Multibagger: ಮೂರು ವರ್ಷದಲ್ಲಿ 18 ಪಟ್ಟು ಲಾಭ; 1 ಲಕ್ಷಕ್ಕೆ 18 ಲಕ್ಷ ರಿಟರ್ನ್; ಮಲ್ಟಿಬ್ಯಾಗರ್ ಆಗಿದೆ ಆರಿಯಾನ್ಪ್ರೋ
Aurionpro Solutions Share Price: 2020ರ ಜೂನ್ನಲ್ಲಿ 56 ರೂ ಬೆಲೆ ಇದ್ದ ಆರಿಯಾನ್ಪ್ರೋ ಸಲ್ಯೂಷನ್ಸ್ನ ಷೇರುಬೆಲೆ ಇದೀಗ 1,000 ರೂ ಆಸುಪಾಸಿನಲ್ಲಿದೆ. 3 ವರ್ಷದಲ್ಲಿ 1700 ಪ್ರತಿಶತದಷ್ಟು ಬೆಲೆ ಹೆಚ್ಚಳವಾಗಿದೆ. ಅನೇಕ ಹೂಡಿಕೆದಾರರು ಲಕ್ಷಾಧೀಶ್ವರರಾಗಿದ್ದಾರೆ.
ನವದೆಹಲಿ: ಭಾರತದ ಷೇರುಪೇಟೆಯಲ್ಲಿರುವ ರಾಶಿರಾಶಿ ಷೇರುಗಳಲ್ಲಿ ಕೆಲವೊಂದಿಷ್ಟು ಷೇರುಗಳು ಮಲ್ಟಿಬ್ಯಾಗರ್ ಆಗಿ ದಿಢೀರನೇ ಹೊಳೆಯತೊಡಗುತ್ತವೆ. ಕೆಲ ಸಣ್ಣ ಕಂಪನಿಗಳ ಷೇರುಗಳು ನೋಡನೋಡುತ್ತಿದ್ದಂತೆಯೇ ಕೆಲವೇ ವರ್ಷಗಳಲ್ಲಿ ತಮ್ಮ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿರುತ್ತವೆ. ಸಾವಿರಾರು ರೂ ಹೂಡಿಕೆ ಮಾಡಿದವರು ಲಕ್ಷಾಧೀಶರರಾಗಿಬಿಡುತ್ತಾರೆ. ಇತ್ತೀಚೆಗೆ ಹೀಗೆ ಮಲ್ಟಿಬ್ಯಾಗರ್ ಆದ ಸ್ಟಾಕ್ಗಳಲ್ಲಿ ಐಟಿ ಕ್ಷೇತ್ರದ ಆರಿಯಾನ್ಪ್ರೋ ಸಲ್ಯೂಷನ್ಸ್ (Aurionpro Solutions) ಕೂಡ ಒಂದು. 3 ತಿಂಗಳ ಹಿಂದೆ 300 ರೂ ಆಸುಪಾಸು ಇದ್ದ ಇದರ ಷೇರುಬೆಲೆ ಜೂನ್ 22, ಗುರುವಾರ 1,000 ರೂ ದಾಟಿ ಹೋಗಿತ್ತು. ಮೂರೇ ತಿಂಗಳಲ್ಲಿ ಮೂರು ಪಟ್ಟು ಹೆಚ್ಚಾಗಿಹೋಗಿದೆ ಇದರ ಷೇರು.
ಈ ಷೇರಿನ ಸಾಧನೆ 3 ತಿಂಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಳೆದ 3 ವರ್ಷಗಳಿಂದಲೂ ಇದು ಸತತವಾಗಿ ವೃದ್ಧಿ ಕಾಣುತ್ತಾ ಬಂದಿದೆ. 2022ರ ಜೂನ್ 12ರಂದು ಇದರ ಷೇರುಬೆಲೆ 56 ರೂ ಇತ್ತು. ಮೂರು ವರ್ಷಗಳ ಬಳಿಕ, 2023 ಜೂನ್ 22ಕ್ಕೆ ಇದರ ಷೇರುಬೆಲೆ 1060.60 ರೂವರೆಗೂ ಹೋಗಿತ್ತು. ಇವತ್ತು 993ಕ್ಕೆ ಇಳಿದಿದೆಯಾದರೂ ಗುರುವಾರ ದಿನಾಂತ್ಯದಲ್ಲಿ 1025.80 ರೂಗೆ ಹೋಗಿ ನಿಂತಿತ್ತು.
ಇದನ್ನೂ ಓದಿ: Adani: ಅದಾನಿ ಗ್ರೂಪ್ನ ಹೂಡಿಕೆದಾರರ ಬೆನ್ನುಹತ್ತಿವೆಯಾ ಅಮೆರಿಕನ್ ಪ್ರಾಧಿಕಾರಗಳು?; ಅಂಥದ್ದೇನೂ ಗೊತ್ತಿಲ್ಲ ಎಂದ ಅದಾನಿ ಕಂಪನಿ
3 ವರ್ಷಗಳ ಹಿಂದೆ ಆರಿಯಾನ್ಪ್ರೋ ಸಲ್ಯೂಷನ್ಸ್ ಸಂಸ್ಥೆಯ ಷೇರುಗಳ ಮೇಲೆ ಹೂಡಿಕೆ ಮಾಡಿದ್ದವರಿಗೆ ಇವತ್ತು 18 ಪಟ್ಟು ಹೆಚ್ಚು ಲಾಭವಾಗುತ್ತಿತ್ತು. ಅಂದರೆ 1 ಲಕ್ಷ ರೂನಷ್ಟು ಈ ಷೇರುಗಳ ಮೇಲೆ ಹೂಡಿಕೆ ಮಾಡಿದ್ದವರು ಇವತ್ತು 18 ಲಕ್ಷ ರೂ ಷೇರುಸಂಪತ್ತಿನ ಒಡೆಯರಾಗುತ್ತಿದ್ದರು. ಅಷ್ಟರ ಮಟ್ಟಿಗೆ ಈ ಕಂಪನಿಯ ಷೇರು ಬೆಳೆದಿದೆ. ಆದರೆ, ಇದರ ಬೆಳವಣಿಗೆಯ ಉಚ್ಛ್ರಾಯ ಮಟ್ಟ ಮುಟ್ಟಿಯಾಗಿದೆ ಎಂಬುದು ಕೆಲ ತಜ್ಞರ ಅನಿಸಿಕೆ.
ಐಟಿ ಸಲ್ಯೂಷನ್ಸ್ ಸಂಸ್ಥೆಯಾಗಿರುವ ಆರಿಯಾನ್ಪ್ರೋನಲ್ಲಿ ಶೇ. 33ರಷ್ಟು ಷೇರುಪಾಲು ಪ್ರೊಮೋಟರ್ಗಳಿಗೆ ಸೇರಿದ್ದಾಗಿದೆ. ಇನ್ನುಳಿದ ಶೇ. 67ರಷ್ಟು ಷೇರುಗಳು ಸಾರ್ವಜನಿಕರ ಬಳಿ ಇವೆ. ಇವರಲ್ಲಿ 13,099 ಷೇರುದಾರರಿದ್ದಾರೆ. ಇವರಲ್ಲಿ ಬಹುತೇಕ ಷೇರುದಾರರು 2 ಲಕ್ಷ ರೂಗಿಂತ ಕಡಿಮೆ ಮೊತ್ತದ ಷೇರುಗಳನ್ನು ಹೊಂದಿದ್ದಾರೆ. ಕೇವಲ 54 ಷೇರುದಾರರು ಮಾತ್ರ 2 ಲಕ್ಷ ರೂಗಿಂತ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ