ನವದೆಹಲಿ: ಈ ಬಾರಿಯ ಹಣಕಾಸು ವರ್ಷದಲ್ಲಿ (2022-23) ಒಟ್ಟು ನೇರ ತೆರಿಗೆ ಸಂಗ್ರಹವು (Direct Tax Collections) 16 ಲಕ್ಷ ಕೋಟಿ ರೂ. ದಾಟುವ ಸಂಭವ ಇದೆ. ಕಳೆದ ಬಾರಿಯ ಬಜೆಟ್ನಲ್ಲಿ (Union Budget) 14.2 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹದ ಗುರಿ ಇರಿಸಲಾಗಿತ್ತು. ಅದಕ್ಕಿಂತ ಕನಿಷ್ಠ 2 ಲಕ್ಷ ಕೋಟಿ ರೂ.ನಷ್ಟು ಹೆಚ್ಚು ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿರುವುದು ತಿಳಿದುಬಂದಿದೆ. 2022ರ ಹಣಕಾಸು ವರ್ಷದಲ್ಲಿ (2021-22) 14.16 ಲಕ್ಷ ಕೋಟಿ ರೂ.ನಷ್ಟು ನೇರ ತೆರಿಗೆ ಸಂಗ್ರಹವಾಗಿತ್ತು. ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ ಸಂಗ್ರಹವಾಗಿದ್ದ ಮೊತ್ತ 12.5 ಲಕ್ಷ ಕೋಟಿ ರೂ. ಇಲ್ಲಿ ನೇರ ತೆರಿಗೆ ಎಂದರೆ ವೈಯಕ್ತಿಕ ಆದಾಯ ತೆರಿಗೆ (Personal Income Tax) ಮತ್ತು ಕಾರ್ಪೊರೇಟ್ ತೆರಿಗೆ (Corporate Tax) ಒಳಗೊಂಡಿವೆ. 2022ರ ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್ ನಲ್ಲಿ ಹಣಕಾಸು ಸಚಿವರು 2022-23ರ ಹಣಕಾಸು ವರ್ಷದಲ್ಲಿ 14.2 ಲಕ್ಷ ಕೋಟಿ ನೇರ ತೆರಿಗೆಯ ಸಂಗ್ರಹದ ಗುರಿ ಇಟ್ಟಿದ್ದರು. ಆ ನಿರೀಕ್ಷೆಮೀರಿ ಹೆಚ್ಚು ತೆರಿಗೆ ಸಂಗ್ರಹವಾಗಲಿದೆ. ಅದಾದಲ್ಲಿ ಶೇ. 6.4ರಷ್ಟಿರುವ ವಿತ್ತೀಯ ಕೊರತೆ ಸ್ವಲ್ಪಮಟ್ಟಿಗೆ ತಗ್ಗುತ್ತದೆ.
ಮಾಧ್ಯಮಗಳಿಗೆ ನೀಡಲಾಗಿರುವ ಮಾಹಿತಿ ಪ್ರಕಾರ 2021ರ ಏಪ್ರಿಲ್ 1ರಿಂದ 2023 ಜನವರಿ 10ರವರೆಗೆ ನೇರ ತೆರಿಗೆ ಸಂಗ್ರಹ 12.31 ಲಕ್ಷ ಕೋಟಿ ರೂ. ಆಗಿದೆ. ಇದು ರೀಫಂಡ್ ಹೊರತುಪಡಿಸಿ ಆದ ಸಂಗ್ರಹ. ಬಜೆಟ್ನಲ್ಲಿ ಇರಿಸಲಾಗಿದ್ದ ಗುರಿಯು ಬಹುತೇಕ ಎರಡು ತಿಂಗಳ ಮೊದಲೇ ಈಡೇರಿದಂತಾಗಿದೆ.
ಜಾಗತಿಕ ಆರ್ಥಿಕ ಹಿನ್ನಡೆಯ ಕಾರಣದಿಂದ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ತುಸು ಮಂದಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಹಣಕಾಸು ವರ್ಷದಲ್ಲಿ ಗಳಿಸಿರುವ ಉತ್ತಮ ನೇರ ತೆರಿಗೆ ಸಂಗ್ರಹ ಮುಂದಿನ ವರ್ಷವೂ ಮುಂದುವರಿಯುವುದು ಕಷ್ಟ ಎನ್ನಲಾಗಿದೆ. ಅಂದರೆ, 2023-24ರ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ. 20ರಷ್ಟು ಹೆಚ್ಚಳ ಸಾಧಿಸುವುದು ಕಷ್ಟಸಾಧ್ಯ.
ಇದನ್ನು ಓದಿ: EPFO Higher Pension: ಅಧಿಕ ಪಿಂಚಣಿಗೆ ಅರ್ಜಿ, ಆನ್ಲೈನ್ ಬಾಗಿಲು ತೆರೆದ ಇಪಿಎಫ್ಒ
ಸರ್ಕಾರ ಮಾಡಿರುವ ಮೊದಲ ಪೂರ್ವ ಅಂದಾಜು ಪ್ರಕಾರ ನಾಮಿನಲ್ ಜಿಡಿಪಿ (Nominal GDP) 2022-23ರ ವರ್ಷದಲ್ಲಿ ಶೇ. 15.3ರಷ್ಟು ಬೆಳವಣಿಗೆ ಸಾಧಿಸಬಹುದು. ರಿಯಲ್ ಜಿಡಿಪಿ (Real GDP) ಶೇ. 7ರಷ್ಟು ಹೆಚ್ಚಬಹುದು. ಆದರೆ, ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ತಜ್ಞರ ಅಂದಾಜು ಪ್ರಕಾರ ನಾಮಿನಲ್ ಜಿಡಿಪಿ ಶೇ. 10ರಿಂದ 11ರಷ್ಟರ ಬೆಳವಣಿಗೆಗೆ ಸೀಮಿತಗೊಳ್ಳಬಹುದು. ಇನ್ನು, ರಿಯಲ್ ಜಿಡಿಪಿ ಶೇ. 6ರಿಂದ ಶೇ. 6.5ರಷ್ಟು ಮಾತ್ರ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ತೆರಿಗೆ ಸಂಗ್ರಹವೂ ಕಡಿಮೆಗೊಳ್ಳಬಹುದಾಗಿದ್ದು, 2023-24ರ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ವಿತ್ತೀಯ ಕೊರತೆಯನ್ನು ಕಡಿಮೆಗೊಳಿಸುವ ಕೆಲಸ ದುಸ್ತರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಜಿಡಿಪಿ ಎಂದರೆ ಒಟ್ಟು ದೇಶೀಯ ಉತ್ಪಾದನೆ. ನಾಮಿನಲ್ ಜಿಡಿಪಿ ಎಂದರೆ ಹಣದುಬ್ಬರವನ್ನು ಪರಿಗಣಿಸದೇ ನಡೆಸಲಾದ ಜಿಡಿಪಿ ಎಣಿಕೆ. ರಿಯಲ್ ಜಿಡಿಪಿಯಲ್ಲಿ ಹಣದುಬ್ಬರವನ್ನೂ ಪರಿಗಣಿಸಲಾಗುತ್ತದೆ. ಹೀಗಾಗಿ, ಆರ್ಥಿಕತೆಯ ಬೆಳವಣಿಗೆಗೆ ರಿಯಲ್ ಜಿಡಿಪಿ ನಿಜವಾದ ಮಾನದಂಡವಾಗುತ್ತದೆ. 2021ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ 3.18 ಲಕ್ಷ ಕೋಟಿ ಡಾಲರ್ ಇದೆ. ಅಂದರೆ ಸುಮಾರು 250 ಲಕ್ಷ ಕೋಟಿ ರೂ. ಮೊತ್ತದ ಜಿಡಿಪಿ ಭಾರತದ್ದಾಗಿದೆ. 2022-23ರ ವರ್ಷದಲ್ಲಿ ಇದು ಶೇ. 6.9ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.