EPFO Guidelines for Higher Pension: ಹೆಚ್ಚು ಪಿಂಚಣಿಗೆ ಇಪಿಎಫ್ಒ ಮಾರ್ಗಸೂಚಿ ಬಿಡುಗಡೆ
ಪಿಂಚಣಿದಾರರು ಹೆಚ್ಚು ಪಿಂಚಣಿ ಪಡೆಯುವುದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಬಿಡುಗಡೆ ಮಾಡಿದೆ.
ನವದೆಹಲಿ: ಪಿಂಚಣಿದಾರರು ಹೆಚ್ಚು ಪಿಂಚಣಿ ಪಡೆಯುವುದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ (Supreme Court) ಆದೇಶಾನುಸಾರ ಇಪಿಎಫ್ಒ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿರುವವರು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಎಂಟು ವಾರಗಳ ಒಳಗಾಗಿ ಅನುಷ್ಠಾನಗೊಳಿಸಬೇಕು ಎಂದೂ ನಿಧಿ ಪ್ರಾಧಿಕಾರಗಳಿಗೆ ಇಪಿಎಫ್ಒ ಸೂಚಿಸಿದೆ. 2014ರ ಸೆಪ್ಟೆಂಬರ್ 1ರ ಮೊದಲು ನಿವೃತ್ತರಾದವರು, 1995ರ ನಿಯಮ 11(3)ರ ಅಡಿಯಲ್ಲಿ ಹೆಚ್ಚು ಪಿಂಚಣಿ ಪಡೆಯಲು ಅರ್ಹರು ಎಂದು ಇಪಿಎಫ್ಒ ತಿಳಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಯಾರೆಲ್ಲ ಹೆಚ್ಚು ಪಿಂಚಣಿ ಪಡೆಯಲು ಅರ್ಹರು ಎಂಬುದನ್ನು ಇಪಿಎಫ್ಒ ವಿವರಿಸಿದೆ. ವಿವರಗಳು ಇಲ್ಲಿವೆ.
ಪಿಎಫ್ಗೆ ಆಗಿನ ವೇತನ ಮಿತಿಯಾದ 5,000 ರೂ. ಅಥವಾ 6,500 ರೂ.ಗಿಂತ ಹೆಚ್ಚಿನ ಕೊಡುಗೆ ನೀಡಿದ್ದ ಇಪಿಎಸ್ ಸದಸ್ಯರು ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.
ಇಪಿಎಸ್-95 ತಿದ್ದುಪಡಿಗೂ ಮುನ್ನ ಸದಸ್ಯರಾಗಿದ್ದವರು ಮತ್ತು ಉದ್ಯೋಗಿಗಳ ಭವಿಷ್ಯನಿಧಿ ಯೋಜನೆ (ಇಪಿಎಸ್) ಜಂಟಿ ಆಯ್ಕೆ ಹೊಂದಿದ್ದ ಇಪಿಎಫ್ಒ ಚಂದಾದಾರು ಅರ್ಹರಾಗಿದ್ದಾರೆ. ಇಪಿಎಫ್ಒ ಇಂಥ ಆಯ್ಕೆಯನ್ನು ನಿರಾಕರಿಸಿದ್ದಲ್ಲಿ ಅಂಥವರು ಅರ್ಹರಾಗಿದ್ದಾರೆ ಎಂದು ಸುತ್ತೋಲೆ ತಿಳಿಸಿದೆ.
ಹೆಚ್ಚು ಪಿಂಚಣಿಗೆ ಅರ್ಹರು ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಇಪಿಎಫ್ಒ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಆಯುಕ್ತರು ಸೂಚಿಸಿದ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್ ಪಡೆಯಬಹುದು; ಇಪಿಎಫ್ಒ
ತಿಂಗಳಿಗೆ ಗರಿಷ್ಠ 15,000 ರೂ. ವೇತನಕ್ಕೆ ಪಿಂಚಣಿ ನೀಡುವ ಬಗ್ಗೆ ಉಲ್ಲೇಖಿಸಲಾಗಿತ್ತು 2014ರಲ್ಲಿ ಇಪಿಎಫ್ಒಗೆ ಮಾಡಲಾಗಿದ್ದ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿತ್ತು. ಅದನ್ನು ತಳ್ಳಿಹಾಕಿದ್ದ ಕೇರಳ ಹೈಕೋರ್ಟ್, ಗರಿಷ್ಠ ಮಿತಿಗಿಂತಲೂ ಹೆಚ್ಚಿನ, ಅಂದರೆ ಉದ್ಯೋಗಿಗಳು ಹೊಂದಿರುವ ವಾಸ್ತವ ವೇತನಕ್ಕನುಗುಣವಾಗಿ ಪಿಂಚಣಿ ಲೆಕ್ಕಾಚಾರ ಹಾಕುವ ಬಗ್ಗೆ ನಿರ್ದೇಶನ ನೀಡಿತ್ತು. ಈ ಕುರಿತು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು. ಈ ವಿಚಾರವಾಗಿ ಇತ್ತೀಚೆಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ‘2014ರ ಉದ್ಯೋಗಿಗಳ ಭವಿಷ್ಯನಿಧಿ ತಿದ್ದುಪಡಿ ಯೋಜನೆ’ಯನ್ನು ಎತ್ತಿಹಿಡಿದಿತ್ತು. ಆದರೆ, ಅದಕ್ಕಿಂತ ಮೊದಲಿನ ಇಪಿಎಫ್ಒ ಸದಸ್ಯರಿಗೆ ಹೆಚ್ಚಿನ ಪಿಂಚಣಿ ನೀಡುವಂತೆ ನಿರ್ದೇಶಿಸಿತ್ತು.