ನವದೆಹಲಿ: ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ (BHEL) ಮತ್ತು ಕೋಲ್ಕತಾದ ತೀತಾಗಡ್ ರೈಲ್ ಸಿಸ್ಟಮ್ಸ್ ಲಿ (TRSL) ನೇತೃತ್ವದ ಸಮೂಹಕ್ಕೆ ವಂದೇ ಭಾರತ್ ಸ್ಲೀಪರ್ ಟ್ರೈನುಗಳ (Vande Bharat Sleeper Coach Trains) ತಯಾರಿಕೆಯ ಯೋಜನೆ ಸಿಕ್ಕಿದೆ. 80 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಭಾರತೀಯ ರೈಲ್ವೇಸ್ ಈ ಗುತ್ತಿಗೆ ನೀಡಿದೆ. 24,000 ರೂ ಮೊತ್ತದ ಗುತ್ತಿಗೆ ಇದಾಗಿದೆ. ಈ ವಿಚಾರವನ್ನು ಜಂಟಿ ಹೇಳಿಕೆ ಮೂಲಕ ಈ ಸಂಸ್ಥೆಗಳು ಪ್ರಕಟಿಸಿವೆ.
2029ರಷ್ಟರಲ್ಲಿ ಈ 80 ಸ್ಲೀಪರ್ ಕೋಚ್ ಟ್ರೈನುಗಳನ್ನು ತಯಾರಿಸಬೇಕಿದೆ. ಟ್ರೈನ್ನ ವಿನ್ಯಾಸದಿಂದ ಹಿಡಿದು ಎಲ್ಲವನ್ನೂ ಪೂರ್ಣವಾಗಿ ತಯಾರಿಸಬೇಕು. ಹಾಗೂ 35 ವರ್ಷಗಳ ಕಾಲ ಈ ಟ್ರೈನುಗಳ ಮೈಂಟೆನೆನ್ಸ್ ಕೂಡ ಮಾಡಬೇಕು. ಇದು ಗುತ್ತಿಗೆಯಲ್ಲಿರುವ ಷರತ್ತುಗಳು. ಈ ರೀತಿಯ ಪರಿಪೂರ್ಣ ರೈಲ್ವೆ ಗುತ್ತಿಗೆಯನ್ನು ಭಾರತೀಯ ಸಂಸ್ಥೆಗಳಿಗೆ ನೀಡಲಾಗಿರುವುದು ಇದೇ ಮೊದಲು.
ಇದನ್ನೂ ಓದಿ: Pakistan: ಪಾಕಿಸ್ತಾನದಿಂದ ಕಾಲ್ಕೀಳುತ್ತಿದೆ ಶೆಲ್; ಅಲ್ಲಾಹುವೇ ಕಾಪಾಡಬೇಕೆಂದ ನೆಟ್ಟಿಗರು
ಈ ಗುತ್ತಿಗೆಯನ್ನು 6 ವರ್ಷದ ಅವಧಿಯಲ್ಲಿ ನೆರವೇರಿಸಲಾಗುವುದು. ಎರಡು ವರ್ಷದೊಳಗೆ ಮೊದಲ ವಂದೇ ಭಾರತ್ ಟ್ರೈನಿನ ಪ್ರೋಟೋಟೈಪ್ ಒದಗಿಸಲಾಗುವುದು. ಅದಾದ ಬಳಿಕ ಉಳಿದ ಟ್ರೈನುಗಳನ್ನು ತಯಾರಿಸಿ ಭಾರತೀಯ ರೈಲ್ವೆಗೆ ಒಪ್ಪಿಸಲಾಗುವುದು ಎಂದು ತೀತಾಗಡ್ ರೈಲ್ ಸಿಸ್ಟಮ್ಸ್ನ ಎಂಡಿ ಮತ್ತು ಉಪಾಧ್ಯಕ್ಷ ಉಮೇಸ್ ಚೌಧರಿ ಹೇಳಿದ್ದಾರೆ.
ಈ ವಂದೇ ಭಾರತ್ ರೈಲುಗಳು ಗಂಟೆಗೆ 160 ಕಿಮೀ ವೇಗದಲ್ಲಿ ಸಾಗುವಂತೆ ವಿನ್ಯಾಸ ಮಾಡಲಾಗುತ್ತದೆ. ಒಂದು ಟ್ರೈನಿನಲ್ಲಿ 16 ಬೋಗಿಗಳಿರಲಿದ್ದು, ಒಟ್ಟು 887 ಪ್ರಯಾಣಿಕರಿಗೆ ಸ್ಥಳಾವಕಾಶ ಇರುತ್ತದೆ. ಇಂಥ 80 ಟ್ರೈನುಗಳು 2029ರಷ್ಟರಲ್ಲಿ ಹಂತ ಹಂತವಾಗಿ ಬಿಡುಗಡೆ ಆಗಲಿವೆ. ಈ ಟ್ರೈನುಗಳ ಅಂತಿಮ ಜೋಡಣೆ, ಪರೀಕ್ಷೆ ಮತ್ತು ಚಾಲನೆಯನ್ನು ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಜಾಗದಲ್ಲಿ ನಡೆಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ