ಭಾರತ ಮೂಲದ ವಿಶಾಲ್ ಗರ್ಗ್ ಸಿಇಒ ಆಗಿರುವ ಬೆಟರ್ ಡಾಟ್ ಕಾಮ್ (Better.com) ಅಥವಾ ಬೆಟರ್ ಹೋಲ್ಡ್ಕೋ ತನ್ನ ಉದ್ಯೋಗಿಗಳ ಲೇ ಆಫ್ (Layoffs) ವಿಚಾರದಲ್ಲಿ ಬಹಳ ವಿವಾದಕ್ಕೆ ಒಳಗಾಗಿದ್ದಂತಹ ಸಂಸ್ಥೆ. ಇದೀಗ ಅದರ ಇಡೀ ರಿಯಲ್ ಎಸ್ಟೇಟ್ ವಿಭಾಗದ ಎಲ್ಲರನ್ನೂ ಲೇ ಆಫ್ ಮಾಡಿ ಒಂದೇ ದಿನದಲ್ಲಿ ಮನೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಈ ಕಂಪನಿ 4,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ರಿಯಲ್ ಎಸ್ಟೇಟ್ ವ್ಯವಹಾರದಿಂದ ಪೂರ್ಣ ಹೊರಬಿದ್ದ ಹಿನ್ನೆಲೆಯಲ್ಲಿ ತಂಡದವರನ್ನು ಲೇ ಆಫ್ ಮಾಡುವ ಕ್ರಮ ನಿರೀಕ್ಷಿತವಾಗಿಯೇ ಇತ್ತು. ಆದರೆ, ಸರಿಯಾದ ರೀತಿಯಲ್ಲಿ ಪರಿಹಾರ ನೀಡದೇ ಉದ್ಯೋಗಿಗಳನ್ನು ಹೀನವಾಗಿ ನಡೆಸಿಕೊಂಡದ್ದು ಈ ಕಂಪನಿಗೆ ಕಪ್ಪುಚುಕ್ಕೆಯಾಗಿದೆ. ಬೆಟರ್ ಡಾಟ್ ಕಾಮ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ವಿಶಾಲ್ ಗರ್ಗ್ ಒಂದು ಝೂನ್ ಮೀಟಿಂಗ್ ಕಾಲ್ನಲ್ಲಿ ಇಡೀ ರಿಯಲ್ ಎಸ್ಟೇಟ್ ತಂಡದ ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದಾರೆ ಎನ್ನಲಾಗಿದೆ.
ಜೂನ್ 7ರಂದು ಈ ಬೆಳವಣಿಗೆ ಆಗಿರುವುದು. ಈ ಹಿಂದೆಯೂ ಬೆಟರ್ ಡಾಟ್ ಕಾಮ್ ಹಂತ ಹಂತವಾಗಿ ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸುತ್ತಾ ಬಂದಿತ್ತು. ಜೂನ್ 7ರ ಲೇ ಆಫ್ ಸೇರಿ ಒಟ್ಟು 4,000 ಜನರು ಕೆಲಸ ಕಳೆದುಕೊಂಡಿದ್ದಾರೆ. ನವೆಂಬರ್ ತಿಂಗಳಲ್ಲಿ ಬಹುತೇಕ ಎಲ್ಲಾ ಉದ್ಯೋಗಿಗಳಿಗೆ ಅರ್ಧದಷ್ಟು ಸಂಬಳಕಡಿತ ಮಾಡಲಾಗಿತ್ತು. ಈ ಬಾರಿ ಮಾಡಲಾದ ಲೇ ಆಫ್ನಲ್ಲಿ ಉದ್ಯೋಗಿಗಳಿಗೆ ತೀರಾ ಕಡಿಮೆ ಪರಿಹಾರ ಕೊಡಲಾಗಿದೆ. ಕೆಲವರಿಗೆ ಹೆಚ್ಚುವರಿ ಸಂಬಳ ಇಲ್ಲದೆಯೇ ಮನೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಅವರ ಐಐಟಿ ಖರಗ್‌ಪುರ ಕ್ಲಾಸ್ಮೇಟ್ ಶರ್ಮಿಷ್ಠಾ ದುಬೆ ಸಾಧನೆ ಏನು ಗೊತ್ತಾ!?
2021ರ ಡಿಸೆಂಬರ್ ತಿಂಗಳಲ್ಲಿ ಸಿಇಒ ವಿಶಾಲ್ ಗರ್ಗ್ ಅವರು ವಿಡಿಯೋ ಕಾಲ್ನಲ್ಲಿ 900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುವ ನಿರ್ಧಾರ ಪ್ರಕಟಿಸಿದ್ದರು. ಈ ವಿಡಿಯೋ ಕಾನ್ಫೆರೆನ್ಸಿಂಗ್ನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಹಳಷ್ಟು ಜನರು ಗರ್ಗ್ ಅವರದ್ದು ಅಮಾನುಷ ವರ್ತನೆ ಎಂದು ಟೀಕಿಸಿದ್ದರು.
2022ರ ಮಾರ್ಚ್ ತಿಂಗಳಲ್ಲಿ ಕೆಲ ಉದ್ಯೋಗಿಗಳಿಗೆ ಕೆಲಸ ಹೋಗುವ ನೋಟೀಸ್ ತಲುಪುವ ಮುನ್ನವೇ ಪರಿಹಾರ ಹಣ ಸಿಕ್ಕಿದ ಘಟನೆಯೂ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು. ಉದ್ಯೋಗಿಗಳನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗರ್ಗ್ ತಮ್ಮ ಲೇ ಆಫ್ ಕೈಂಕರ್ಯವನ್ನು ಮುಂದುವರಿಸಿದ್ದರು.
ಇದನ್ನೂ ಓದಿ: Layoffs: ನವೆಂಬರ್ನಲ್ಲಿ ಶೇ. 20 ಈಗ ಶೇ. 30, ಒಟ್ಟು ಅರ್ಧದಷ್ಟು ಉದ್ಯೋಗಿಗಳ ಲೇ ಆಫ್ ಮಾಡಿದ ನೂರೋ
ಅಮೆರಿಕದ ನ್ಯೂಯಾರ್ಕ್ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಮುಖ್ಯ ಕಚೇರಿ ಹೊಂದಿರುವ ಬೆಟರ್ ಡಾಟ್ ಕಾಂ ಮಾರ್ಟ್ಗೇಜ್ ಕಂಪನಿಯಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ವಂತವಾಗಿ ಏಜೆಂಟ್ಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿತ್ತು. ಆದೀಗ ಹೆಚ್ಚು ಸಫಲ ಕಾಣದ ಹಿನ್ನೆಲೆಯಲ್ಲಿ ಪಾರ್ಟ್ನರ್ಶಿಪ್ ಏಜೆಂಟ್ ಆಧಾರದಲ್ಲಿ ವ್ಯವಹಾರ ನಡೆಸಲು ಕಂಪನಿ ನಿರ್ಧರಿಸಿದೆ. ಹೀಗಾಗಿ, ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದ ಅದರ ರಿಯಲ್ ಎಸ್ಟೇಟ್ ವಿಭಾಗದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ