ನವದೆಹಲಿ, ಜೂನ್ 11: ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ ಸಂಸ್ಥೆಯನ್ನು ಖಾಸಗಿಕರಣಗೊಳಿಸುವ (BPCL privatisation) ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ನೂತನ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ ಎಂದು ಬಿಸಿನೆಸ್ ಟುಡೇ ವಾಹಿನಿ ವರದಿ ಮಾಡಿದೆ. ಹೆಚ್ಚಿನ ಮಟ್ಟದಲ್ಲಿ ಆದಾಯ ಗಳಿಸುತ್ತಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸರ್ಕಾರದ ನೀತಿಯನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಪಿಸಿಎಲ್ ಮಾರಾಟ ಮಾಡುವ ಸಾಧ್ಯತೆಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
‘ಮಾರಾಟಕ್ಕಿಡಲಾಗಿದ್ದ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತವನ್ನು ಬಿಪಿಸಿಎಲ್ ಮೊದಲ ಮೂರು ಕ್ವಾರ್ಟರ್ನಲ್ಲಿ ಗಳಿಸಿದೆ’ ಎಂದು ಪುರಿ ಹೇಳಿದ್ದಾರೆ. ಹಿಂದಿನ ಸರ್ಕಾರದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿದ್ದ ಹರ್ದೀಪ್ ಸಿಂಗ್ ಪುರಿ ಈ ಬಾರಿ ಪೆಟ್ರೋಲಿಯಂ ಖಾತೆ ಪಡೆದಿದ್ದಾರೆ. ಇವತ್ತು ಸಚಿವರಾಗಿ ಅವರದ್ದು ಮೊದಲ ದಿನವಾಗಿದ್ದು, ತಮ್ಮ ಸಚಿವಾಲಯದ ನೀತಿಯನ್ನು ಸ್ಪಷ್ಟಪಡಿಸಿದ್ದಾರೆ.
ಭಾರತ್ ಪೆಟ್ರೋಲಿಯಂ ನಿಗಮವು 2023-24ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬರೋಬ್ಬರಿ 19,000 ಕೋಟಿ ರೂಗಳಷ್ಟು ನಿವ್ವಳ ಲಾಭ ಮಾಡಿದೆ. ಮೂರನೇ ಕ್ವಾರ್ಟರ್ನಲ್ಲಿ ನಿವ್ವಳ ಲಾಭ ಶೇ. 82ರಷ್ಟು ಹೆಚ್ಚಳವಾಗಿ 3,181.42 ಕೋಟಿ ರೂ ಆಗಿದೆ. ಒಟ್ಟು ಆದಾಯವು ಆ ಮೂರನೇ ಕ್ವಾರ್ಟರ್ನಲ್ಲಿ 1.30 ಲಕ್ಷ ಕೋಟಿ ರೂನಷ್ಟಿದೆ.
ಇಂಡಿಯನ್ ಆಯಿಲ್ ಬಳಿಕ ಭಾರತದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಬಿಪಿಸಿಎಲ್ ಆಗಿದೆ. ಮುಂಬೈ, ಕೊಚ್ಚಿ ಮತ್ತು ಮಧ್ಯಪ್ರದೇಶದಲ್ಲಿ ಇದರ ರಿಫೈನರಿ ಘಟಕಗಳಿವೆ. ರಿಲಾಯನ್ಸ್ ಮತ್ತು ಇಂಡಿಯನ್ ಆಯಿಲ್ ಬಳಿಕ ಅತಿದೊಡ್ಡ ಆಯಿಲ್ ರಿಫೈನಿಂಗ್ ಸಾಮರ್ಥ್ಯ ಇರುವುದು ಬಿಪಿಸಿಎಲ್ಗೆ.
ಹಿಂದಿನ ಸರ್ಕಾರದ ಬಂಡವಾಳ ಹಿಂತೆಗೆತದ ಅಜೆಂಡಾದಲ್ಲಿ ಬಿಪಿಸಿಎಲ್ ಮತ್ತು ಏರ್ ಇಂಡಿಯಾ ಇತ್ತು. ಬಿಪಿಸಿಎಲ್ನ ಶೇ. 52.98ರಷ್ಟು ಪಾಲನ್ನು ಮಾರಾಟ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಈ ಮೂಲಕ 45,000 ಕೋಟಿ ರೂ ಗಳಿಸುವ ನಿರೀಕ್ಷೆ ಇತ್ತು. ಸೌದಿ ಅರಾಮ್ಕೋ, ಅಬುಧಾಬಿ ನ್ಯಾಷನಲ್ ಆಯಿಲ್ ಕೋ, ಎಕ್ಸಾನ್ ಮೋಬಿಲ್ ಸಂಸ್ಥೆಗಳು ಬಿಪಿಸಿಎಲ್ನ ಬಹುಪಾಲನ್ನು ಖರೀದಿಸಲು ಆಸಕ್ತಿ ತೋರಿದವರಾದರೂ ಯಾರಿಂದಲೂ ಬಿಡ್ ಸಲ್ಲಿಕೆ ಆಗಲಿಲ್ಲ.
ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು
ಇದೇ ವೇಳೆ ಬಿಪಿಸಿಎಲ್ ಆದಾಯ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಲಾಭ ಕೂಡ ಚೆನ್ನಾಗಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತೈಲ ಸಂಸ್ಥೆಯನ್ನು ಖಾಸಗಿಗೆ ಕೊಡುವ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ