ನವದೆಹಲಿ: ಐಟಿ ಕ್ಷೇತ್ರದಲ್ಲಿರುವಂತೆ ಬ್ಯಾಂಕ್ ವಲಯಕ್ಕೂ ವಾರಕ್ಕೆರಡು ವೀಕ್ ಆಫ್ ಬರಲಿದೆ. ಸರ್ಕಾರಿ ಬ್ಯಾಂಕುಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಅವಕಾಶ ಪಡೆಯಲಿವೆ. ಅಂದರೆ ವಾರದಲ್ಲಿ ಎರಡು ನಿಯಮಿತ ರಜಾ ದಿನ ಇರಲಿವೆ. ಶನಿವಾರ ಮತ್ತು ಭಾನುವಾರ ಸರ್ಕಾರಿ ಬ್ಯಾಂಕುಗಳು ಬಾಗಿಲು ಮುಚ್ಚಲಿವೆ. ಈ ಬಗ್ಗೆ ಭಾರತೀಯ ಬ್ಯಾಂಕುಗಳ ಸಂಸ್ಥೆ (IBA- Indian Banks Association) ಮಾಡಿರುವ ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯದಿಂದ ಅನುಮೋದನೆಯಷ್ಟೇ ಬಾಕಿ ಇದೆ. ಶೀಘ್ರದಲ್ಲೇ ಅದಕ್ಕೂ ಸಮ್ಮತಿ ಸಿಗುವ ಸಾಧ್ಯತೆ ಇದೆ ಎಂದು ಸಿಎನ್ಬಿಸಿ ಟಿವಿ18 ವಾಹಿನಿ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಬ್ಯಾಂಕುಗಳು ಈಗ ಪ್ರತೀ ಭಾನುವಾರ ಹಾಗೂ 2ನೇ ಮತ್ತು 3ನೇ ಶನಿವಾರದಂದು ರಜೆ ಹೊಂದಿವೆ. ಈಗ ಭಾನುವಾರದ ಜೊತೆಗೆ ಎಲ್ಲಾ ಶನಿವಾರವೂ ಬ್ಯಾಂಕಿಗೆ ಆಫ್ ಇರಲಿದೆ.
ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಶನ್ (ಐಬಿಎ) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ (UFBA) ಸಂಸ್ಥೆಗಳು ಬ್ಯಾಂಕುಗಳಿಗೆ ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿವೆ. ಅದರಂತೆ ಐದು ದಿನ ಕೆಲಸದ ವಾರಕ್ಕೆ ಅನುಮತಿ ನೀಡುವುದಾದರೆ ಬ್ಯಾಂಕುಗಳ ದಿನದ ಅವಧಿ 40 ನಿಮಿಷ ಹೆಚ್ಚು ಮಾಡಬೇಕು. ಅಂದರೆ, ಬ್ಯಾಂಕ್ ನೌಕರರು ಕೆಲಸ ಮಾಡುವ ದಿನದಲ್ಲಿ 40 ನಿಮಿಷ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗುತ್ತದೆ. ಐಬಿಎ ಮತ್ತು ಯುಎಫ್ಬಿಇ ಇಂಥದ್ದೊಂದು ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ. ವೇತನ ಮಂಡಳಿ ಪರಿಷ್ಕರಣೆಯೊಂದಿಗೆ ಶೀಘ್ರದಲ್ಲೇ ಅಧಿಸೂಚನೆ ಬರುವ ನಿರೀಕ್ಷೆ ಇದೆ.
ಬ್ಯಾಂಕುಗಳಿಗೆ ವಾರದಲ್ಲಿ ಎರಡು ದಿನ ರಜೆ ಬೇಕೆನ್ನುವ ಬೇಡಿಕೆ ಹಲವು ದಿನಗಳಿಂದಲೂ ಇದೆ. ಈ ಬೇಡಿಕೆ ಹಿನ್ನೆಲೆಯಲ್ಲಿ ಪ್ರತೀ ಎರಡು ಶನಿವಾರಕ್ಕೆ ರಜೆ ನೀಡಲಾಗಿದೆ. ಈಗ ಎಲ್ಲಾ ಶನಿವಾರಗಳೂ ಬ್ಯಾಂಕುಗಳಿಗೆ ರಜಾ ದಿನಗಳಾಗಬಹುದು.
ಮೇ 1ರಂದು ಕಾರ್ಮಿಕರ ದಿನಕ್ಕೆ ರಾಷ್ಟ್ರಾದ್ಯಂತ ಬ್ಯಾಂಕುಗಳಿಗೆ ರಜೆ ಇತ್ತು. ಅದು ಬಿಟ್ಟು ಉಳಿದ ರಜಾ ದಿನಗಳ ಪಟ್ಟಿ ಇಲ್ಲಿದೆ
ಇಲ್ಲಿ ಸಿಕ್ಕಿಂ ಪ್ರದೇಶದ ಬ್ಯಾಂಕುಗಳು ಮೇ ತಿಂಗಳಲ್ಲಿ 6 ವಾರದ ರಜೆ ಸೇರಿ 8 ರಜಾದಿನಗಳನ್ನು ಹೊಂದಿರುತ್ತವೆ. ಹರ್ಯಾಣ, ಪಂಜಾಬ್, ಗುಜರಾತ್ ರಾಜ್ಯಗಳಲ್ಲೂ ಬ್ಯಾಂಕುಗಳು 8 ದಿನ ಬಾಗಿಲು ಮುಚ್ಚಿರುತ್ತವೆ.
ಕರ್ನಾಟಕದಲ್ಲಿ 6 ವಾರದ ರಜೆಯ ಜೊತೆ ಕಾರ್ಮಿಕರ ದಿನದ ರಜೆ ಮಾತ್ರ ಇದೆ. ಅಂದರೆ ಮೇ 1ರಂದು ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲಿ ಬ್ಯಾಂಕುಗಳು ಬಂದ್ ಆಗಿದ್ದವು.
ಇದನ್ನೂ ಓದಿ: World Bank: ವಿಶ್ವಬ್ಯಾಂಕ್ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್ ಬಂಗಾ ನೇಮಕ
Published On - 10:52 am, Thu, 4 May 23