Pakistan: ಪಾಕಿಸ್ತಾನದಿಂದ ಕಾಲ್ಕೀಳುತ್ತಿದೆ ಶೆಲ್; ಅಲ್ಲಾಹುವೇ ಕಾಪಾಡಬೇಕೆಂದ ನೆಟ್ಟಿಗರು
Shell Petroleum To Exit Pakistan: ತನ್ನ ಪಾಕಿಸ್ತಾನೀ ಅಂಗಸಂಸ್ಥೆಯಲ್ಲಿ ಹೊಂದಿರುವ ಪಾಲನ್ನು ಮಾರುತ್ತಿರುವುದಾಗಿ ಶೆಲ್ ಪೆಟ್ರೋಲಿಯಂ ಕಂಪನಿ ಹೇಳಿದೆ. ಶೇ. 77ರಷ್ಟು ಪಾಲು ಹೊಂದಿದ್ದು, ಅದರಲ್ಲಿ ಎಷ್ಟು ಮಾರುತ್ತದೆ ಎಂಬುದು ಗೊತ್ತಾಗಿಲ್ಲ.
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಶುಭ ದಿನಗಳು ದೂರವೇ ಉಳಿಯುವಂತೆ ತೋರುತ್ತಿದೆ. ಸಾಲದ ಹೊರೆಯಿಂದ ನಲುಗಿ ಹೋಗಿರುವ ಪಾಕಿಸ್ತಾನಕ್ಕೆ ಐಎಂಎಫ್ನಿಂದ ಬರಬೇಕಿರುವ ಸಾಲ ಬಿಡುಗಡೆ ಆಗುತ್ತಿಲ್ಲ ಎನ್ನುವ ನಿತ್ಯದ ತಲೆನೋವು ಒಂದೆಡೆಯಾದರೆ, ಈಗ ಒಂದೊಂದೇ ಎಂಎನ್ಸಿ ಕಂಪನಿಗಳು ಪಾಕಿಸ್ತಾನದಿಂದ ಜಾಗ ಖಾಲಿ ಮಾಡಲು ನೋಡುತ್ತಿವೆ. ವಿಶ್ವದ ಪ್ರಮುಖ ಪೆಟ್ರೋಲಿಯಂ ಕಂಪನಿ ಶೆಲ್ (Shell Petroleum Company) ಇದೀಗ ಪಾಕಿಸ್ತಾನದಿಂದ ಹೊರಹೋಗುತ್ತಿದೆ. ಶೆಲ್ ಪಾಕಿಸ್ತಾನ್ನಲ್ಲಿ ತಾನು ಹೊಂದಿರುವ ಶೇರುಪಾಲನ್ನು ಮಾರುವುದಾಗಿ ಶೆಲ್ ಪೆಟ್ರೋಲಿಯಂ ಕಂಪನಿ (SPCo) ಜೂನ್ 14ರಂದು ಪ್ರಕಟಿಸಿರುವುದು ವರದಿಯಾಗಿದೆ. ಶೆಲ್ ಪಾಕಿಸ್ತಾನ್ ಕಂಪನಿಯಲ್ಲಿ ಎಸ್ಪಿಕೋ ಶೇ. 77ರಷ್ಟು ಪಾಲು ಹೊಂದಿದೆ. ಇದರಲ್ಲಿ ಎಷ್ಟು ಷೇರುಗಳನ್ನು ಎಸ್ಪಿಕೋ ಮಾರುತ್ತಿದೆ ಎಂಬುದು ಗೊತ್ತಾಗಿಲ್ಲ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಪಾಕಿಸ್ತಾನೀ ರೂಪಾಯಿ ಬೆಲೆ ಬಹಳ ಕುಸಿತ ಕಂಡಿದೆ. ಈ ಕಾರಣಕ್ಕೆ 2022ರಲ್ಲಿ ಶೆಲ್ ಪೆಟ್ರೋಲಿಯಂ ಕಂಪನಿ ತೀವ್ರ ನಷ್ಟ ಅನುಭವಿಸಿತ್ತು. ಈಗಲೂ ಪಾಕಿಸ್ತಾನದ ಹಣಕಾಸು ಮತ್ತು ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ಈ ಕಾರಣಕ್ಕೆ ಶೆಲ್ ಪೆಟ್ರೋಲಿಯಂ ಪಾಕಿಸ್ತಾನದಿಂದ ಜಾಗ ಖಾಲಿ ಮಾಡಲು ನಿರ್ಧರಿಸಿರಬಹುದು ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದಲ್ಲಿ ಶೆಲ್ ಅಸ್ತಿತ್ವವೇ ಹೋಗುತ್ತಾ?
ಶೆಲ್ ಪಾಕಿಸ್ತಾನದಲ್ಲಿರುವ ಪಾಲನ್ನು ಮಾರಲಾಗುತ್ತಿರುವುದರಿಂದ ಕಂಪನಿ ಕಥೆ ಏನು? ಶೆಲ್ ಬಂಕ್ಗಳು ಮುಚ್ಚುತ್ತವಾ? ಶೆಲ್ ಪಾಕಿಸ್ತಾನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತನ್ನ ಎಲ್ಲಾ ವ್ಯವಹಾರಗಳು ಯಥಾಪ್ರಕಾರವಾಗಿ ಮುಂದುವರಿಯುತ್ತವೆ ಎಂದಿದೆ. ಆದರೆ, ಶೆಲ್ ಪಾಕಿಸ್ತಾನದ ಷೇರುಗಳನ್ನು ಯಾರು ಖರೀದಿಸುತ್ತಾರೆ ಎಂಬುದು ಪ್ರಶ್ನೆ.
ಪಾಕಿಸ್ತಾನದಲ್ಲಿ ಉದ್ಯಮ ವಾತಾವರಣದಲ್ಲಿ ನಿರುತ್ಸಾಹ
ಈಗ ಪಾಕಿಸ್ತಾನದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಒಂದೊಂದಾಗಿ ಹೊರಹೋಗುತ್ತಿರುವುದು ಒಟ್ಟಾರೆ ಆರ್ಥಿಕತೆ ಆಶಾದಾಯಕ ಎನಿಸಿಲ್ಲ. ಮೊದಲೇ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಹೊರಗಿನ ನೆರವು ಬಹಳ ಅಗತ್ಯ ಇದೆ. ಚೀನಾದಿಂದ ನಿರೀಕ್ಷಿಸಿದಷ್ಟು ಸಹಾಯ ಸಿಕ್ಕಿಲ್ಲ. ಐಎಂಎಫ್ನಿಂದ ಬರಬೇಕಾದ ಸಾಲವೇ ಬರುತ್ತಿಲ್ಲ. ಈಗ ಪ್ರಮುಖ ಉದ್ದಿಮೆಗಳು ನಿರ್ಗಮಿಸುತ್ತಿರುವುದು ಅದರ ಪರಿಸ್ಥಿತಿಯನ್ನು ಇನ್ನಷ್ಟು ಶೋಚನೀಯಗೊಳಿಸಿದೆ.
ಪಾಕಿಸ್ತಾನದ ಸೋಷಿಯಲ್ ಮೀಡಿಯಾದಲ್ಲಿ ಶೆಲ್ ಕಂಪನಿ ನಿರ್ಗಮನದ ಸುದ್ದಿ ಚರ್ಚೆಯಲ್ಲಿದೆ. ಬಹಳ ಜನರು ಪಾಕಿಸ್ತಾನವನ್ನು ಅಲ್ಲಾಹುವೇ ಕಾಪಾಡಬೇಕು ಎಂದು ಕಾಮೆಂಟ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Thu, 15 June 23