ಪೆಟ್ರೋಲ್, ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಸಾಧ್ಯತೆ; ಚುನಾವಣೆಯೊಂದೇ ಕಾರಣವಲ್ಲ; ಮತ್ತಿನ್ನೇನು ಕಾರಣ?

Petrol, Diesel May Become Cheaper: ಭಾರತದಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕಡಿಮೆ ಆಗದೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಆಗಬಹುದು ಎನ್ನಲಾಗುತ್ತಿದೆ. ನಷ್ಟದಲ್ಲಿದ್ದ ತೈಲ ಮಾರುಕಟ್ಟೆ ಕಂಪನಿಗಳು ಈ ವರ್ಷ ಲಾಭದ ಹಳಿಗೆ ಬಂದಿರುವ ಹಿನ್ನೆಲೆಯಲ್ಲಿ ಬೆಲೆ ಕಡಿಮೆ ಮಾಡುವ ಸಾಧ್ಯತೆ ಇದೆ. 2022ರಲ್ಲಿ ಒಂದು ಲೀಟರ್ ಪೆಟ್ರೋಲ್ ಮಾರಾಟದಿಂದ ತೈಲ ಕಂಪನಿಗಳಿಗೆ 17 ರೂ ನಷ್ಟ ಆಗಿತ್ತು. ಈ ವರ್ಷ 10 ರೂ ಲಾಭ ಮಾಡಿವೆ.

ಪೆಟ್ರೋಲ್, ಡೀಸೆಲ್ ಬೆಲೆ ಸದ್ಯದಲ್ಲೇ ಇಳಿಕೆ ಸಾಧ್ಯತೆ; ಚುನಾವಣೆಯೊಂದೇ ಕಾರಣವಲ್ಲ; ಮತ್ತಿನ್ನೇನು ಕಾರಣ?
ಪೆಟ್ರೋಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 11, 2023 | 5:22 PM

ನವದೆಹಲಿ, ಡಿಸೆಂಬರ್ 11: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol and Diesel Price) ಸದ್ಯದಲ್ಲೇ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಕಳೆದ ಒಂದು ವರ್ಷದಿಂದ ಅಧಿಕ ಕಾಲದಿಂದ ಪೆಟ್ರೋಲ್ ಬೆಲೆಯಲ್ಲಿ ವ್ಯತ್ಯಯವೇ ಆಗಿಲ್ಲ. ಸತತವಾಗಿ ಬೆಲೆ ಯಥಾಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈಗ ಪೆಟ್ರೋಲ್ ಬೆಲೆ ಇಳಿಯುತ್ತದೆ ಎನ್ನುವ ಸುದ್ದಿ ಗಮನಾರ್ಹ ಎನಿಸಿದೆ.

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಮುಂದಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಆದರೂ ಕೂಡ ಪೆಟ್ರೋಲ್ ಬೆಲೆ ಇಳಿಕೆಗೆ ಜಾಗತಿಕ ಕಚ್ಚಾ ತೈಲ ಬೆಲೆಗಳೂ ಒಂದು ಕಾರಣವಾಗಿವೆ.

ಕಚ್ಛಾ ತೈಲ ಬಹಳ ತಿಂಗಳಿಂದ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳಿಗೆ ಕಡಿಮೆ ಬೆಲೆಗೆ ಸರಬರಾಜು ಆಗುತ್ತಿದೆ. ಈಗ ಇನ್ನಷ್ಟು ಕಡಿಮೆ ಬೆಲೆಗೆ ತೈಲ ಸರಬರಾಜು ಆಗುತ್ತಿದೆ. ಬಹಳ ವರ್ಷಗಳ ಬಳಿಕ ಒಎಂಸಿಗಳು, ಅಂದರೆ ಇಂಡಿಯನ್ ಆಯಿಲ್​ನಂತಹ ತೈಲ ಮಾರುಕಟ್ಟೆ ಸಂಸ್ಥೆಗಳು ಲಾಭದ ಹಳಿಗೆ ಬಂದಿವೆ. 2022ರಲ್ಲಿ ಒಎಂಸಿಗಳು ಒಂದು ಲೀಟರ್ ಪೆಟ್ರೋಲ್​ ಮಾರಾಟದಲ್ಲಿ 17 ರೂ ಹಾಗೂ ಡೀಸೆಲ್​ನಿಂದ 35 ರೂ ನಷ್ಟ ಮಾಡಿಕೊಂಡಿದ್ದವು. ಈ ವರ್ಷ ಒಂದು ಲೀಟರ್ ಪೆಟ್ರೋಲ್ ಮೇಲೆ 8-10 ರೂ ಹಾಗೂ ಡೀಸೆಲ್ ಮೇಲೆ 3-4 ರೂ ಲಾಭ ಮಾಡಿಕೊಳ್ಳುತ್ತಿವೆ. ಈ ಕಾರಣಕ್ಕೆ ಲಾಭದ ಕೆಲ ಅಂಶವನ್ನು ಗ್ರಾಹಕರಿಗೆ ವರ್ಗಾಯಿಸಲು ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಈರುಳ್ಳಿ ರಫ್ತು ನಿಷೇಧದಿಂದ ಕೆಲ ವರ್ತಕರಿಗೆ ತೊಂದರೆ, ಸಾಮಾನ್ಯರಿಗೆ ಲಾಭ: ಐಎಎಸ್ ಅಧಿಕಾರಿ

ಭಾರತದ ಸರ್ಕಾರಿ ಸ್ವಾಮ್ಯದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್​ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಈ ಮೂರು ಸಂಸ್ಥೆಗಳು ಒಟ್ಟು ಸೇರಿ ಕಳೆದ ಕ್ವಾರ್ಟರ್​ನಲ್ಲಿ (ಜುಲೈನಿಂದ ಸೆಪ್ಟೆಂಬರ್) 28,000 ಕೋಟಿ ರೂ ಲಾಭ ಮಾಡಿದ್ದವು. ಈ ಕಂಪನಿಗಳ ನಷ್ಟದ ಹಂತ ಮುಗಿದಿರುವುದರಿಂದ ಗ್ರಾಹಕರಿಗೆ ಈ ಲಾಭ ವರ್ಗಾವಣೆ ಆಗಬೇಕೆಂಬುದು ಸರ್ಕಾರದ ನಿಲುವು. ಈ ನಿಟ್ಟಿನಲ್ಲಿ ಸರ್ಕಾರವು ಒಎಂಸಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಸರ್ಕಾರ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಬೆಲೆಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಜೋಡಿಸಿದೆ. ಆದರೂ ಕೂಡ ಕೆಲ ತಿಂಗಳಿಂದ ಪೆಟ್ರೋಲ್ ಬೆಲೆಯಲ್ಲಿ ವ್ಯತ್ಯಯ ಆಗಿರಲಿಲ್ಲ. ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆ ಇಳಿದರೂ ಇಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಆಗಿರಲಿಲ್ಲ. ಭಾರೀ ನಷ್ಟದಲ್ಲಿದ್ದ ತೈಲ ಮಾರುಕಟ್ಟೆ ಕಂಪನಿಗಳು ಅಗ್ಗದ ಕಚ್ಛಾ ತೈಲದಿಂದ ಲಾಭ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದ್ದರಿಂದ ಪೆಟ್ರೋಲ್ ಬೆಲೆ ಇಳಿಕೆ ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Mon, 11 December 23