ರೇಮಂಡ್ ರಾದ್ಧಾಂತ; ಮಕ್ಕಳಿಗೆ ಆಸ್ತಿಕೊಟ್ಟು ಮೂರ್ಖರಾಗಬೇಡಿ: ವಿಜಯ್​ಪತ್ ಸಿಂಘಾನಿಯಾ ಕಣ್ಣೀರು

Vijaypat Singhania Pain and Anguish: ರೇಮಂಡ್ ಗ್ರೂಪ್ ಸಂಸ್ಥಾಪಕ ವಿಜಯ್​ಪತ್ ಸಿಂಘಾನಿಯಾ ತಾನು ಕಟ್ಟಿದ ಉದ್ಯಮ ಸಾಮ್ರಾಜ್ಯ ಪತನವಾದೀತೆಂಬ ಭಯದಲ್ಲಿದ್ದಾರೆ. ಮಗ ಗೌತಮ್​ಗೆ ತನ್ನೆಲ್ಲಾ ಆಸ್ತಿ ಧಾರೆ ಎರೆದು ಈಗ ತಾನು ಹೇಗೆ ಕಷ್ಟಕ್ಕೆ ಸಿಲುಕಿದ್ದೇನೆ ಎಂದು ಸಿಂಘಾನಿಯಾ ಮರುಗಿದ್ದಾರೆ. ಆಸ್ತಿಯಲ್ಲಿ ಶೇ. 75ರಷ್ಟು ಪಾಲು ಕೇಳುತ್ತಿರುವ ಸೊಸೆಗೆ ಮಗ ಏನಾದರೂ ಕೊಟ್ಟಾನು ಅನಿಸುವುದಿಲ್ಲ ಎಂದಿದ್ದಾರೆ ಸಿಂಘಾನಿಯಾ.

ರೇಮಂಡ್ ರಾದ್ಧಾಂತ; ಮಕ್ಕಳಿಗೆ ಆಸ್ತಿಕೊಟ್ಟು ಮೂರ್ಖರಾಗಬೇಡಿ: ವಿಜಯ್​ಪತ್ ಸಿಂಘಾನಿಯಾ ಕಣ್ಣೀರು
ವಿಜಯಪತ್ ಸಿಂಘಾನಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 24, 2023 | 12:06 PM

ನವದೆಹಲಿ, ನವೆಂಬರ್ 24: ರೇಮಂಡ್ಸ್ ಕಂಪನಿಯ ಮಾಲೀಕ ಗೌತಮ್ ಸಿಂಘಾನಿಯಾ (Gautam Singhania) ಕುಟುಂಬದಲ್ಲಿನ ಒಡಕು ಈಗ ಇನ್ನಷ್ಟು ಹೆಚ್ಚಾಗಿದೆ. ಸಿಂಘಾನಿಯಾರ 32 ವರ್ಷದ ದಾಂಪತ್ಯ ಮುರಿದುಬಿದ್ದಿದೆ. ನವಾಜ್ ಮೋದಿಗೆ ಗೌತಮ್ ಡಿವೋರ್ಸ್ (Nawaz Modi Gautam Singhania divorce) ನೀಡಲು ಮುಂದಾಗಿದ್ದಾರೆ. ಅತ್ತ, ಜೀವನಾಂಶವಾಗಿ ಪತಿಯ ಆಸ್ತಿಯಲ್ಲಿ ಮುಕ್ಕಾಲು ಭಾಗ ಪಾಲು ಕೇಳುತ್ತಿದ್ದಾರೆ ನವಾಜ್. ಇದೇ ವೇಳೆ, ಮಗನಿಗೆ ಎಲ್ಲಾ ಆಸ್ತಿ ಕೊಟ್ಟು ಈಗ ಸಾಧಾರಣ ವ್ಯಕ್ತಿಯಾಗಿ ಬದುಕುತ್ತಿರುವ ರೇಮಂಡ್ಸ್ ಸಂಸ್ಥಾಪಕ ವಿಜಯಪತ್ ಸಿಂಘಾನಿಯಾ (Vijaypat Singhania) ತಮ್ಮ ನೋವನ್ನು ಮಾಧ್ಯಮಗಳಲ್ಲಿ ಪುನರುಚ್ಚರಿಸಿದ್ದಾರೆ. ತನ್ನ ಮಗನ ವೈವಾಹಿಕ ಬದುಕು ಮೂರಾಬಟ್ಟೆಯಾಗುತ್ತಿರುವುದು ಹಾಗೂ ತಾನೇ ಕಟ್ಟಿದ ಉದ್ಯಮ ಸಾಮ್ರಾಜ್ಯ ಪತನವಾಗುವ ಅಪಾಯದಲ್ಲಿರುವುದು ಕಂಡು ಅವರು ಮಮ್ಮಲ ಮರುಗುತ್ತಿದ್ದಾರೆ. ತಮ್ಮ ಸೊಸೆ ಬಗ್ಗೆಯೂ ಅನುಕಂಪ ವ್ಯಕ್ತಪಡಿಸಿದ್ದಾರೆ.

85 ವರ್ಷದ ವಿಜಯ್​ಪತ್ ಸಿಂಘಾನಿಯಾ ಅವರ ರೇಮಂಡ್ಸ್ ಕಂಪನಿಯನ್ನು ಕಟ್ಟಿ ಉತ್ತುಂಗಕ್ಕೆ ಬೆಳೆಸಿದವರು. ಅವರು ಮತ್ತು ಮಗ ಗೌತಮ್ ಸಿಂಘಾನಿಯಾ ಇಬ್ಬರ ಶ್ರಮ ಅದರಲ್ಲಿ ಸಾಕಷ್ಟಿತ್ತು. 2015ರಲ್ಲಿ ರೇಮಂಡ್ ಗ್ರೂಪ್​ನ ಪೂರ್ಣ ಆಡಳಿತ ಚುಕ್ಕಾಣಿಯನ್ನು ವಿಜಯ್​ಪತ್ ಸಿಂಘಾನಿಯಾ ತಮ್ಮ ಮಗನಿಗೆ ಕೊಟ್ಟರು. ಕಂಪನಿಯ ಕೆಲ ಆಸ್ತಿ ಮತ್ತು ಕುಟುಂಬದ ಕೆಲ ಆಸ್ತಿಯನ್ನು ವಿಜಯ್​ಪತ್ ತನ್ನಲ್ಲಿ ಉಳಿಸಿಕೊಳ್ಳದೇ ಸಂಪೂರ್ಣವಾಗಿ ಮಗನಿಗೆ ಆಸ್ತಿ ಧಾರೆ ಎರೆದಿದ್ದರು. ಆದರೆ, ಕಂಪನಿ ಆಡಳಿತ ಸಿಕ್ಕ ಬಳಿಕ ಗೌತಮ್ ಸಿಂಘಾನಿಯಾ ವರ್ತನೆ ಬದಲಾಗಿ ಹೋಗಿತ್ತು. ಕಂಪನಿಯದ್ದಾಗಲೀ, ಕುಟುಂಬದ್ದಾಗಲೀ ಯಾವ ಆಸ್ತಿಯನ್ನೂ ಮಗ ತನ್ನ ಅಪ್ಪನಿಗೆ ಕೊಡಲಿಲ್ಲ. ಅಷ್ಟೇ ಅಲ್ಲ, ಮನೆ ಮತ್ತು ಕಂಪನಿಯಿಂದ ಅಪ್ಪನನ್ನು ಹೊರ ಹಾಕಿದ್ದರು. ಈ ವಿಚಾರವನ್ನು ವಿಜಯ್​ಪತ್ ಸಿಂಘಾನಿಯಾ ಬಹಳ ನೋವಿನಲ್ಲಿ ಹೇಳುತ್ತಾರೆ.

ಇದನ್ನೂ ಓದಿ: ಕೌಟುಂಬಿಕ ಕಲಹ; ರೇಮಂಡ್ ಮುಖ್ಯಸ್ಥರಿಗೆ ಚೆಕ್​ಮೇಟ್ ಹಾಕಿದ್ದರಾ ಅಂಬಾನಿ ಫ್ಯಾಮಿಲಿ?

‘ಕಂಪನಿ ಕೆಲ ಭಾಗವನ್ನು ನನಗೆ ಕೊಡುತ್ತೇನೆಂದು ಗೌತಮ್ ಹೇಳಿದ್ದ. ಆದರೆ, ಆ ಮಾತು ಉಳಿಸಿಕೊಳ್ಳಲಿಲ್ಲ. ಎಲ್ಲವನ್ನೂ ಆತನಿಗೆ ಕೊಟ್ಟಿದ್ದೆ. ನನ್ನ ಬಳಿ ಏನೂ ಇರಲಿಲ್ಲ. ಅದು ನನ್ನ ತಪ್ಪು. ಆದರೆ, ಒಂದಷ್ಟು ಹಣ ಮಾತ್ರ ನನ್ನಲ್ಲಿ ಉಳಿದಿತ್ತು. ಅದರಲ್ಲೇ ಈಗ ಬದುಕುತ್ತಿದ್ದೇನೆ. ಇಲ್ಲದಿದ್ದರೆ ಇವತ್ತು ನಾನು ಬೀದಿಗೆ ಬರಬೇಕಿತ್ತು,’ ಎಂದು ರೇಮಂಡ್ಸ್ ಕಂಪನಿ ಸಂಸ್ಥಾಪಕರಾದ ವಿಜಯ್​ಪತ್ ಹೇಳುತ್ತಾರೆ.

ಮಕ್ಕಳಿಗೆ ಎಲ್ಲವನ್ನೂ ಕೊಡುವ ಮುನ್ನ ಪೋಷಕರು ಯೋಚಿಸಬೇಕು ಎಂದು ಎಚ್ಚರಿಸುವ ವಿಜಯಪತ್ ಸಿಂಘಾನಿಯಾ, ‘ಆತ ರೇಮಂಡ್ ಸಂಸ್ಥೆಯನ್ನು ಹಾಳು ಮಾಡುತ್ತಿದ್ದಾನೆ. ಅದು ನನಗೆ ಘಾಸಿ ತಂದಿದೆ. ನಾನು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲ್ಲ. ಏನು ಮಾಡಬೇಕು ಎಂದು ಆತನಿಗೆ ಹೇಳುವುದಿಲ್ಲ. ಆತ ಬದುಕಬೇಕು. ನಾನು ನನ್ನ ಜೀವನ ಅನುಭವಿಸಿದ್ದೇನೆ. ಇನ್ನೇನು 2-3 ವರ್ಷ ಮಾತ್ರ ಉಳಿದಿರಬಹುದು,’ ಎಂದು ಈ ಸಂದರ್ಭದಲ್ಲೂ ಮಗನ ಹಿತ ಬಯಸಿದ್ದಾರೆ ವಿಜಯ್​ಪತ್.

ಇದನ್ನೂ ಓದಿ: Vijaypat Singhania: ಬೀದಿಗೆ ಬಿದ್ದ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ

ಸೊಸೆಗೆ ಮಗ ಏನು ಕೊಟ್ಟಾನು?

‘ಆಕೆ 75 ಪರ್ಸೆಂಟ್​ಗಾಗಿ ಯಾಕೆ ಹೋರಾಡುತ್ತಿದ್ದಾಳೆ. ಗೌತಮ್ ಇದಕ್ಕೆ ಬಗ್ಗುವುದಿಲ್ಲ. ಎಲ್ಲರನ್ನೂ, ಎಲ್ಲವನ್ನೂ ಖರೀದಿಸುವುದು ಆತನ ಜಾಯಮಾನ. ನನಗೆ ಆಗಿದ್ದೂ ಅದೇ. ಆಕೆ ಈ ರೀತಿ ಹೋರಾಡಿದರೆ ಹೆಚ್ಚು ಗೀಟುವುದಿಲ್ಲ. ಹರೀಶ್ ಸಾಳ್ವೆ, ಮುಕುಲ್ ರೋಹತಗಿ, ಕಪಿಲ್ ಸಿಬಲ್​ರಂಥ ವಕೀಲರು ಬಂದರೆ ಸಾಧ್ಯವಾಗಬಹುದೇನೋ,’ ಎಂದು ವಿಜಯ್​ಪತ್ ಸಿಂಘಾನಿಯಾ ಹೇಳಿದ್ದಾರೆ.

ಹಿಂದೂ ವಿವಾಹ ಕಾನೂನು ಪ್ರಕಾರ ವಿಚ್ಚೇದಿತ ಪತ್ನಿ ಶೇ. 50ರಷ್ಟು ಆಸ್ತಿಪಾಲು ಪಡೆಯಬಹುದು. ನವಾಜ್ ಮೋದಿ ಅವರು ಪಾರ್ಸಿ ಜನಾಂಗದವರಾಗಿದ್ದಾರೆ. ಅವರು ಹಿಂದೂ ವಿವಾಹ ಕಾನೂನಿನ ಅಡಿಗೆ ಬರುತ್ತಾರಾ ವಿಚಾರಿಸಿ ಮುಂದುವರಿಯಲಿ ಎಂದೂ ಸಿಂಘಾನಿಯಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?

ವಿಜಯ್​ಪತ್ ಸಿಂಘಾನಿಯಾ ಅವರ ಮಗ ಗೌತಮ್ ಸಿಂಘಾನಿಯಾ ಈಗ ರೇಮಂಡ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಬಟ್ಟೆ ಬ್ರ್ಯಾಂಡ್​ನಿಂದ ರಿಯಲ್ ಎಸ್ಟೇಟ್​ವರೆಗೆ ವಿವಿಧ ಕ್ಷೇತ್ರಗಳಿಗೆ ರೇಮಂಡ್ ವ್ಯಾಪಿಸಿದೆ. ಕೌಟುಂಬಿಕ ಕಲಹ ಬಹಿರಂಗವಾದ ಬಳಿಕ ರೇಮಂಡ್ ಲಿ ಸಂಸ್ಥೆಯ ಷೇರುಬೆಲೆ ಕುಸಿತದ ಹಾದಿಯಲ್ಲಿದೆ. ಸೆಪ್ಟೆಂಬರ್ ತಿಂಗಳಲ್ಲಿ 2,240 ರೂ ಇದ್ದ ಷೇರುಬೆಲೆ ಇದೀಗ 1,676 ರೂಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Fri, 24 November 23