ಲಂಡನ್, ನವೆಂಬರ್ 24: ಬ್ರಿಟನ್ ದೇಶದ ಬಾರ್ಕ್ಲೇಸ್ ಬ್ಯಾಂಕ್ (Barclays Bank) ಹಣಕಾಸು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಅದಕ್ಕಾಗಿ ವೆಚ್ಚ ಕಡಿತಕ್ಕೆ ಮುಂದಾಗಿದೆ. ರಾಯ್ಟರ್ಸ್ ವರದಿ ಪ್ರಕಾರ 1 ಬಿಲಿಯನ್ ಪೌಂಡ್ಗಳಷ್ಟು (10,400 ಕೋಟಿ ರೂ) ವೆಚ್ಚಕಡಿತಕ್ಕೆ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿರೀಕ್ಷಿಸಿದ ರೀತಿಯಲ್ಲಿ ವೆಚ್ಚ ಕಡಿತದ (cost cutting) ಯೋಜನೆ ಪೂರ್ಣವಾಗಿ ಜಾರಿಗೆ ತಂದರೆ 1,500ರಿಂದ 2,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ.
ಬಾರ್ಕ್ಲೇಸ್ ಬ್ಯಾಂಕ್ನ ಬ್ಯಾಕ್ ಅಫೀಸ್ ಕೆಲಸಗಳಲ್ಲಿ ಹೆಚ್ಚು ಕತ್ತರಿ ಬೀಳಬಹುದು ಎಂದು ತನ್ನ ಸುದ್ದಿಮೂಲವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಬಿಎಕ್ಸ್ ಎಂದು ಕರೆಯಲಾಗುವ ಬಾರ್ಕ್ಲೇಸ್ ಎಕ್ಸಿಕ್ಯೂಶನ್ ಸರ್ವಿಸಸ್ ವಿಭಾಗದಲ್ಲಿ ಉದ್ಯೋಗನಷ್ಟ ಕೇಂದ್ರೀಕೃತವಾಗಿರಲಿದೆ. ಬ್ಯಾಂಕ್ನ ಕಾಸ್ಟ್ ಕಟ್ಟಿಂಗ್ ಯೋಜನೆಯಲ್ಲಿ ಇದೂ ಒಂದು ಪ್ರಮುಖ ಭಾಗವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಕಾಸ್ಟ್ ಕಟ್ಟಿಂಗ್ ಆಗಲೀ ಅಥವಾ ಲೇ ಆಫ್ ಆಗಲೀ ಒಮ್ಮೆಗೇ ಜಾರಿಯಾಗುವುದಿಲ್ಲ. ಹಲವು ವರ್ಷಗಳ ಕಾಲಾವಧಿಯಲ್ಲಿ ಹಂತ ಹಂತವಾಗಿ ಇದು ಅನುಷ್ಠಾನಕ್ಕೆ ಬರುತ್ತದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.
ಇದನ್ನೂ ಓದಿ: ಖಾನ್ ಮಾರ್ಕೆಟ್ ಭಾರತದ ಅತ್ಯಂತ ದುಬಾರಿ ರೀಟೇಲ್ ಮಾರುಕಟ್ಟೆ; ಬೇರೆ ಕಡೆ ಹೇಗೆ?
ಬಿಎಕ್ಸ್ ಅಥವಾ ಬಾರ್ಕ್ಲೇಸ್ ಎಕ್ಸಿಕ್ಯೂಷನ್ ಸರ್ವಿಸಸ್ನಲ್ಲಿ ಸಿಬ್ಬಂದಿ ಸಂಖ್ಯೆ ಮತ್ತು ವೆಚ್ಚ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಈ ವಿಭಾಗದಲ್ಲಿ ಒಟ್ಟು ಸಿಬ್ಬಂದಿವರ್ಗ 22,300 ತಲುಪಿದೆ. ಒಟ್ಟಾರೆ ಬಾರ್ಕ್ಲೇ ಸಿಬ್ಬಂದಿ ಪೈಕಿ ಈ ವಿಭಾಗದಲ್ಲೇ ಕಾಲುಭಾಗದಷ್ಟಿದ್ದಾರೆ. ಇವರಿಗೆ ಕಂಪನಿ ಮಾಡುತ್ತಿರುವ ವಾರ್ಷಿಕ ವೆಚ್ಚ 2 ಬಿಲಿಯನ್ ಪೌಂಡ್ (21,000 ಕೋಟಿ ರೂ) ಎನ್ನಲಾಗುತ್ತಿದೆ.
ಬಾರ್ಕ್ಲೇಸ್ ಬ್ಯಾಂಕ್ಗೆ ಭಾರತ ಮೂಲದ ಸಿಎಸ್ ವೆಂಕಟಕೃಷ್ಣನ್ ಅವರು ಸಿಇಒ ಆಗಿರುವುದು ವಿಶೇಷ. ಬ್ಯಾಂಕ್ ಸಾಕಷ್ಟು ವ್ಯಾವಹಾರಿಕ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಚುಕ್ಕಾಣಿ ಹಿಡಿದಿರುವ ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಯೂರೋಪ್ನ ಬೃಹತ್ ಬ್ಯಾಂಕ್ಗಳೆನಿಸಿದ ಡ್ಯೂಷೆ ಬ್ಯಾಂಕ್, ಯುಬಿಎಸ್, ಬಿಎನ್ಪಿ ಪರಿಬಾಸ್ ಮೊದಲಾದ ಸಂಸ್ಥೆಗಳ ಜೊತೆ ಪೈಪೋಟಿ ನಡೆಸಿ ಲಾಭದ ಹಳಿಗೆ ಮರಳಬೇಕಾಗಿರುವ ಬಾರ್ಕ್ಲೇಸ್ ಬ್ಯಾಂಕ್ಗೆ ಈಗ ವೆಚ್ಚ ಕಡಿತ ಅನಿವಾರ್ಯ ಎನ್ನಲಾಗಿದೆ.
ಇದನ್ನೂ ಓದಿ: RBI: 2,000 ರೂ ನೋಟು ಇನ್ನೂ ಇದೆಯಾ? ಆರ್ಬಿಐ ಕಚೇರಿಗೆ ಹೋಗದೇ ಹಣ ವಿನಿಮಯ ಸಾಧ್ಯ; ಇಲ್ಲಿದೆ ಮಾರ್ಗ
ಬಾರ್ಕ್ಲೇಸ್ ಬ್ಯಾಂಕ್ನಲ್ಲಿ ಹೆಚ್ಚೂಕಡಿಮೆ 90,000 ಸಮೀಪದಷ್ಟು ಉದ್ಯೋಗಿಗಳ ಸಂಖ್ಯೆ ಇದೆ. ಈ ಪೈಕಿ 22,000ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಬಿಎಕ್ಸ್ ಡಿವಿಶನ್ಗಳಲ್ಲಿ ಇದ್ದಾರೆ. ಈ ಡಿವಿಶನ್ನಲ್ಲಿ ಶೇ. 10ರಷ್ಟು ಉದ್ಯೋಗಿಗಳಿಗೆ ಕೆಲಸ ಹೋಗುವ ಭೀತಿ ಇದೆ. ಇದರ ಜೊತೆಗೆ ಬ್ಯಾಂಕ್ನ ಇನ್ನಷ್ಟು ವೆಚ್ಚಕಡಿತದ ಪ್ಲಾನ್ಗಳೇನು ಎಂಬುದು ಗೊತ್ತಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:25 am, Fri, 24 November 23