ನವದೆಹಲಿ, ಡಿಸೆಂಬರ್ 29: ಜನವರಿ ಅಥವಾ ಫೆಬ್ರುವರಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಭಾರೀ ಕಡಿತ (fuel price cut) ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ವಾಹಿನಿ ವರದಿ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳಿಂದ ಮಾಹಿತಿ ಸಿಕ್ಕಿರುವುದಾಗಿ ಈ ವರದಿಯಲ್ಲಿ ಹೇಳಲಾಗಿದ್ದು, ಅದರ ಪ್ರಕಾರ ಪೆಟ್ರೋಲ್, ಡೀಸಲ್ ಬೆಲೆ ಲೀಟರ್ಗೆ 10 ರೂವರೆಗೂ ಇಳಿಕೆ ಮಾಡಬಹುದು. ಕೆಲ ದಿನಗಳ ಹಿಂದೆಯೂ ಟಿವಿ9ನಲ್ಲೂ ಈ ಬಗ್ಗೆ ವರದಿ ಬಂದಿದ್ದು, ಪೆಟ್ರೋಲ್ ಬೆಲೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಬಹಳ ಕಾಲ ಬೆಲೆ ಇಳಿಕೆ ಇದ್ದದ್ದು ಒಂದು ಕಾರಣವಾದರೆ, ಭಾರತದ ತೈಲ ಮಾರುಕಟ್ಟೆ ಕಂಪನಿಗಳು ನಷ್ಟದ ಹಾದಿಯಿಂದ ಈಗ ಲಾಭದ ಹಳಿಗೆ ಬಂದಿರುವುದೂ ಇನ್ನೊಂದು ಕಾರಣವಾಗಿದೆ. ಹೀಗಾಗಿ, ಸರ್ಕಾರ ಸಾರ್ವಜನಿಕರಿಗೆ ಪೆಟ್ರೋಲ್ ಬೆಲೆ ಇಳಿಕೆ ಮಾಡಲು ಮುಂದಾಗಿರಬಹುದು.
ಕಳೆದ ವರ್ಷ ಮೇ (2022ರಲ್ಲಿ) ತಿಂಗಳಲ್ಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಲೀಟರ್ಗೆ ಕ್ರಮವಾಗಿ 8 ಮತ್ತು 6 ರುಪಾಯಿಯಷ್ಟು ಕಡಿಮೆ ಮಾಡಿತ್ತು. ಹಾಗೆಯೇ, 2022ರ ಮೇ 22ರ ಬಳಿಕ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾದರೂ, ಇಳಿಕೆಯಾದರೂ ಇಲ್ಲಿ ಯಾವುದೇ ವ್ಯತ್ಯಯವಾಗದಂತೆ ನಿಯಂತ್ರಿಸಲಾಗುತ್ತಿದೆ.
ಕುತೂಹಲ ಎಂದರೆ 2021ರ ಅಕ್ಟೋಬರ್ ತಿಂಗಳಿಂದ 2023ರ ಅಕ್ಟೋಬರ್ ತಿಂಗಳವರೆಗೆ ಎರಡು ವರ್ಷದ ಅವಧಿಯಲ್ಲಿ ಹೆಚ್ಚಿನ ದೇಶಗಳಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾದರೆ, ಭಾರತದಲ್ಲಿ ಒಂದು ಪ್ರತಿಶತದಷ್ಟು ಬೆಲೆ ಇಳಿಕೆ ಆಗಿದೆ. ಭಾರತದ ಎಲ್ಲಾ ನೆರೆಯ ದೇಶಗಳಲ್ಲೂ ಶೇ. 50ಕ್ಕಿಂತ ಹೆಚ್ಚು ಪೆಟ್ರೋಲ್ ದುಬಾರಿಯಾಗಿದೆ. ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ ಇತ್ಯಾದಿ ಹಲವು ದೇಶಗಳಲ್ಲೂ ಪೆಟ್ರೋಲ್ ಬೆಲೆ ಏರಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಸಾಧ್ಯತೆ; ಚುನಾವಣೆಯೊಂದೇ ಕಾರಣವಲ್ಲ; ಮತ್ತಿನ್ನೇನು ಕಾರಣ?
ರಷ್ಯಾದಿಂದ ತುಸು ಕಡಿಮೆ ಬೆಲೆಗೆ ಕಚ್ಛಾ ತೈಲ ಸಿಕ್ಕಿರುವುದು ಮತ್ತು ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದು ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳವಾಗದಂತೆ ನೋಡಿಕೊಳ್ಳಲು ಅನುಕೂಲವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ