Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್ನ ಕರುಣಾಜನಕ ಕಥೆ
Rich to Rag Story of Raymonds Ex Chairman: ರೇಮಂಡ್ ಗ್ರೂಪ್ನ ಮಾಜಿ ಛೇರ್ಮನ್ ಹಾಗೂ ಸಾಹಸ ಕ್ರೀಡೆಗಳ ಉತ್ಸಾಹಿ ವಿಜಯ್ಪತ್ ಸಿಂಘಾನಿಯಾ ಒಂದು ಕಾಲದಲ್ಲಿ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರೆನಿಸಿದವರು. ಇವತ್ತು ಇವರು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.
ರೇಮಂಡ್ಸ್ ಸಂಸ್ಥೆ (Raymonds Group) ಹೆಸರು ಕೇಳಿರಬಹುದು. ಮದುವೆ ಸಮಾರಂಭಗಳಿಗೆ ಪುರುಷರು ಬಟ್ಟೆಬರೆ ಖರೀದಿಸಬೇಕಾದರೆ ರೇಮಂಡ್ಸ್ ಶೋರೂಮ್ಗೆ ಹೋಗುವುದು ಸಾಮಾನ್ಯ. ಇವತ್ತು ಈ ಸಂಸ್ಥೆಯ ಷೇರುಸಂಪತ್ತು 13 ಲಕ್ಷಕೋಟಿ ರೂ ಆಗಿದೆ. ಈ ಯಶಸ್ವಿ ಕಂಪನಿಯ ಆಡಳಿತ ಚುಕ್ಕಾಣಿ ಹೊಂದಿದ್ದ ವ್ಯಕ್ತಿ ಇವತ್ತು ನಿರ್ಗತಿಕರಂತೆ ಬದುಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ರೇಮಂಡ್ ಗ್ರೂಪ್ನ ಮಾಜಿ ಛೇರ್ಮನ್ ವಿಜಯ್ಪತ್ ಸಿಂಘಾನಿಯಾ (Vijaypat Singhania) ಅವರೇ ಆ ವ್ಯಕ್ತಿ. ಒಂದು ಕಾಲದಲ್ಲಿ ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದ ವಿಜಯಪತ್ ಸಿಂಘಾನಿಯಾ ಇವತ್ತು ಮುಂಬೈನಲ್ಲಿ ಒಂದು ಸಾಧಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಕಲ ಅಷ್ಟೈಷ್ವರ್ಯಗಳನ್ನು ಹೊಂದಿ ಸುಖದ ಜೀವನ ನಡೆಸುತ್ತಿದ್ದ ಈ ಹಿರಿಯರಿಗೆ ಈಗ ಬರುವ ಆದಾಯ ಹೊಟ್ಟೆ ಬಟ್ಟೆಗಾಗುವಷ್ಟು ಮಾತ್ರ. ವಿಜಯ್ಪತ್ ಸಿಂಘಾನಿಯಾ ಅವರಿಗೆ ಯಾಕಿಂಥ ಸ್ಥಿತಿ ಎರಗಿ ಬಂತು? ರೇಮಂಡ್ಸ್ ಕಂಪನಿ ಈಗ ಉತ್ತುಂಗದಲ್ಲಿರುವಾಗ ವ್ಯಾವಹಾರಿಕ ನಷ್ಟದಿಂದ ಅವರಿಗೆ ಈ ದುರ್ಗತಿ ಬಂದಿರಲು ಸಾಧ್ಯವಿಲ್ಲ. ಹಾಗಾದರೆ ಏನು ಕಾರಣ? ವರದಿಗಳ ಪ್ರಕಾರ, ವಿಜಯ್ಪತ್ ಸಿಂಘಾನಿಯಾ ಅವರ ಈ ದುಸ್ಥಿತಿಗೆ ಕೌಟುಂಬಿಕ ವ್ಯಾಜ್ಯವೇ ಕಾರಣ ಎನ್ನಲಾಗಿದೆ.
ಮಗನ ಜೊತೆಗಿನ ಜಟಾಪಟಿ ಈಗ ವಿಜಯ್ಪತ್ ಸಿಂಘಾನಿಯಾ ಅವರಿಗೆ ಈ ಸ್ಥಿತಿಗೆ ಇಳಿಯುವಂತೆ ಮಾಡಿದೆ. ರೇಮಂಡ್ಸ್ ಸಂಸ್ಥೆಯಲ್ಲಿ ಅವರು ಶೇ. 37ರಷ್ಟು ಷೇರುಪಾಲು ಹೊಂದಿದ್ದರು. 2015ರಲ್ಲಿ ಅಷ್ಟೂ ಷೇರುಗಳನ್ನು ಕಿರಿಯ ಮಗ ಗೌತಮ್ ಸಿಂಘಾನಿಯಾಗೆ ಧಾರೆ ಎರೆದರು. ಅದಾಗಿ ಕೆಲ ವರ್ಷಗಳಲ್ಲಿ ರೇಮಂಡ್ ಗ್ರೂಪ್ನ ವಿಶ್ರಾಂತ ಛೇರ್ಮನ್ (ಎಮಿರಿಟಸ್) ಹುದ್ದೆಯಿಂದ ವಿಜಯ್ಪತ್ ಅವರನ್ನು ಕಿತ್ತುಹಾಕಲಾಯಿತು. ಅವರಿಗೆ ಒಂದು ಸ್ವಂತಮನೆಯೂ ಇಲ್ಲದಾಯಿತು.
ಇವರ ಹಿರಿಯ ಮಗ ಮಧುಪತಿ ಸಿಂಘಾನಿಯಾ ಅವರು ಕುಟುಂಬದಿಂದ ದೂರಗೊಂಡು ಮುಂಬೈನಲ್ಲಿರುವ ಪಿತ್ರಾರ್ಜಿ ಆಸ್ತಿ ಬಿಟ್ಟುಕೊಟ್ಟು ದೂರದ ಸಿಂಗಾಪುರಕ್ಕೆ ಹೋಗಿ ನೆಲಸಿದ್ದಾರೆ. ಮಧುಪತಿ ಅವರಿಗೆ ಸಾಕಷ್ಟು ಅವಮಾನವಾದ್ದರಿಂದ ಈ ಬೆಳವಣಿಗೆ ಆಗಿತ್ತು ಎಂದು ಹೇಳಲಾಗುತ್ತದೆ. ಆದರೆ, ದೊಡ್ಡ ಮಗ ದೂರವಾದ ಬಳಿಕ ವಿಜಯ್ಪತ್ ಸಿಂಘಾನಿಯಾಗೆ ಕಿರಿಯ ಮಗನಿಂದ ಘಾಸಿಯಾಗಿದೆ. ಇಬ್ಬರ ಮಧ್ಯೆ ಕೋರ್ಟ್ನಲ್ಲಿ ಆಸ್ತಿವ್ಯಾಜ್ಯ ನಡೆಯುತ್ತಿದೆ.
ಇದನ್ನೂ ಓದಿ: HAL Share: ಎಚ್ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್ಎಎಲ್ ಷೇರು
ಸಿಂಘಾನಿಯಾ ಕುಟುಂಬ ನೂರಕ್ಕೂ ಹೆಚ್ಚು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಹೆಸರು ಮಾಡಿದವರು. ಎಂಬತ್ತು, ತೊಂಬತ್ತರ ದಶಕದಲ್ಲಿ ವಿಜಯ್ಪತ್ ಸಿಂಘಾನಿಯಾ ನೇತೃತ್ವದಲ್ಲಿ ಇವರ ಉದ್ಯಮ ಹೊಸ ಎತ್ತರಕ್ಕೆ ಹೋಗಿತ್ತು. ಈಗ ಮಗ ಗೌತಮ್ ಸಿಂಘಾನಿಯಾ ನೇತೃತ್ವದಲ್ಲೂ ರೇಮಂಡ್ ಗ್ರೂಪ್ ಸಾಕಷ್ಟು ಬೆಳೆದಿದೆ.
ವಿಮಾನಯಾನ, ಕಾರ್ ಚಾಲನೆ ಇತ್ಯಾದಿ ಸಾಹಸಗಳ ಮೂಲಕ ಹೆಸರಾಗಿದ್ದ, ಕೇಂದ್ರದಿಂದ ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದ ವಿಜಯ್ಪತ್ ಸಿಂಘಾನಿಯಾ ಇವತ್ತು ರೇಮಂಡ್ ಗ್ರೂಪ್ನಲ್ಲಿ ಶೇ. 37ರಷ್ಟು ಷೇರುಪಾಲು ಉಳಿಸಿಕೊಂಡಿದ್ದರೆ ಲಕ್ಷಾಂತರ ಕೋಟಿ ರೂ ಆಸ್ತಿವಂತರಾಗಿರುತ್ತಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Sun, 13 August 23