಕರಣಗಳು ಹೆಚ್ಚಾಗಿವೆ.

ಕಳೆದ ಬುಧವಾರ (ಡಿ 21) ಚೀನಾ ಅಧಿಕೃತವಾಗಿ 2,966 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಸಾವು ಪ್ರಕರಣಗಳ ಸಂಖ್ಯೆಯೂ ಸಾಕಷ್ಟು ಕಡಿಮೆಯಿದೆ ಎಂದು ಹೇಳಿಕೊಂಡಿದೆ. ಆದರೆ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು ಮತ್ತು ಚಿತಾಗಾರ ಮತ್ತು ಸ್ಮಶಾನಗಳಲ್ಲಿ ಸಂಸ್ಕಾರಕ್ಕಾಗಿ ಕಾಯುತ್ತಿರುವ ಹೆಣಗಳು ಬೇರೊಂದು ಸಂದೇಶ ನೀಡುತ್ತಿವೆ. ಚಿತಾಗಾರಗಳಲ್ಲಿ ಕೆಲಸ ಮಾಡುವವರು ಅಂತ್ಯಗಾಣದ ಹೆಣಗಳ ಸಾಲಿನಿಂದ ಹೈರಾಣಾಗಿದ್ದಾರೆ. ಕೊರೊನಾ ಸೋಂಕು ಮತ್ತು ಕೊರೊನಾ ಸೋಂಕಿನಿಂದ ಸಾವು ಎನ್ನುವುದರ ವ್ಯಾಖ್ಯಾನವನ್ನೂ ಚೀನಾ ಬದಲಿಸಿಕೊಂಡಿದೆ. ಹೀಗಾಗಿ ಅಲ್ಲಿನ ಪ್ರಾದೇಶಿಕ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಅಂಕಿಅಂಶಗಳ ಬಗ್ಗೆ ವಿಶ್ವದ ಇತರ ದೇಶಗಳು ಸಂದೇಹ ವ್ಯಕ್ತಪಡಿಸುತ್ತಿವೆ. ತೀವ್ರವೇಗದಲ್ಲಿ ಸೋಂಕು ಹರಡುವ ಒಮಿಕ್ರಾನ್ ರೂಪಾಂತರಿ ಚೀನಾದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ.

ವಿಶ್ವದಲ್ಲಿ ಈವರೆಗೆ ಒಂದೇ ದಿನ ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ದಾಖಲೆ ಅಮೆರಿಕದಲ್ಲಿದೆ. ಜನವರಿ 2022ರಲ್ಲಿ ಅಮೆರಿಕದಲ್ಲಿ ಒಂದೇ ದಿನ 14 ಲಕ್ಷ ಮಂದಿಯಲ್ಲಿ ಸೋಂಕು ವರದಿಯಾಗಿತ್ತು. ಅಂದು ವಿಶ್ವದಲ್ಲಿ ವರದಿಯಾಗಿದ್ದ ಸೋಂಕು ಪ್ರಕರಣಗಳ ಸಂಖ್ಯೆ 40 ಲಕ್ಷ ಎಂದು ‘ಅವರ್ ವರ್ಲ್ಡ್ ಇನ್ ಡೇಟಾ’ ಸಂಸ್ಥೆಯ ವರದಿಯು ತಿಳಿಸಿದೆ.

ಇದನ್ನೂ ಓದಿ: ಜೀವ ಉಳಿಸಿಕೊಳ್ಳಲು ನಿಂಬೆಹಣ್ಣಿನ ಮೊರೆ ಹೋದ ಚೀನಿಯರು: ಕೊವಿಡ್ ವ್ಯಾಪಿಸಿದ ನಂತರ ಚೀನಾದಲ್ಲಿ ನಿಂಬೆಹಣ್ಣಿಗೆ ಭಾರೀ ಬೇಡಿಕೆ

ಚೀನಾಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:31 am, Fri, 23 December 22