ಭಾರತದ ಷೇರುಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ (ಸೆಪ್ಟೆಂಬರ್ 24, 2021) ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 60,000 ಪಾಯಿಂಟ್ಸ್ ಗಡಿಯನ್ನು ದಾಟಿದೆ. ಆರಂಭದ ಮೊದಲ ಗಂಟೆಯ ವಹಿವಾಟಿನಲ್ಲಿ ಹತ್ತಿರಹತ್ತಿರ ಶೇ 60ರಷ್ಟು ಸ್ಟಾಕ್ಗಳು ಏರಿಕೆ ಕಂಡವು. ಕೇವಲ 161 ಟ್ರೇಡಿಂಗ್ ಸೆಷನ್ನಲ್ಲಿ ಸೆನ್ಸೆಕ್ಸ್ 50 ಸಾವಿರ ಪಾಯಿಂಟ್ಸ್ನಿಂದ 60 ಸಾವಿರ ಪಾಯಿಂಟ್ಸ್ಗೆ ಜಿಗಿದಿದೆ. ಇದು ಅತ್ಯಂತ ವೇಗವಾಗಿ 10 ಸಾವಿರ ಪಾಯಿಂಟ್ಸ್ ಗಳಿಕೆ ಕಂಡ ಸಮಯ ಆಗಿದೆ. ಇದಕ್ಕೂ ಮುನ್ನ 10 ಸಾವಿರ ಪಾಯಿಂಟ್ಸ್ ದಾಟುವುದಕ್ಕೆ ಸರಾಸರಿ 931 ಸೆಷನ್ಗಳನ್ನು ಸೂಚ್ಯಂಕವು ತೆಗೆದುಕೊಂಡಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ 2020ರ ಮಾರ್ಚ್ನಲ್ಲಿ ಸೆನ್ಸೆಕ್ಸ್ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತು. ಆ ನಂತರ ಜಾಗತಿಕ ನಗದು ಲಭ್ಯತೆ ಮತ್ತು ನಿರೀಕ್ಷೆಗಿಂತ ವೇಗವಾಗಿ ಗಳಿಕೆಯಲ್ಲಿನ ಚೇತರಿಕೆ ಕಂಡುಬಂತು.
“ಅಲ್ಪಾವಧಿಯಲ್ಲಿ ಮಾರುಕಟ್ಟೆ ಇನ್ನೊಂದಿಷ್ಟು ಮೇಲಕ್ಕೆ ಏರಬಹುದು. ಸ್ಥಳೀಯ ಅಂಶಗಳು ಸಕಾರಾತ್ಮಕವಾಗಿವೆ. ಲಸಿಕೆ ಹಾಕುವ ಕಾರ್ಯಕ್ರಮ ವೇಗ ಪಡೆದುಕೊಂಡಿದೆ ಮತ್ತು ಕೊರೊನಾ ಮೂರನೇ ಅಲೆ ಇರುವುದಿಲ್ಲ ಎಂಬ ಭರವಸೆ ಇದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಈಗಿನ ಗೂಳಿ ಓಟಕ್ಕೆ (Bull Run) ಕಾರಣ ಆಗಿರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸೇರಿದಂತೆ ಜಾಗತಿಕ ಕೇಂದ್ರ ಬ್ಯಾಂಕ್ಗಳು ನಗದು ಬೆಂಬಲದಿಂದ. ಆ ನಂತರ ಆದಾಯದಲ್ಲಿನ ಬೆಳವಣಿಯ ಉತ್ತೇಜನ ಮತ್ತು ಆರ್ಥಿಕ ಚೇತರಿಕೆಯ ನಿರೀಕ್ಷೆಯಿಂದಾಗಿ ಅನುಕೂಲ ಆಯಿತು.
ವಿಶ್ಲೇಷಕರು ನಿರೀಕ್ಷೆ ಮಾಡುವಂತೆ ಸೂಚ್ಯಂಕ ಕಂಪೆನಿಗಳ ಗಳಿಕೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 35ರಷ್ಟು ಬೆಳವಣಿಗೆ ಮತ್ತು ಮುಂದಿನ ವರ್ಷ ಶೇ 20ರಷ್ಟು ಬೆಳವಣಿಗೆ ಕಾಣಲಿದೆ. ಇದೇ ವೇಳೆ ಕೊರೊನಾ ಲಸಿಕೆ ಹಾಕುತ್ತಿರುವ ವೇಗದ ಪರಿ ನೋಡಿದರೆ ಆರ್ಥಿಕ ಬೆಳವಣಿಗೆ ಇನ್ನಷ್ಟು ಬೇಗ ಆಗಬಹುದು. ಸದ್ಯಕ್ಕಂತೂ ಕೊರೊನಾ ಮೂರನೇ ಅಲೆಯ ಗಂಭೀರ ಪರಿಣಾಮ ಎದುರಿಸುವಂಥ ಪ್ರಮೇಯ ಬರುವುದಿಲ್ಲ ಎನ್ನಲಾಗುತ್ತಿದೆ. ಈಗ 50ರಿಂದ 60 ಸಾವಿರ ಪಾಯಿಂಟ್ಸ್ಗೆ ಏರಿಕೆ ಕಂಡಿದ್ದರಲ್ಲಿ ಪ್ರಮುಖವಾಗಿ ಇನ್ಫೋಸಿಸ್ (ಶೇ 30 ಏರಿಕೆ), ರಿಲಯನ್ಸ್ ಇಂಡಸ್ಟ್ರೀಸ್ (ಶೇ 19 ಏರಿಕೆ), ಐಸಿಐಸಿಐ ಬ್ಯಾಂಕ್ (ಶೇ 30ರಷ್ಟು ಏರಿಕೆ) ಮತ್ತು ಭಾರ್ತಿ ಏರ್ಟೆಲ್ ಕೊಡುಗೆ ಪ್ರಮುಖವಾಗಿದೆ.
ಈ ವರದಿ ಪ್ರಕಟವಾಗುವ ಹೊತ್ತಿಗೆ ಸೆನ್ಸೆಕ್ಸ್ 417.34 ಪಾಯಿಂಟ್ಸ್ ಅಥವಾ ಶೇ 0.70 ಏರಿಕೆ ಕಂಡು, 60,302.70 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 111.80 ಪಾಯಿಂಟ್ಸ್ ಅಥವಾ ಶೇ 0.63ರಷ್ಟು ಮೇಲೇರಿ 17,934.80 ಪಾಯಿಂಟ್ಸ್ನಲ್ಲಿ ವಹಿಬಾಟು ನಡೆಸುತ್ತಿತ್ತು.
ಬಿಎಸ್ಇ ಸೆನ್ಸೆಕ್ಸ್ನಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಏಷ್ಯನ್ ಪೇಂಟ್ಸ್ ಶೇ 4.76
ಭಾರ್ತಿ ಏರ್ಟೆಲ್ ಶೇ 3.04
ಎಚ್ಸಿಎಲ್ ಟೆಕ್ ಶೇ 3.09
ಇನ್ಫೋಸಿಸ್ ಶೇ 2.33
ಟಿಸಿಎಸ್ ಶೇ 1.81
ಇದನ್ನೂ ಓದಿ: Sensex Stocks: ಸೆನ್ಸೆಕ್ಸ್ ಲಿಸ್ಟೆಡ್ ಷೇರುಗಳ ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರೂಪಾಯಿ ಏರಿಕೆ
(BSE Sensex Crosses 60000 Points Mark And Nifty50 Near 18000 Here Is The Stock Market Latest Updates)
Published On - 10:57 am, Fri, 24 September 21