
ಪಾಟ್ನಾ, ನವೆಂಬರ್ 14: ಬಿಹಾರದಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಮತ್ತೆ ಚುನಾವಣೆ (Bihar elections) ಗೆದ್ದಿದೆ. ಚುನಾವಣೆಗೆ ಮುನ್ನವೇ ಭರಪೂರ ಉಚಿತ ಕೊಡುಗೆಗಳನ್ನು (freebies) ಕೊಡಲು ಆರಂಭಿಸಿದ ಎನ್ಡಿಎ ಈಗ ತನ್ನ ಭರವಸೆಯನ್ನು ಮುಂದಿನ ಐದು ವರ್ಷ ಉಳಿಸಿಕೊಂಡು ಹೋಗಬೇಕಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಪ್ರಯೋಗ ಈಗ ಪಕ್ಷಾತೀತವಾಗಿ ಎಲ್ಲರನ್ನೂ ಸೆಳೆದಿದೆ. ಉಚಿತ ಕೊಡುಗೆಗಳನ್ನು ನೀಡಲು ದೊಡ್ಡ ಪೈಪೋಟಿಯೇ ನಡೆದಿದೆ. ಅದರ ಮುಂದುವರಿದ ಭಾಗವೇ ಬಿಹಾರದ ಸ್ಥಿತಿ.
ಬಿಹಾರದಲ್ಲಿ ಉಚಿತ ಕೊಡುಗೆಗಳಿಂದ ಸರ್ಕಾರಕ್ಕೆ ಆಗುವ ಹೊರೆ 33,000 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಬಿಹಾರದ ಬಜೆಟ್ ಗಾತ್ರ ಸುಮಾರು ಮೂರರಿಂದ ಮೂರೂವರೆ ಲಕ್ಷ ಕೋಟಿ ರೂ. ಬಿಹಾರದಲ್ಲಿ ಸ್ವಂತವಾಗಿ ಸಿಗುವ ತೆರಿಗೆ ಆದಾಯ 54,300 ಕೋಟಿ ರೂ. ಶೇ. 60ರಷ್ಟು ಸ್ವಂತ ತೆರಿಗೆಗಳಿಗೆ ಸಮವಾಗಿವೆ ಈ ಉಚಿತ ಕೊಡುಗೆಗಳು.
ಇದನ್ನೂ ಓದಿ: ‘ಜಂಗಲ್ರಾಜ್’ನಿಂದ ಶೂನ್ಯ ಮರು ಮತದಾನದವರೆಗೆ, ಬಿಹಾರ ಮತದಾನ ಸಂಸ್ಕೃತಿಯಲ್ಲಿ ಐತಿಹಾಸಿಕ ಬದಲಾವಣೆ
ಕ್ಯಾಪಿಟಲ್ ಔಟ್ಲೇ (Capital Outlay), ಅಂದರೆ ಸರ್ಕಾರದ ಬಂಡವಾಳ ವೆಚ್ಚದ ಶೇ. 80ರಷ್ಟು ಹಣವು ಉಚಿತ ಕೊಡುಗೆಗಳಿಗೆ ಹೋಗುತ್ತವೆ. ಬಂಡವಾಳ ವೆಚ್ಚ ಒಂದು ಆರ್ಥಿಕತೆಗೆ ಬಹಳ ಮುಖ್ಯವಾದ ಸಂಗತಿ. ದೂರಗಾಮಿ ಅಭಿವೃದ್ಧಿಗೆ ಈ ವೆಚ್ಚ ಬಹಳ ಮುಖ್ಯ.
ಭಾರತದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಬಿಹಾರವೂ ಇದೆ. ಇಲ್ಲಿ ಸೃಷ್ಟಿಯಾಗುವ ತೆರಿಗೆ ಆದಾಯ ಬಹಳ ಕಡಿಮೆ. ಅದರ ಒಟ್ಟು ತೆರಿಗೆ ಆದಾಯದಲ್ಲಿ ಕೇಂದ್ರದಿಂದ ಸಿಗುವ ಪಾಲೇ ಅಧಿಕ. ಹೀಗೆ, ಕೇಂದ್ರದ ನೆರವಿನ ಊರುಗೋಲು ಇಟ್ಟುಕೊಂಡಿರುವ ಬಿಹಾರ ರಾಜ್ಯಕ್ಕೆ ಉಚಿತ ಕೊಡುಗೆಗಳು ಬೇಕಾ ಎನ್ನುವ ಪ್ರಶ್ನೆಯಂತೂ ಕಾಡಬಹುದು.
ಇದನ್ನೂ ಓದಿ: ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್ಐಪಿಎಫ್ಪಿ ನಿರೀಕ್ಷೆ
ಕರ್ನಾಟಕ ಸರ್ಕಾರ ಕೂಡ ಸಾಕಷ್ಟು ಫ್ರೀಬೀಗಳನ್ನು ನೀಡುತ್ತಿದೆ. ಕರ್ನಾಟಕಕ್ಕೆ ಅಧಿಕ ತೆರಿಗೆ ಆದಾಯ ಸೃಷ್ಟಿಸುವ ಶಕ್ತಿ ಇದೆ. ಸಾಕಷ್ಟು ಉದ್ಯಮಗಳು ಮತ್ತು ಉದ್ಯಮ ವಾತಾವರಣ ಕರ್ನಾಟಕದಲ್ಲಿದೆ. ಆದರೂ ಕೂಡ ಅಭಿವೃದ್ಧಿಪರ ಯೋಜನೆಗಳಿಗೆ ವ್ಯಯಿಸಲು ಇಲ್ಲಿಯ ಸರ್ಕಾರ ಪರದಾಡುತ್ತಿದೆ. 4 ಲಕ್ಷ ಕೋಟಿ ರೂಗಿಂತ ಅಧಿಕ ಸಾಲ ಹೊಂದಿರುವ, ಮತ್ತು ಆದಾಯಕ್ಕೆ ಕೇಂದ್ರವನ್ನೇ ಹೆಚ್ಚಾಗಿ ಅವಲಂಬಿಸಿರುವ ಬಿಹಾರ ರಾಜ್ಯಕ್ಕೆ ಈ ಉಚಿತ ಕೊಡುಗೆಗಳು ಎಷ್ಟು ಅನುಕೂಲ, ಅನನಕೂಲ ತರುತ್ತವೆ ಎನ್ನುವುದನ್ನು ಕಾಲವೇ ಉತ್ತರಿಸಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Fri, 14 November 25