ರಾಜ್ಯಗಳಿಗೆ 1.39 ಲಕ್ಷ ಕೋಟಿ ರೂ ತೆರಿಗೆ ಹಂಚಿದ ಕೇಂದ್ರ; ಬಿಹಾರಕ್ಕೆ ಬಂಪರ್; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ರಾಜ್ಯವಾರು ಪಟ್ಟಿ

Tax devolution for June 2024: ದೇಶವ್ಯಾಪಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಶೇ. 41ರಷ್ಟು ಪಾಲನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ರಾಜ್ಯಗಳಿಗೆ ಒಟ್ಟು 1.39 ಲಕ್ಷ ಕೋಟಿ ರೂ ತೆರಿಗೆ ಹಣವನ್ನು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಶ್ಚಿಮಬಂಗಾಳ ರಾಜ್ಯಗಳಿಗೆ ಅತಿಹೆಚ್ಚು ತೆರಿಗೆ ಹಂಚಿಕೆ ಆಗಿದೆ. ಕೇಂದ್ರಕ್ಕೆ ತೆರಿಗೆ ಸಂಗ್ರಹಿಸಿಕೊಡುವುದರಲ್ಲಿ ಎರಡನೇ ಅತಿದೊಡ್ಡ ರಾಜ್ಯವೆನಿಸಿರುವ ಕರ್ನಾಟಕಕ್ಕೆ ಕೇವಲ 5,096 ಕೋಟಿ ರೂ ತೆರಿಗೆ ಸಿಕ್ಕಿದೆ.

ರಾಜ್ಯಗಳಿಗೆ 1.39 ಲಕ್ಷ ಕೋಟಿ ರೂ ತೆರಿಗೆ ಹಂಚಿದ ಕೇಂದ್ರ; ಬಿಹಾರಕ್ಕೆ ಬಂಪರ್; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ರಾಜ್ಯವಾರು ಪಟ್ಟಿ
ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2024 | 11:10 AM

ನವದೆಹಲಿ, ಜೂನ್ 11: ಜೂನ್ ತಿಂಗಳ ತೆರಿಗೆ ಆದಾಯದಲ್ಲಿ ರಾಜ್ಯಗಳಿಗೆ ಅವುಗಳ ಪಾಲನ್ನು ಕೇಂದ್ರ ಸರ್ಕಾರ ನಿನ್ನೆ ಹಂಚಿಕೆ (tax devolution) ಮಾಡಿದೆ. ಈ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರಗಳಿಗೆ ಒಟ್ಟು 1.39 ಲಕ್ಷ ಕೋಟಿ ರು ಹಣವನ್ನು ಹಣಕಾಸು ಸಚಿವಾಲಯ (Finance ministry) ಬಿಡುಗಡೆ ಮಾಡಿದೆ. ಮಾಮೂಲಿಯಂತೆ ಈ ಬಾರಿಯೂ ಉತ್ತರಪ್ರದೇಶಕ್ಕೆ ಅತಿಹೆಚ್ಚು ಪಾಲು ಸಿಕ್ಕಿದೆ. ಆ ಅತಿದೊಡ್ಡ ರಾಜ್ಯಕ್ಕೆ 25 ಸಾವಿರ ಕೋಟಿ ರೂಗೂ ಹೆಚ್ಚು ತೆರಿಗೆ ಹಣ ಸಿಕ್ಕಿದೆ. ಮಹಾರಾಷ್ಟ್ರ ಬಳಿಕ ಅತಿಹೆಚ್ಚು ತೆರಿಗೆ ಸಂಗ್ರಹಿಸಿಕೊಡುವ ಕರ್ನಾಟಕ ರಾಜ್ಯಕ್ಕೆ ಜೂನ್ ತಿಂಗಳಲ್ಲಿ ಸಿಕ್ಕಿರುವುದು 5,096 ಕೋಟಿ ರೂ ಮಾತ್ರವೇ.

ವಿವಿಧ ರಾಜ್ಯಗಳಿಂದ ಸಂಗ್ರಹವಾಗುವ ಜಿಎಸ್​ಟಿ ತೆರಿಗೆ ಹಣವನ್ನು ಮಾಸಿಕವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಒಟ್ಟು ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ. 41ರಷ್ಟು ಪಾಲು ನೀಡಲಾಗುತ್ತದೆ. ಜೂನ್ ತಿಂಗಳಲ್ಲಿ ಮಾಸಿಕ ಬಾಬ್ತಿನ ಜೊತೆಗೆ ಒದು ಹೆಚ್ಚುವರಿ ಕಂತನ್ನೂ ಸೇರಿಸಲಾಗಿದೆ. ಎಲ್ಲವೂ ಸೇರಿ ಒಟ್ಟು 1,39,750 ಕೋಟಿ ರೂ ಆಗಿದೆ.

ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್​ನಲ್ಲಿ 2024-25ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 12.19 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ ಮಾಡಲು ಯೋಜಿಸಲಾಗಿದೆ. ಇಲ್ಲಿಯವರೆಗೆ 2.8 ಲಕ್ಷ ಕೋಟಿ ರೂ ಹಂಚಿಕೆ ಮಾಡಲಾಗಿದೆ. ಅಂದರೆ ಏಪ್ರಿಲ್​ 1ರಿಂದ ಆರಂಭವಾಗಿ ಜೂನ್ 10ರವರೆಗೆ 2.8 ಲಕ್ಷ ಕೋಟಿ ರೂ ತೆರಿಗೆ ಹಣವನ್ನು ರಾಜ್ಯಗಳಿಗೆ ಕೊಡಲಾಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್ 17ನೇ ಕಂತು ಬಂತು; 20,000 ಕೋಟಿ ರೂ ಹಣ ಬಿಡುಗಡೆ

2024ರ ಜೂನ್​ನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾದ ತೆರಿಗೆ

ಒಟ್ಟು ತೆರಿಗೆ: 1,39,750.92 ಕೋಟಿ ರೂ

  1. ಉತ್ತರಪ್ರದೇಶ: 25,069.88 ಕೋಟಿ ರೂ
  2. ಬಿಹಾರ: 14,056.12 ಕೋಟಿ ರೂ
  3. ಮಧ್ಯಪ್ರದೇಶ: 10,970.44 ಕೋಟಿ ರೂ
  4. ಪಶ್ಚಿಮ ಬಂಗಾಳ: 10,513 ಕೋಟಿ ರೂ
  5. ಮಹಾರಾಷ್ಟ್ರ: 8,828.08 ಕೋಟಿ ರೂ
  6. ರಾಜಸ್ಥಾನ: 8,421.38 ಕೋಟಿ ರೂ
  7. ಒಡಿಶಾ: 6,327.92 ಕೋಟಿ ರೂ
  8. ತಮಿಳುನಾಡು: 5,700.44 ಕೋಟಿ ರೂ
  9. ಆಂಧ್ರಪ್ರದೇಶ: 5,655.72 ಕೋಟಿ ರೂ
  10. ಕರ್ನಾಟಕ: 5,096.72 ಕೋಟಿ ರೂ
  11. ಗುಜರಾತ್: 4,860.56 ಕೋಟಿ ರೂ
  12. ಛತ್ತೀಸ್​ಗಡ್: 4,761.30 ಕೋಟಿ ರೂ
  13. ಜಾರ್ಖಂಡ್: 4,621.58 ಕೋಟಿ ರೂ
  14. ಅಸ್ಸಾಮ್: 4,371.38 ಕೋಟಿ ರೂ
  15. ತೆಲಂಗಾಣ: 2,937.58 ಕೋಟಿ ರೂ
  16. ಕೇರಳ: 2,690.20 ಕೋಟಿ ರೂ
  17. ಪಂಜಾಬ್: 2,525.32 ಕೋಟಿ ರೂ
  18. ಅರುಣಾಚಲಪ್ರದೇಶ: 2,455.44 ಕೋಟಿ ರೂ
  19. ಉತ್ತರಾಖಂಡ್: 1,562.44 ಕೋಟಿ ರೂ
  20. ಹರ್ಯಾಣ: 1,527.48 ಕೋಟಿ ರೂ
  21. ಹಿಮಾಚಲಪ್ರದೇಶ: 1,159.92 ಕೋಟಿ ರೂ
  22. ಮೇಘಾಲಯ: 1,071.90 ಕೋಟಿ ರೂ
  23. ಮಣಿಪುರ: 1,000.60 ಕೋಟಿ ರೂ
  24. ತ್ರಿಪುರ: 989.44 ಕೋಟಿ ರೂ
  25. ನಾಗಾಲ್ಯಾಂಡ್: 795.20 ಕೋಟಿ ರೂ
  26. ಮಿಝೋರಾಂ 698.78 ಕೋಟಿ ರೂ
  27. ಸಿಕ್ಕಿಂ: 542.22 ಕೋಟಿ ರೂ
  28. ಗೋವಾ: 539.42 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ