
ನವದೆಹಲಿ, ಜೂನ್ 2: ಬ್ರೆಜಿಲ್ ದೇಶದ ವಿಮಾನ ತಯಾರಕಾ ಸಂಸ್ಥೆಯಾದ ಎಂಬ್ರೇರ್ (Embraer) ಭಾರತದಲ್ಲಿ ತನ್ನ ವಿಮಾನಗಳನ್ನು ಮಾರಲು ಯೋಜಿಸುತ್ತಿದೆ. ಭಾರತದಲ್ಲಿ ವೈಮಾನಿಕ ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಬೆಳವಣಿಗೆ ಹೊಂದುತ್ತಿರುವುದು, ಅದರ ಫಲ ಪಡೆಯಲು ಬ್ರೆಜಿಲಿಯನ್ ಕಂಪನಿ ಮುಂದಾಗಿದೆ. ವರದಿಗಳ ಪ್ರಕಾರ ಭಾರತದ ಎರಡು ಪ್ರಮುಖ ಏರ್ಲೈನ್ ಸರ್ವಿಸ್ ಕಂಪನಿಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ಜೊತೆ ಎಂಬ್ರೇರ್ ಮಾತುಕತೆ ನಡೆಸುತ್ತಿದೆ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಕಂಪನಿ ಏರ್ಬಸ್ ಮತ್ತು ಬೋಯಿಂಗ್ ವಿಮಾನಗಳನ್ನು ಖರೀದಿಸಲು ಹೊರಟಿದೆ. 2023ರಲ್ಲಿ ಈ ಸಂಸ್ಥೆಯು ದಾಖಲೆಯ 470 ವಿಮಾನಗಳಿಗೆ ಆರ್ಡರ್ ನೀಡಿತ್ತು. ಈಗ ಮತ್ತಷ್ಟು 200 ಏರ್ಕ್ರಾಫ್ಟ್ಗಳನ್ನು ಪಡೆಯಲು ಹೊರಟಿದೆ.
ಇದನ್ನೂ ಓದಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಿಸಲು ಹಲವು ದೇಶಗಳಿಂದ ಆಸಕ್ತಿ; ಆದರೆ, ಟೆಸ್ಲಾ ನಿರಾಸಕ್ತಿ: ಸಚಿವ ಕುಮಾರಸ್ವಾಮಿ
ಇನ್ನೊಂದೆಡೆ, ಭಾರತದ ಅತಿದೊಡ್ಡ ಏವಿಯೇಶನ್ ಕಂಪನಿ ಎನಿಸಿದ ಇಂಡಿಗೋ 30 ಏರ್ಬಸ್ ವಿಮಾನಗಳಿಗೆ ಆರ್ಡರ್ ಕೊಟ್ಟಿದೆ. ಇದು ಒಟ್ಟು 900ಕ್ಕೂ ಅಧಿಕ ವಿಮಾನಗಳಿಗೆ ಆರ್ಡರ್ ಕೊಟ್ಟಿರುವುದು ಗಮನಾರ್ಹ ಸಂಗತಿ.
ಜಾಗತಿಕವಾಗಿ, ಪ್ರಯಾಣಿಕ ವಿಮಾನಗಳನ್ನು ತಯಾರಿಸುವ ಕಂಪನಿಗಳ ಪೈಕಿ ಅಮೆರಿಕದ ಬೋಯಿಂಗ್ ಮತ್ತು ಯೂರೋಪ್ನ ಏರ್ಬಸ್ ಬಹಳ ಪ್ರಮುಖವಾದುವು. ವಿಶ್ವದ ಶೇ. 90ಕ್ಕಿಂತ ಅಧಿಕ ವಿಮಾನಗಳು ಈ ಎರಡು ಕಂಪನಿಗಳಿಂದ ತಯಾರಿಸಿದವೇ ಆಗಿದೆ. ಈ ಮಧ್ಯೆ ಬ್ರೆಜಿಲ್ನ ಎಂಬ್ರೇರ್ ಮೊದಲಾದ ಕಂಪನಿಗಳೂ ಕೂಡ ಪ್ರಯಾಣಿಕ ವಿಮಾನಗಳನ್ನು ತಯಾರಿಸಬಲ್ಲುವು.
ಈ ಬ್ರೆಜಿಲಿಯನ್ ಕಂಪನಿ ವಿವಿಧ ವಿಭಾಗಗಳಲ್ಲಿ ವಿಮಾನಗಳನ್ನು ತಯಾರಿಸುತ್ತದೆ. ಭಾರತದಲ್ಲಿ ಸುಮಾರು 50 ಎಂಬ್ರೇರ್ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಡಿಫೆನ್ಸ್ ವಿಭಾಗದಲ್ಲೂ ಇದರ ವಿಮಾನಗಳಿವೆ.
ಇದನ್ನೂ ಓದಿ: ಡಬ್ಲ್ಯುಟಿಒದಲ್ಲಿ ಭಾರತ ನೀಡಿದ ನೋಟೀಸ್ಗೆ ಅಮೆರಿಕದ ನಿರ್ಲಕ್ಷ್ಯ; ಭಾರತದಿಂದ ಪ್ರತಿಸುಂಕ ವಿಧಿಸುವ ಸಾಧ್ಯತೆ
ಬ್ರೆಜಿಲ್ನ ಎಂಬ್ರೇರ್ ಕಂಪನಿ ಭಾರತದಲ್ಲಿ ಅಂಗ ಸಂಸ್ಥೆಯೊಂದನ್ನೂ ಆರಂಭಿಸಿದೆ. ತನ್ನ ವಿಮಾನಗಳ ತಯಾರಿಕೆಗೆ ಬೇಕಾದ ಕೆಲ ಬಿಡಿಭಾಗಗಳನ್ನು ಭಾರತದಿಂದಲೂ ಪಡೆಯುವ ಯೋಜನೆ ಹೊಂದಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೇ ತನ್ನ ವಿಮಾನಗಳ ತಯಾರಿಕೆ ನಡೆಸುವುದಕ್ಕೂ ಎಂಬ್ರೇರ್ ಸಿದ್ಧ ಇದೆ ಎನ್ನಲಾಗುತ್ತಿದ್ದು, ಮಹತ್ವದ ತಂತ್ರಜ್ಞಾನ ವರ್ಗಾವಣೆ, ತಯಾರಿಕಾ ಘಟಕ ಇತ್ಯಾದಿ ಯೋಜನೆಗಳು ಉಭಯ ದೇಶಗಳಿಗೂ ಅನುಕೂಲವಾಗಲಿದೆ ಎನ್ನುವ ಮಾತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ