ಲಂಡನ್: ಯುಕೆ ದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿಗಾರಿಕೆ ಹಿನ್ನಡೆ ಕಂಡಿದ್ದು ಅದರ ಪರಿಣಾಮವಾಗಿ ಹಣ್ಣು ಸೊಪ್ಪು ತರಕಾರಿಗಳ ಕೊರತೆ ಕಾಡುತ್ತಿದೆ. ಕಳೆದ 2-3 ವಾರಗಳಿಂದ ಬ್ರಿಟನ್ ಸಲಾಡ್ ಕೊರತೆ ಅನುಭವಿಸುತ್ತಿದೆ. ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಗಳಲ್ಲಿ ಟೊಮೆಟೋ, ಸೌತೆಕಾಯಿ ಇತ್ಯಾದಿ ಸಲಾಡ್ ತರಕಾರಿಗಳು ಸಿಗುವುದು ದುರ್ಲಭವಾಗಿದೆ. ಇಂಗ್ಲೆಂಡ್ ದೇಶದ ಆಹಾರಪದ್ಧತಿಯಲ್ಲಿ ಸಲಾಡ್ ಪ್ರಮುಖವಾದುದು. ಕೋಸು, ಹುರಳಿಕಾಯಿ, ಬೀಟ್ರೂಟ್, ಸೌತೆಕಾಯಿ, ಟೊಮೆಟೋ, ಮೂಲಂಗಿ ಇತ್ಯಾದಿ ತರಕಾರಿಗಳು, ಹಾಗು ಬಸಳೆಸೊಪ್ಪು ಇತ್ಯಾದಿ ಸೊಪ್ಪುಗಳನ್ನು ಸಲಾಡ್ ಮಾಡಿ ತಿನ್ನುವ ಕ್ರಮ ಹೆಚ್ಚು ಚಾಲ್ತಿಯಲ್ಲಿದೆ. ಈಗ ಈ ಸೊಪ್ಪು ತರಕಾರಿಗಳ ಸರಬರಾಜು ತೀರಾ ಕಡಿಮೆ ಆಗಿರುವುದು ಅಲ್ಲಿನ ಜನಜೀವನಕ್ಕೆ ತೀರಾ ತೊಂದರೆ ಆಗಿದೆ.
ಟೆಸ್ಕೋ, ಆಸ್ಡಾ, ಮಾರಿಸನ್ಸ್, ಲಿಡಲ್ ಜಿಬಿ, ಆಲ್ಡಿ ಇತ್ಯಾದಿ ಕಂಪನಿಗಳ ಸೂಪರ್ಮಾರ್ಕೆಟ್ಗಳಲ್ಲಿ ಸಲಾಡ್ ಸೊಪ್ಪು ತರಕಾರಿಗಳ ಮಾರಾಟವನ್ನು ಸೀಮಿತಗೊಳಿಸಲಾಗಿದೆ. ಒಬ್ಬ ಗ್ರಾಹಕರಿಗೆ ಇಂತಿಷ್ಟು ಪ್ರಮಾಣಕ್ಕಿಂತ ಹೆಚ್ಚು ತರಕಾರಿಗಳನ್ನು ಕೊಡಲಾಗುತ್ತಿಲ್ಲ. ಅನೇಕ ಸೂಪರ್ಮಾರ್ಕೆಟ್ಗಳಲ್ಲಿ ಸೊಪ್ಪು ತರಕಾರಿಗಳೇ ಸಿಗುತ್ತಿಲ್ಲ ಎಂದು ತೋರಿಸುವಂತಹ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಂಚಿಕೆಯಾಗುತ್ತಿವೆ.
ಬ್ರಿಟನ್ ದೇಶಕ್ಕೆ ಈ ಸೊಪ್ಪು ಮತ್ತು ತರಕಾರಿಗಳು ಹೆಚ್ಚಾಗಿ ಬರುವುದು ದಕ್ಷಿಣ ಯೂರೋಪ್ ಮತ್ತು ಉತ್ತರ ಆಫ್ರಿಕಾದ ಭಾಗಗಳಿಂದ. ಆದರೆ, ಅಲ್ಲಿ ಹವಾಮಾನ ವೈಪರೀತ್ಯದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಂದಿಲ್ಲ. ಹೀಗಾಗಿ, ಬ್ರಿಟನ್ಗೆ ಈ ಸೊಪ್ಪು ತರಕಾರಿಗಳ ಸರಬರಾಜು ಕಡಿಮೆಯಾಗಿದೆ.
ಇದನ್ನೂ ಓದಿ: PIRI-100: ದುಬಾರಿ ವಸತಿ; ದಿಲ್ಲಿಯನ್ನೂ ಮೀರಿಸಿದ ಬೆಂಗಳೂರು; ಎಷ್ಟಿದೆ ರೇಟು?
ಈ ಬಿಕ್ಕಟ್ಟು ಬ್ರಿಟನ್ ಸರ್ಕಾರಕ್ಕೂ ಬಿಸಿ ಮುಟ್ಟಿಸಿದೆ. ಅಲ್ಲಿನ ಆಹಾರ ಮತ್ತು ಕೃಷಿ ಸಚಿವ ಮಾರ್ಕ್ ಸ್ಪೆನ್ಸರ್ ಇತ್ತೀಚೆಗೆ ಪ್ರಮುಖ ಸೂಪರ್ಮಾರ್ಕೆಟ್ ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ. ರೈತರ ಜೊತೆ ಸಂಪರ್ಕದಲ್ಲಿದ್ದು, ಅವರಿಂದ ಸರಬರಾಜು ಪಡೆಯುವ ಮಾರ್ಗ ಅವಲೋಕಿಸಿ. ಮುಂದೆ ಇಂಥ ಅನಿರೀಕ್ಷಿತ ಸಂದರ್ಭಗಳು ಎದುರಾದರೆ ಪರಿಸ್ಥಿತಿ ಹೇಗೆ ನಿಭಾಯಿಸಬಹುದು ಎಂದು ಚಿಂತಿಸಿ ಎಂದು ವರ್ತಕರಿಗೆ ಸಚಿವರು ತಿಳಿಹೇಳಿದರೆನ್ನಲಾಗಿದೆ.
ಎರಡು ತಿಂಗಳಿಂದ ಬ್ರಿಟನ್ನಲ್ಲಿ ಸಲಾಡ್ ಬಿಕ್ಕಟ್ಟು ಇದೆ. ಅಲ್ಲಿನ ಸರ್ಕಾರದ ಪ್ರಕಾರ ಇದು ಇನ್ನೂ ಒಂದು ತಿಂಗಳು ಮುಂದುವರಿಯಬಹುದು. ಸೂಪರ್ಮಾರ್ಕೆಟ್ ವರ್ತಕರು ಈ ಬಿಕ್ಕಟ್ಟು ಬೇಗ ನಿವಾರಣೆಯಾಗಿ ಮತ್ತೆ ಸೊಪ್ಪು ಮತ್ತು ತರಕಾರಿಗಳು ಯಥಾರೀತಿಯಲ್ಲಿ ಸರಬರಾಜು ಆಗಲು ಶುರುವಾಗಬಹುದು ಎಂದು ಆಶಯದಲ್ಲಿದ್ದಾರೆ.