ಪೇಟಿಎಂ ಷೇರುಬೆಲೆ ಪುಟಿದೇಳುತ್ತಿರುವ ಹೊತ್ತಿನಲ್ಲೇ ಜಾಗತಿಕ ಪ್ರಮುಖ ಬ್ರೋಕರೇಜ್ ಕಂಪನಿಯೊಂದು ನೆಗಟಿವ್ ರೇಟಿಂಗ್ ಕೊಡುವ ಮೂಲಕ ಗಮನ ಸೆಳೆದಿದೆ. ಪೇಟಿಎಂ ಷೇರುಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಮೆಕಾರೀ ಸಂಸ್ಥೆ (Macquarie) ಅಭಿಪ್ರಾಯಪಟ್ಟಿದೆ. ಅದರ ಪ್ರಕಾರ ಈಗ 850 ರೂಗೂ ಹೆಚ್ಚು ಬೆಲೆ ಇರುವ ಪೇಟಿಎಂ ಷೇರಿಗೆ ಟಾರ್ಗೆಟ್ ಪ್ರೈಸ್ 800 ಎಂದು ಅಂದಾಜಿಸಿದೆ. ಅಂದರೆ ಪೇಟಿಎಂ ಷೇರುಬೆಲೆ ಮುಂದಿನ ಕೆಲ ತಿಂಗಳಲ್ಲಿ 800 ರೂಪಾಯಿಗೆ ಇಳಿಕೆಯಾಗಬಹುದು ಎಂಬುದು ಮೆಕ್ಯಾರೀ ಸಂಸ್ಥೆ ಮಾಡಿರುವ ಅಂದಾಜು.
ಈ ಹಿಂದೆ ಪೇಟಿಎಂ ವಿಚಾರದಲ್ಲಿ ಮೆಕ್ಯಾರೀ ಮಾಡಿದ ವಿಶ್ಲೇಷಣೆ ನಿಜವಾಗಿದ್ದು ಹೌದು. ಪೇಟಿಎಂ ಷೇರುಬೆಲೆ ತೀವ್ರವಾಗಿ ಕುಸಿತ ಕಂಡಿದ್ದ ಸಂದರ್ಭದಲ್ಲಿ ಈ ಬ್ರೋಕರೇಜ್ ಕಂಪನಿಯು ಪೇಟಿಎಂ ಷೇರಿಗೆ ‘ಅಂಡರ್ಪರ್ಫಾರ್ಮ್’ ನಿಂದ ‘ಔಟ್ಪರ್ಫಾರ್ಮ್’ ಎಂದು ಗ್ರೇಡಿಂಗ್ ಬದಲಾಯಿಸಿತು. ಅದು ಅಂದಾಜಿಸಿದಂತೆ ಷೇರುಬೆಲೆ ಗಣನೀಯವಾಗಿ ಪುಟಿದೆದ್ದಿತ್ತು. ಇದೀಗ ಗ್ರೇಡಿಂಗ್ ಅನ್ನು ಔಟ್ಪರ್ಫಾರ್ಮ್ನಿಂದ ನ್ಯೂಟ್ರಲ್ಗೆ ಬದಲಾಯಿಸಲಾಗಿದೆ. 800 ರೂ ಟಾರ್ಗೆಟ್ ದರ ಎಂದು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: Eid: ಬಕ್ರೀದ್ ಹಬ್ಬದಂದು ಷೇರುಮಾರುಕಟ್ಟೆಗಳಿಗೆ ರಜೆ; ಆದರೆ, ಜೂನ್ 28 ಬದಲು ಮರುದಿನ ಬಂದ್
ಪೇಟಿಎಂ 2021ರ ನವೆಂಬರ್ನಲ್ಲಿ ಷೇರುಪೇಟೆಗೆ ಬಂದಾಗ ಎಲ್ಲರ ನಿರೀಕ್ಷೆ ಬಹಳ ದೊಡ್ಡದಿತ್ತು. 2,150 ರೂವರೆಗೂ ಅದರ ಐಪಿಒ ಬೆಲೆ ಇತ್ತು. ಷೇರುಪೇಟೆಯಲ್ಲಿ 1,950 ರುಪಾಯಿ ಬೆಲೆಗೆ ಲಿಸ್ಟ್ ಆಗಿತ್ತು. ನೋಡನೋಡುತ್ತಿದ್ದಂತೆಯೇ 4 ತಿಂಗಳಲ್ಲಿ ಅದರ ಬೆಲೆ 546 ರುಪಾಯಿಗೆ ಇಳಿದುಹೋಗಿತ್ತು. 2022ರ ನವೆಂಬರ್ನಲ್ಲಿ ಒಂದು ಹಂತದಲ್ಲಿ ಅದರ ಬೆಲೆ 438 ರುಪಾಯಿವರೆಗೂ ಕುಸಿದಿತ್ತು. ಆದರೆ, ಅಲ್ಲಿಂದೀಚೆ ಪೇಟಿಎಂ ಷೇರುಗಳು ಸಾವರಿಸಿಕೊಂಡಿವೆ. 895ರೂವರೆಗೂ ಏರಿದ್ದ ಅದರ ಬೆಲೆ ಇದೀಗ 850 ರೂ ಆಸುಪಾಸಿಗೆ ಬಂದಿದೆ. 2022ರಲ್ಲಿ ಅದರ ಷೇರುಬೆಲೆ ಸುಮಾರು ಶೇ. 60ರಷ್ಟು ಜಿಗಿದಿರುವುದು ಕಂಡುಬರುತ್ತದೆ.
ಇಷ್ಟಾದರೂ ಪೇಟಿಎಂ ಷೇರುಬೆಲೆ ತನ್ನ ಮೂಲ ಬೆಲೆಯಾದ 1,900 ರೂವರೆಗೂ ಏರಲು ಸಾಧ್ಯವಿಲ್ಲವಾ ಎಂದು ಅನಿಸಬಹುದು. ಆದರೆ, ಬ್ರೋಕರೇಜ್ ಕಂಪನಿ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಪೇಟಿಎಂ ಷೇರುಬೆಲೆ 850 ರೂ ಮುಟ್ಟಿದ್ದೇ ಹೆಚ್ಚು. ಇದಕ್ಕಿಂತ ಮೇಲೇರುವಷ್ಟು ಸತ್ವ ಅದರಲ್ಲಿ ಇಲ್ಲ. ಅದಕ್ಕೆ ಪುಷ್ಟಿ ಕೊಡುವಂತೆ ಆದಾಯವೂ ಪೇಟಿಎಂಗೆ ಸದ್ಯಕ್ಕೆ ಇಲ್ಲ. ಹೀಗೆಂದು ಬ್ರೋಕರೇಜ್ ಕಂಪನಿ ಮೆಕಾರೀ ಕಾರಣಗಳನ್ನು ಕೊಟ್ಟಿದೆ.
ಇದನ್ನೂ ಓದಿ: Multibagger: ಮೂರು ವರ್ಷದಲ್ಲಿ 18 ಪಟ್ಟು ಲಾಭ; 1 ಲಕ್ಷಕ್ಕೆ 18 ಲಕ್ಷ ರಿಟರ್ನ್; ಮಲ್ಟಿಬ್ಯಾಗರ್ ಆಗಿದೆ ಆರಿಯಾನ್ಪ್ರೋ
ಯುಪಿಐ ಪಾವತಿ ಆ್ಯಪ್ ಆಗಿ ಆರಂಭಗೊಂಡ ಪೇಟಿಎಂ ಇದೀಗ ಸಾಕಷ್ಟು ಫೀಚರ್ಗಳನ್ನು ತನ್ನ ಪ್ಲಾಟ್ಫಾರ್ಮ್ನಲ್ಲಿ ಒಳಗೊಂಡಿದೆ. ಆದರೂ ಕೂಡ ಆದಾಯ ಗಳಿಸಲು ಪೇಟಿಎಂ ಪರದಾಡುತ್ತಿದೆ. ಒಮ್ಮೆಯೂ ಅದಕ್ಕೆ ಲಾಭ ಬಂದಿಲ್ಲ. ಆದರೆ, ನಷ್ಟದ ಪ್ರಮಾಣ ಇಳಿಮುಖವಾಗುತ್ತಿದ್ದು, 2025-26ರ ಹಣಕಾಸು ವರ್ಷದಲ್ಲಿ ಪೇಟಿಎಂ ಲಾಭದ ಮುಖ ನೋಡಬಹುದು ಎಂದು ಅಂದಾಜು ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ