ಕಳೆದ ವರ್ಷದ (2022) ನವೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಇಪಿಎಫ್ ಸದಸ್ಯರಾಗಿರುವ ಉದ್ಯೋಗಿಗಳಿಗೆ ಅಧಿಕ ಪಿಂಚಣಿಯ (Higher Pension) ಸೌಲಭ್ಯದ ಅವಕಾಶ ನೀಡಲು ಇಪಿಎಫ್ಒ (EPFO) ಆನ್ಲೈನ್ ಸೌಲಭ್ಯ ತೆರೆದಿದೆ. 2014 ಸೆಪ್ಟೆಂಬರ್ 1ಕ್ಕೆ ಮುನ್ನ ನಿವೃತ್ತರಾಗಿರುವ ಮತ್ತು ನಿವೃತ್ತಿಗೆ ಮುನ್ನ ಅಧಿಕ ಪಿಂಚಣಿಯನ್ನು ಆಯ್ದುಕೊಂಡಿದ್ದ ಉದ್ಯೋಗಿಗಳು ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇಪಿಎಫ್ಒನ ಯುಎಎನ್ ಪೋರ್ಟಲ್ಗೆ ಲಾಗಿನ್ ಆಗಿ ಈ ಸೌಲಭ್ಯ ಪಡೆಯಬಹುದಾಗಿದೆ.
ಇಲ್ಲಿ 2014, ಸೆಪ್ಟೆಂಬರ್ 1ಕ್ಕೆ ಮುನ್ನ ಉದ್ಯೋಗಿ ಪಿಂಚಣಿ ಯೋಜನೆಯ (EPS- Employee Pension Scheme) ಪ್ಯಾರಾ 11(3) ಅಡಿಯಲ್ಲಿ ಉದ್ಯೋಗಿಯು ತಾನು ಕೆಲಸ ಮಾಡುವ ಕಂಪನಿಯ ಜೊತೆ ಜಂಟಿಯಾಗಿ ಅಧಿಕ ಪಿಂಚಣಿಯ ಆಯ್ಕೆಯನ್ನು ಮಾಡಿಕೊಂಡಿರಬೇಕು. ಮತ್ತು ಈ ಹಿಂದೆ ಅವರು ಮಾಡಿಕೊಂಡಿದ್ದ ಈ ಆಯ್ಕೆಯು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ (ಇಪಿಎಫ್ಒ) ತಿರಸ್ಕೃತಗೊಂಡಿದ್ದಿರಬೇಕು. ಅಂಥ ಉದ್ಯೋಗಿಗಳಿಗೆ ಮಾತ್ರ ಸದ್ಯಕ್ಕೆ ಅವಕಾಶ ಕೊಡಲಾಗಿದೆ.
1995ರ ಉದ್ಯೋಗಿ ಪಿಂಚಣಿ ಯೋಜನೆಯ ನಿಯಮದ ಪ್ರಕಾರ ಉದ್ಯೋಗಿಯ ವೇತನ 5000/6500 ರೂ ಮೀರಬಾರದು. ಇದಕ್ಕಿಂತ ಹೆಚ್ಚಿನ ವೇತನ ಇರುವವರು ಹೆಚ್ಚಿನ ಪಿಂಚಣಿ ಕೊಡುಗೆಗೆ ಕಂಪನಿ ಜೊತೆ ಜಂಟಿಯಾಗಿ ಅರ್ಜಿ ಸಲ್ಲಿಸುವ ಅವಕಾಶ ಇತ್ತು. 2014ರಲ್ಲಿ ಕಾನೂನು ತಿದ್ದುಪಡಿ ತಂದ ಬಳಿಕ ಈ ಅವಕಾಶ ನಿರಾಕರಿಸಲಾಗಿತ್ತು. 2022ರಲ್ಲಿ ಸುಪ್ರೀಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಈ ತಿದ್ದುಪಡಿಯನ್ನು ಎತ್ತಿಹಿಡಿಯಿತಾದರೂ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ನಿರ್ದೇಶನ ನೀಡಿತು. ಅಂದರೆ ತಾವು ಕೆಲಸ ಮಾಡುತ್ತಿದ್ದ ಕಂಪನಿ ಜೊತೆ ಜಂಟಿಯಾಗಿ ಅರ್ಜಿ ಸಲ್ಲಿಸದೇ ಇದ್ದ ಉದ್ಯೋಗಿಗಳೂ 2023 ಮಾರ್ಚ್ 3ರವರೆಗೆ ಕಾಲಾವಕಾಶ ಕೊಡಬೇಕೆಂದು ತಿಳಿಸಿತು.
ಇದನ್ನು ಓದಿ: EPFO Guidelines for Higher Pension: ಹೆಚ್ಚು ಪಿಂಚಣಿಗೆ ಇಪಿಎಫ್ಒ ಮಾರ್ಗಸೂಚಿ ಬಿಡುಗಡೆ
2022ರ ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸರ್ಕಾರ ಸುತ್ತೋಲೆ ಹೊರಡಿಸಿ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಿದವರಿಂದ ಮತ್ತೊಮ್ಮೆ ಅರ್ಜಿ ಪಡೆಯಲು ಅವಕಾಶ ಕೊಟ್ಟಿತು. ಆದರೆ, ಇದು 2014 ಸೆಪ್ಪೆಂಬರ್ 1ಕ್ಕೆ ಮುನ್ನ ಕಂಪನಿ ಜೊತೆ ಜಂಟಿಯಾಗಿ ಅರ್ಜಿ ಸಲ್ಲಿಸಿದ ಮತ್ತು ನಿವೃತ್ತರಾದ ಉದ್ಯೋಗಿಗಳಿಗೆ ಮಾತ್ರ ಇರುವ ಅವಕಾಶ. ಜಂಟಿಯಾಗಿ ಘೋಷಣೆ ಮಾಡದ ಉದ್ಯೋಗಿಗಳಿಗೂ ಮತ್ತೊಮ್ಮೆ ಅವಕಾಶ ನೀಡಬೇಕೆಂಬ ಸುಪ್ರೀಂ ನಿರ್ದೇಶನದ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇಪಿಎಫ್ ಎಂಬುದು ಎಂಪ್ಲಾಯೀ ಪ್ರಾವಿಡೆಂಟ್ ಫಂಡ್. ಇಪಿಎಸ್ ಇನ್ನುವುದು 1995ರಲ್ಲಿ ಆರಂಭಗೊಂಡ ಎಂಪ್ಲಾಯೀ ಪೆನ್ಷನ್ ಸ್ಕೀಮ್. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳದಲ್ಲಿ ನಿರ್ದಿಷ್ಟ ಪಾಲು ಇಪಿಎಫ್ ಖಾತೆಗೆ ಹೋಗುತ್ತದೆ. ಇನ್ನು ನೌಕರರ ಸಂಬಳದ ಶೇ. 8.33ರಷ್ಟು ಮೊತ್ತವನ್ನು ಕಂಪನಿಯು ಇಪಿಎಸ್ ಖಾತೆಗೆ ಜಮೆ ಮಾಡುತ್ತದೆ. ಈ ಇಪಿಎಸ್ ಖಾತೆಯ ಹಣವನ್ನು ನೌಕರರ ನಿವೃತ್ತ ಬಳಿಕ ಪಿಂಚಣಿಗೆ ನೀಡಲು ಬಳಕೆಯಾಗುತ್ತದೆ.
ಇಪಿಎಸ್ ನಿಯಮದ ಪ್ರಕಾರ ನೌಕರರು ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ್ದರೆ ನಿವೃತ್ತಿ ನಂತರದ ಪಿಂಚಣಿಗೆ ಅರ್ಹರಾಗುತ್ತಾರೆ. ಅವರ ಸಂಬಳ ಮತ್ತು ಕಂಪನಿಯ ಕೊಡುಗೆಯ ಆಧಾರದ ಮೇಲೆ ಪಿಂಚಣಿಯನ್ನು ಲೆಕ್ಕ ಮಾಡಲಾಗುತ್ತದೆ.
ಅರ್ಹ ಪಿಂಚಣಿದಾರರು ಆನ್ಲೈನ್ನಲ್ಲಿ ಮಾತ್ರವಲ್ಲ ಇಪಿಎಫ್ಒ ಕಚೇರಿಗೆ ಹೋಗಿಯೂ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಇಪಿಎಫ್ ಸ್ಕೀಮ್ನ ಪ್ಯಾರಾ 26(6) ಅಡಿಯಲ್ಲಿ ಜಂಟಿ ಆಯ್ಕೆ ಮಾಡಿಕೊಂಡಿರುವುದನ್ನು ಕಂಪನಿಯಿಂದ ವೆರಿಫೈ ಆಗಿರುವುದೂ ಸೇರಿ ಕೆಲವಾರು ದಾಖಲೆಗಳು ಇರಬೇಕು.