Adani: ಅದಾನಿ ಗ್ರೂಪ್​ನ ಹೂಡಿಕೆದಾರರ ಬೆನ್ನುಹತ್ತಿವೆಯಾ ಅಮೆರಿಕನ್ ಪ್ರಾಧಿಕಾರಗಳು?; ಅಂಥದ್ದೇನೂ ಗೊತ್ತಿಲ್ಲ ಎಂದ ಅದಾನಿ ಕಂಪನಿ

US Authorities Approach Investors Of Adani Group: ಅದಾನಿ ಗ್ರೂಪ್ ಕಂಪನಿಗಳಲ್ಲಿ ಬಹಳ ಹೂಡಿಕೆ ಮಾಡಿರುವ ಅಮೆರಿಕನ್ ಸಾಂಸ್ಥಿಕ ಹೂಡಿಕೆದಾರರನ್ನು ಅಲ್ಲಿನ ಪ್ರಾಧಿಕಾರಗಳು ಸಂಪರ್ಕಿಸಿ, ಅದಾನಿ ಗ್ರೂಪ್ ವಾಗ್ದಾನದ ಬಗ್ಗೆ ಮಾಹಿತಿ ಕೇಳಿವೆ ಎನ್ನಲಾಗಿದೆ.

Adani: ಅದಾನಿ ಗ್ರೂಪ್​ನ ಹೂಡಿಕೆದಾರರ ಬೆನ್ನುಹತ್ತಿವೆಯಾ ಅಮೆರಿಕನ್ ಪ್ರಾಧಿಕಾರಗಳು?; ಅಂಥದ್ದೇನೂ ಗೊತ್ತಿಲ್ಲ ಎಂದ ಅದಾನಿ ಕಂಪನಿ
ಅದಾನಿ ಗ್ರೂಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 23, 2023 | 3:58 PM

ನವದೆಹಲಿ: ಹಿಂಡನ್ಬರ್ಗ್ ರಿಸರ್ಚ್ ತನಿಖಾ ವರದಿ (Hindenburg Research Report) ಪ್ರಕಟಗೊಂಡ ಬೆನ್ನಲ್ಲೇ ಷೇರುಪೇಟೆಯಲ್ಲಿ ಗಣನೀಯವಾಗಿ ಹಿನ್ನಡೆ ಕಂಡಿದ್ದ ಅದಾನಿ ಗ್ರೂಪ್​ನ ಕಂಪನಿಗಳಿಗೆ ಆ ವರದಿಯು ಬೆನ್ನತ್ತಿದ ಬೇತಾಳದಂತೆ ಸುಳಿಯುತ್ತಿದೆ. ಅದಾನಿ ಗ್ರೂಪ್​ನ (Adani Group) ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಅಮೆರಿಕನ್ ಇನ್ವೆಸ್ಟರ್​ಗಳಿಗೆ ಅಲ್ಲಿನ ಪ್ರಾಧಿಕಾರಗಳು ವಿಚಾರಣೆಗೆ ನೋಟೀಸ್ ಕೊಟ್ಟಿವೆ ಎಂದು ಬ್ಲೂಮ್​ಬರ್ಗ್​ನಲ್ಲಿ ವರದಿ ಬಂದಿದೆ. ಜೂನ್ 23, ಇಂದು ಈ ಬ್ಲೂಮ್​ಬರ್ಗ್ ರಿಪೋರ್ಟ್ ಪ್ರಕಟವಾದ ಬೆನ್ನಲ್ಲೇ ಷೇರುಪೇಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳು ಮತ್ತೆ ಹಿನ್ನಡೆ ಕಂಡಿವೆ. ಹಿಂಡನ್ಬರ್ಗ್ ವರದಿ ಬಳಿಕ ಷೇರುಪೇಟೆಯಲ್ಲಿ ಹಾಗೂ ಹೀಗೂ ಚೇತರಿಸಿಕೊಂಡು ಸಾಕಷ್ಟು ಹೂಡಿಕೆದಾರರ ವಿಶ್ವಾಸವನ್ನೂ ಸಂಪಾದಿಸುತ್ತಿರುವ ಅದಾನಿ ಗ್ರೂಪ್​ಗೆ ಈಗ ಹೊಸ ಬೆಳವಣಿಗೆ ಮತ್ತೆ ತುಸು ಹಿನ್ನಡೆ ತಂದಿದೆ. ಆದರೆ, ಈ ಮಾಧ್ಯಮ ವರದಿಯಲ್ಲಿರುವ ಅಂಶವನ್ನು ಅದಾನಿ ಗ್ರೂಪ್ ತಳ್ಳಿಹಾಕಿದೆ. ತಮ್ಮ ಸಂಸ್ಥೆಯ ಹೂಡಿಕೆದಾರರಲ್ಲಿ ವಿಚಾರಣೆ ನಡೆಸುತ್ತಿರುವ ಯಾವ ಸಂಗತಿ ಅಥವಾ ವಿದ್ಯಮಾನ ತಮಗೆ ತಿಳಿದಿಲ್ಲ ಎಂದು ಅದು ಹೇಳಿದೆ.

ಹೂಡಿಕೆದಾರರಿಂದ ಪ್ರಾಧಿಕಾರಗಳು ಏನು ಮಾಹಿತಿ ಕಲೆಹಾಕುತ್ತಿವೆ?

ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟವಾದ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದಿದ್ದವು. ಆ ಸಂದರ್ಭದಲ್ಲಿ ಹೂಡಿಕೆದಾರರ ವಿಶ್ವಾಸ ಉಳಿಸಿಕೊಳ್ಳಲು ಅದಾನಿ ಸಂಸ್ಥೆ ಬಹಳಷ್ಟು ಪ್ರಯತ್ನ ಮಾಡಿತು. ತಮ್ಮ ಕಂಪನಿಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿರುವ ಅಮೆರಿಕ್ ಹೂಡಿಕೆದಾರರ ಜೊಗೆ ಅದಾನಿ ಗ್ರೂಪ್ ಮಾತನಾಡಿ ಸಮಜಾಯಿಷಿ ನೀಡಿತ್ತು. ಆ ಸಂದರ್ಭದಲ್ಲಿ ಅದಾನಿ ಗ್ರೂಪ್ ಅಮೆರಿಕನ್ ಹೂಡಿಕೆದಾರರೊಂದಿಗೆ ಏನು ಮಾತನಾಡಿತು, ಯಾವ ವಿಚಾರಗಳ ವಿನಿಮಯ ಆಯಿತು ಎಂದು ತಿಳಿದುಕೊಳ್ಳಲು ಅಮೆರಿಕದ ಪ್ರಾಧಿಕಾರಗಳು ಇತ್ತೀಚಿನ ತಿಂಗಳ ಹಿಂದೆ ವಿಚಾರಣೆ ನಡೆಸಿದ್ದವು. ನ್ಯೂಯಾರ್ಕ್​ನ ಬ್ರೂಕ್ಲಿನ್​ನಲ್ಲಿರುವ ಅಟಾರ್ನಿ ಆಫೀಸ್ ಮತ್ತು ಎಸ್​ಇಸಿ ಸಂಸ್ಥೆಗಳು ಪ್ರತ್ಯೇಕವಾಗಿ ಈ ವಿಚಾರಣೆ ನಡೆಸಿವೆ ಎಂದು ಬ್ಲೂಮ್​ಬರ್ಗ್ ವರದಿ ಹೇಳಿದೆ.

ಆದರೆ, ಹೂಡಿಕೆದಾರರಿಗೆ ನಮ್ಮ ನಿಲುವು ಮತ್ತು ಸ್ಪಷ್ಟನೆ ಬಹಳ ಸಮಾಧಾನ ತಂದಿದೆ ಎಂದು ಅದಾನಿ ಗ್ರೂಪ್ ಈ ಬ್ಲೂಮ್​ಬರ್ಗ್ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿJP Morgan Fine: 4.7 ಕೋಟಿ ದಾಖಲೆಗಳನ್ನು ಅಳಿಸಿಹಾಕಿದ ಜೆಪಿ ಮಾರ್ಗನ್​ಗೆ ಬಿತ್ತು 33ಕೋಟಿ ರೂ ದಂಡ

ಏನಿದು ಹಿಂಡನ್ಬರ್ಗ್ ಆರೋಪ?

ಹಿಂಡನ್ಬರ್ಗ್ ರಿಸರ್ಚ್ ಎಂಬುದು ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಯಾವುದೇ ಕಂಪನಿಯಿಂದ ಅಕ್ರಮ ಎಸಗಿರುವುದು ಕಂಡು ಬಂದರೆ ಆ ಕಂಪನಿ ವಿರುದ್ಧ ತನಿಖೆ ನಡೆಸಿ ವರದಿ ಬಿಡುಗಡೆ ಮಾಡುತ್ತದೆ. ಕಂಪನಿಯ ಷೇರು ಬಿದ್ದು, ಅದರಿಂದ ಹಿಂಡನ್ಬರ್ಗ್ ಲಾಭ ಮಾಡಿಕೊಳ್ಳುತ್ತದೆ. ಈ ಸಂಸ್ಥೆ ಕೆಲವಾರು ವರ್ಷಗಳ ಕಾಲ ಅದಾನಿ ಗ್ರೂಪ್ ಮೇಲೆ ರಹಸ್ಯವಾಗಿ ತನಿಖೆ ನಡೆಸಿತ್ತು. 2023ರ ಜನವರಿಯಲ್ಲಿ ಅದರ ವರದಿ ಬಿಡುಗಡೆ ಮಾಡಿತ್ತು.

ಅದಾನಿ ಗ್ರೂಪ್ ಸಂಸ್ಥೆ ತನ್ನ ಕಂಪನಿಗಳ ಷೇರುಬೆಲೆಗಳು ಕೃತಕವಾಗಿ ಉಬ್ಬುವಂತೆ ಮಾಡಿದೆ ಎಂಬುದು ಆ ವರದಿಯಲ್ಲಿದ್ದ ಪ್ರಮುಖ ಆರೋಪ. ಅದಾನಿ ಗ್ರೂಪ್ ಮತ್ತು ಹಿಂಡನ್ಬರ್ಗ್ ವರದಿ ಪ್ರಕರಣವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಸೆಬಿ ತನಿಖೆ ನಡೆಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ