ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳಿಗೆ PFI ನಂಟು: ಕೊಲೆಗೆ ವಿದೇಶದಿಂದ ಹಣದ ನೆರವು..!
ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸುತ್ತಿದೆ. 12 ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಎನ್ಐಎ ಅಧಿಕಾರಿಗಳ ಎದುರು ಸ್ಫೋಟಕ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗಳ ವಿವರವನ್ನು ಎನ್ಐಎ ಅಧಿಕಾರಿಗಳು ಪಡೆಯುತ್ತಿದ್ದಾರೆ. ಎನ್ಐಎ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ.

ಮಂಗಳೂರು, ಜೂನ್ 28: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (Mangaluru) ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ನಡೆಸುತ್ತಿದ್ದು, 12 ಮಂದಿ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಗೆ ನೆರವು ನೀಡಿದವರ ಬಗ್ಗೆ ಆರೋಪಿಗಳಿಂದ ಎನ್ಐಎ ತಂಡ ಮಾಹಿತಿ ಕಲೆ ಹಾಕಿತ್ತಿದೆ.
ಬಂಧಿತ ಬಹುತೇಕ ಆರೋಪಿಗಳಿಗೆ ನಿಷೇಧಿತ ಪಿಎಫ್ಐ ಸಂಘಟನೆ ಜೊತೆ ನಂಟಿದೆ. ಅಲ್ಲದೆ, ಪಿಎಫ್ಐ ಜೊತೆ ಗುರುತಿಸಿಕೊಂಡು ವಿದೇಶದಲ್ಲಿರುವ ಕೆಲವರು ಇವರಿಗೆ ಹಣದ ನೆರವು ನೀಡಿದ್ದಾರೆ. ಜೊತೆಗೆ ಸುಹಾಸ್ ಶೇಟ್ಟಿ ಹತ್ಯೆಗೆ ನೆರವು ನೀಡಿದವರು ಮಂಗಳೂರು ಮತ್ತು ವಿದೇಶದಲ್ಲಿದ್ದು, ಅವರ ಹೆಸರುಗಳನ್ನು ಆರೋಪಿಗಳು ಎನ್ಐಎ ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಸದ್ಯ ಎನ್ಐಎ ಅಧಿಕಾರಿಗಳು ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪಿಎಫ್ಐ ನಂಟಿನ ಬಗ್ಗೆ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಸುಹಾಸ್ ಹತ್ಯೆಗೆ ವಿದೇಶದಿಂದ ಫಂಡಿಂಗ್
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ವಿದೇಶದಿಂದ ಹಣ ಸಂದಾಯವಾಗಿದೆ. ಸದ್ಯ ಎನ್ಐಎ ಅಧಿಕಾರಿಗಳು 12 ಆರೋಪಿಗಳ ಬ್ಯಾಂಕ್ ಖಾತೆ ವಿವರ ಸಂಗ್ರಹಿಸುತ್ತಿದ್ದಾರೆ. ಕೆಲ ಸ್ಥಳೀಯ ವ್ಯಕ್ತಿಗಳಿಂದಲೂ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಎನ್ಐಎ ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಎನ್ಐಎ DySP ಪವನ್ ಕುಮಾರ್ ನೇತೃತ್ವದ ತಂಡ ನಡೆಸುತ್ತಿದೆ.
ಎನ್ಐಎ ತನಿಖೆಗೆ ಆಗ್ರಹಿಸಿದ್ದ ಕುಟುಂಬಸ್ಥರು
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಲು ಆರಂಭಿಸಿದಾಗ ಎನ್ಐಎಗೆ ಕೊಡುವ ಅಗತ್ಯವಿಲ್ಲ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಸುಹಾಸ್ ಶೆಟ್ಟಿ ಹೆತ್ತವರು ಎನ್ಐಎ ತನಿಖೆ ಮೂಲಕ ಮಾತ್ರ ತಮ್ಮ ಮಗನ ಸಾವಿಗೆ ನ್ಯಾಯ ಸಿಗುತ್ತೆ ಎಂದು ಹೇಳಿದ್ದರು. ಈ ನಡುವೆ ಸುಹಾಸ್ ಶೆಟ್ಟಿ ಹೆತ್ತವರು ರಾಜ್ಯಪಾಲರ ಮೂಲಕ ಪ್ರಕರಣವನ್ನು ಎನ್ಐಎಗೆ ನೀಡಲು ಒತ್ತಾಯಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸಂಸದ, ಶಾಸಕರು ಈ ಹತ್ಯೆಯ ಹಿಂದಿರುವ ಶಕ್ತಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಗಮನಕ್ಕೂ ತಂದಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆಯೇ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಿತ್ತು. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದ ಎನ್ಐಎ ಎಲ್ಲ 12 ಆರೋಪಿಗಳ ವಿಚಾರಣೆ ನಡೆಸುತ್ತಿದೆ.
ಸುಹಾಸ್ ಶೆಟ್ಟಿ ಕೊಲೆ
ಕಳೆದ ಗುರುವಾರ (ಮೇ.01) ದಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ 12 ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ. ಕೋರ್ಟ್ ಆರೋಪಿಗಳನ್ನು ಎನ್ಐಎ ವಶಕ್ಕೆ ನೀಡಿದೆ.
3 ತಿಂಗಳ ಹಿಂದೆಯೇ ಸುಹಾಸ್ ಕೊಲೆಗೆ ಸಿದ್ಧವಾಗಿತ್ತು ಸ್ಕೆಚ್
ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದ. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಸುಹಾಸ್ ಹತ್ಯೆಗೆ 50 ಲಕ್ಷಕ್ಕೂ ಹೆಚ್ಚು ಫಂಡ್, ಬಜ್ಪೆ ಹೆಡ್ ಕಾನ್ಸ್‌ಟೇಬಲ್ ಕುತಂತ್ರ: ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ
ಸುಹಾಸ್ ಕೊಲೆಗೆ ಹೇಗಿತ್ತು ಸಫ್ವಾನ್ ಪ್ಲಾನ್?
ಸುಹಾಸ್ ಶೆಟ್ಟಿ ಚಲನ ವಲನಗಳ ಮೇಲೆ ಪ್ರಮುಖ ಆರೋಪಿ ಸಫ್ವಾನ್ 15 ದಿನಗಳಿಂದ ಗಮನ ಇರಿಸಿದ್ದ. ಹುಡುಗರನ್ನು ಬಿಟ್ಟು ರೇಖಿ ಮಾಡಿಸಿದ್ದನು. ಚಿಕ್ಕಮಗಳೂರಿನ ಕಳಸಾದ ರಂಜಿತ್ ಹಾಗೂ ನಾಗರಾಜ್ 15 ದಿನಗಳಿಂದ ಸಫ್ವಾನ್ ಮನೆಯಲ್ಲೇ ಇದ್ದರು. ಸುಹಾಸ್ ಶೆಟ್ಟಿ ಬಜ್ಪೆಗೆ ಬರುವ ಬಗ್ಗೆ ಅಝರುದ್ಧಿನ್ ಮಾಹಿತಿ ನೀಡಿದ್ದನು. ಎಷ್ಟು ಗಂಟೆಗೆ ಸುಹಾಸ್ ಹೊರಡುತ್ತಾನೆ, ಅವನೊಂದಿಗೆ ಯಾರಿದ್ದಾರೆ ಎಂಬುದನ್ನು ಸಫ್ವಾನ್ಗೆ ಮಾಹಿತಿ ನೀಡಿದ್ದನು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sat, 28 June 25







