RBI MPC Meet: ಆರ್ಬಿಐ ರಿಪೋದರ ಶೇ. 6ರಿಂದ ಶೇ. 5.50ಕ್ಕೆ ಇಳಿಕೆ ಸಾಧ್ಯತೆ: ಎಸ್ಬಿಐ ರಿಸರ್ಚ್ ವರದಿ ಅಂದಾಜು
RBI MPC Meet in June 2025: ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿಯ ಎಂಪಿಸಿ ಸಭೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಿಪೋದರ ಕಡಿತ ಮಾಡುವ ನಿರೀಕ್ಷೆ ಇದೆ. ಎಸ್ಬಿಐ ರಿಸರ್ಚ್ ರಿಪೋರ್ಟ್ವೊಂದರ ಪ್ರಕಾರ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಸಬಹುದು. ಅನಿಶ್ಚಿತ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಇದು ಅವಶ್ಯಕ ಎನ್ನುವುದು ಈ ವರದಿಯ ಅಭಿಪ್ರಾಯ.

ನವದೆಹಲಿ, ಜೂನ್ 2: ಸತತ ಎರಡು ಬಾರಿ ರಿಪೋ ದರ (repo rate) ಕಡಿತ ಮಾಡಿದ್ದ ಆರ್ಬಿಐ (RBI) ಈಗ ಹ್ಯಾಟ್ರಿಕ್ ಭಾರಿಸುವುದು ಖಚಿತವಾಗಿದೆ. ಹಿಂದಿನ ಎರಡು ಬಾರಿ ತಲಾ 25 ಮೂಲಾಂಕಗಳಷ್ಟು ಬಡ್ಡಿದರ ಕಡಿತ ಮಾಡಿದ್ದ ರಿಸರ್ವ್ ಬ್ಯಾಂಕ್ ಈ ಸಲ ಬರೋಬ್ಬರಿ 50 ಮೂಲಾಂಕಗಳಷ್ಟು ಇಳಿಕೆ ಮಾಡಬಹುದು. ಹೀಗೆಂದು ಎಸ್ಬಿಐ ರಿಸರ್ಚ್ನ ವರದಿಯೊಂದು ಊಹೆ ಮಾಡಿದೆ. ಇದೇನಾದರೂ ನಿಜವಾದಲ್ಲಿ ಆರ್ಬಿಐನ ರಿಪೋ ದರ ಅಥವಾ ಬಡ್ಡಿದರವು ಶೇ. 6ರಿಂದ ಶೇ. 5.50ಕ್ಕೆ ಇಳಿಕೆ ಆಗಬಹುದು.
ಬಡ್ಡಿದರ ಇಳಿಸಬೇಕೋ ಬೇಡವೋ ಎಂಬುದನ್ನು ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ನಿರ್ಧರಿಸುತ್ತದೆ. ಎರಡು ತಿಂಗಳಿಗೊಮ್ಮೆ ಈ ಸಮಿತಿಯ ಸಭೆ ನಡೆಯುತ್ತದೆ. ಅಲ್ಲಿ ರಿಪೋ ದರ ಇತ್ಯಾದಿ ವಿವಿಧ ಕ್ರಮಗಳ ಪರಿಷ್ಕರಣೆ ನಡೆಯುತ್ತದೆ. ಈ ಬಾರಿಯ ಆರ್ಬಿಐ ಎಂಪಿಸಿ ಸಭೆ ಜೂನ್ 4ರಂದು ಆರಂಭವಾಗುತ್ತದೆ. ಎರಡು ದಿನ ನಿಷ್ಕರ್ಷೆ ಬಳಿಕ ಜೂನ್ 6, ಶುಕ್ರವಾರ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಿಸಲು ಹಲವು ದೇಶಗಳಿಂದ ಆಸಕ್ತಿ; ಆದರೆ, ಟೆಸ್ಲಾ ನಿರಾಸಕ್ತಿ: ಸಚಿವ ಕುಮಾರಸ್ವಾಮಿ
50 ಮೂಲಾಂಕಗಳಷ್ಟು ಬಡ್ಡಿಕಡಿತದಿಂದ ಪ್ರಯೋಜನವೇನು?
ಜಾಗತಿಕವಾಗಿ ಅನಿಶ್ಚಿತ ಆರ್ಥಿಕ ಮತ್ತು ಹಣಕಾಸು ವಾತಾರಣ ಇದ್ದು, ಅದನ್ನು ಸರಿದೂಗಿಸಲು ಹೆಚ್ಚಿನ ಬಡ್ಡಿದರ ಕಡಿತ ಅವಶ್ಯಕ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಜೂನ್ ತಿಂಗಳ ಸಭೆಯಲ್ಲಿ 50 ಮೂಲಾಂಕಗಳಷ್ಟು ದರ ಇಳಿಕೆಯನ್ನು ನಿರೀಕ್ಷಿಸುತ್ತೇವೆ ಎಂದು ಎಸ್ಬಿಐನ ಎಕನಾಮಿಕ್ ರಿಸರ್ಚ್ ವಿಭಾಗವು ಅಭಿಪ್ರಾಯಪಟ್ಟಿದೆ.
ಬೇರೆ ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳ ಅಂದಾಜಿನಲ್ಲಿ ತುಸು ಭಿನ್ನತೆ ಇದೆ. ಹೆಚ್ಚಿನ ಜನರು 25 ಮೂಲಾಂಕಗಳಷ್ಟು ದರ ಕಡಿತ ಆಗಬಹುದು ಎನ್ನುವ ಅನಿಸಿಕೆ ನೀಡಿದ್ದಾರೆ.
ಎರಡು ವರ್ಷಗಳಿಂದ ಶೇ. 6.50ರಷ್ಟಿದ್ದ ಬಡ್ಡಿದರವನ್ನು ಆರ್ಬಿಐ ಫೆಬ್ರುವರಿಯಲ್ಲಿ 25 ಮೂಲಾಂಕಗಳು, ಹಾಗೂ ಏಪ್ರಿಲ್ನಲ್ಲಿ 25 ಮೂಲಾಂಕಗಳಷ್ಟು ಕಡಿತಗೊಳಿಸಿ ಬಡ್ಡಿದರವನ್ನು 6.00ಗೆ ತಂದು ನಿಲ್ಲಿಸಿದೆ. ಈಗ ಅದನ್ನು ಶೇ. 5.75ಕ್ಕೆ ಇಳಿಸುತ್ತದಾ ಅಥವಾ ಶೇ. 5.50ಕ್ಕೆ ಇಳಿಸುತ್ತದಾ ಕಾದು ನೋಡಬೇಕು.
ಇದನ್ನೂ ಓದಿ: ವ್ಯಾಪಾರ ಕುದುರಿಸಲು ಭಾರತದ ಇಂಡಿಗೋ, ಏರ್ ಇಂಡಿಯಾ ಜೊತೆ ಬ್ರೆಜಿಲ್ನ ಎಂಬ್ರೇರ್ ಮಾತುಕತೆ
ಬ್ಯಾಂಕ್ ಬಡ್ಡಿದರಗಳೂ ಇಳಿಕೆಯಾಗುವ ಸಾಧ್ಯತೆ
ಒಂದು ವೇಳೆ ಆರ್ಬಿಐ 50 ಮೂಲಾಂಕಗಳಷ್ಟು ಬಡ್ಡಿದರ ಇಳಿಸಿದರೆ ಬ್ಯಾಂಕುಗಳ ಸಾಲದ ದರಗಳೂ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಬ್ಯಾಂಕುಗಳ ಶೇ. 60ರಷ್ಟು ಸಾಲಗಳು ಇಬಿಎಲ್ಆರ್ನೊಂದಿಗೆ ಜೋಡಿತಗೊಂಡಿವೆ. ಶೇ. 36ರಷ್ಟು ಸಾಲಗಳು ಎಂಸಿಎಲ್ಆರ್ ಜೊತೆ ಲಿಂಕ್ ಆಗಿವೆ.
ಆರ್ಬಿಐ ರಿಪೋ ದರ ಇಳಿಸಿದಾಗ ಇಬಿಎಲ್ಆರ್ಗೆ ಜೋಡಿತವಾದ ಸಾಲಗಳ ದರವನ್ನು ಶೀಘ್ರದಲ್ಲೇ ಇಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾಲ ಪಡೆಯುವ ಗ್ರಾಹಕರಿಗೆ ಬಡ್ಡಿದರ ಇಳಿಸುವುದು ಬಿಡುವುದು ಬ್ಯಾಂಕುಗಳ ವಿವೇಚನೆಗೆ ಬಿಟ್ಟಿದ್ದು. ಆದರೆ, ಆರ್ಬಿಐನ ರಿಪೋದರವು ಒಂದು ರೀತಿಯಲ್ಲಿ ಬ್ಯಾಂಕುಗಳ ನಿರ್ಧಾರಕ್ಕೆ ಮಾನದಂಡವಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:43 pm, Mon, 2 June 25