ಯಾರಿಗೋ ಕಟ್ಟಿ, ಇನ್ಯಾರಿಗೋ ಮನೆ ಮಾರುತ್ತಿದ್ದ ಈ ಬ್ಯುಲ್ಡರ್; ಇಡಿ ನೋಟೀಸ್
Builder misusing PM Awas Yojana: ಗುರುಗ್ರಾಮ್ ಮೂಲದ ಒಎನ್ಬಿಪಿಎಲ್ ಎನ್ನುವ ಗೃಹ ನಿರ್ಮಾಣ ಸಂಸ್ಥೆ ಹಾಗೂ ಅದರ ಮಾಲೀಕರ ಮೇಲೆ ಇಡಿ ಕೇಸ್ ಹಾಕಿದೆ. ಪಿಎಂ ಆವಾಸ್ ಯೋಜನೆ ಅಡಿ ಮಂಜೂರಾದ ಮನೆಗಳಿಂದ ಅಕ್ರಮವಾಗಿ ಹಣ ಮಾಡಿರುವ ಆರೋಪ ಇದೆ. ಮನೆ ಮಂಜೂರಾತಿಯನ್ನು ಸುಳ್ಳು ನೆವ ಹೇಳಿ ರದ್ದು ಮಾಡಿ ಅದನ್ನು ಬೇರೆಯವರಿಗೆ ಹೆಚ್ಚಿನ ಬೆಲೆಗೆ ಮಾರುವ ಅಕ್ರಮ ನಡೆದಿತ್ತೆನ್ನಲಾಗಿದೆ.

ನವದೆಹಲಿ, ಡಿಸೆಂಬರ್ 8: ದೆಹಲಿಯ ಸಮೀಪದಲ್ಲಿರುವ ಗುರುಗ್ರಾಮ್ನ ಓಷನ್ ಸೆವೆನ್ ಬ್ಯುಲ್ಡ್ಟೆಕ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದೆ. ಪಿಎಂ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಬಡವರಿಗೆಂದು ನಿರ್ಮಿಸಿದ ಮನೆಯನ್ನು ಹೆಚ್ಚಿನ ಹಣಕ್ಕೆ ಬೇರೆಯವರಿಗೆ ಮಾರಿದ ಆರೋಪ ಈ ಒಎಸ್ಬಿಪಿಎಲ್ ಕಂಪನಿ ಮೇಲಿದೆ. ತನಿಖೆಯ ವೇಳೆ, ಈ ಕಂಪನಿಯವರು ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗಿದೆ.
ಕಳೆದ ತಿಂಗಳು (ನ. 13) ಒಎಸ್ಬಿಪಿಎಲ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸ್ವರಾಜ್ ಸಿಂಗ್ ಯಾದವ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಈ ಕಂಪನಿಯು ಪಿಎಂಎವೈ ಯೋಜನೆಯನ್ನು ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುವಂತಹ ವ್ಯವಸ್ಥೆ ರೂಪಿಸಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಇಂಡಿಗೋ ಏರ್ಲೈನ್ಸ್ ದಿಢೀರ್ ಬಿಕ್ಕಟ್ಟಿಗೆ ಸಿಲುಕಲು ಹೊಸ ಎಫ್ಡಿಟಿಎಲ್ ನಿಯಮಗಳೇ ಕಾರಣ; ಏನಿದೆ ರೂಲ್ಸ್?
ಆವಾಸ್ ಯೋಜನೆಯನ್ನು ಒಎಸ್ಬಿಪಿಎಲ್ ದುರ್ಬಳಕೆ ಮಾಡಿಕೊಂಡಿದ್ದು ಹೀಗೆ…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಫ್ಲ್ಯಾಟ್ಗಳನ್ನು ಒಎಸ್ಬಿಪಿಎಲ್ ಕಂಪನಿ ಸುಳ್ಳು ಕಾರಣಗಳನ್ನು ನೀಡಿ ರದ್ದುಗೊಳಿಸುವ ಒಂದು ವ್ಯವಸ್ಥೆ ಮಾಡಿತ್ತು. ರದ್ದಾದ ಕೆಲ ಫ್ಲಾಟ್ಗಳನ್ನು ಹೆಚ್ಚಿನ ಮೊತ್ತಕ್ಕೆ ಹೊಸ ಖರೀದಿದಾರರಿಗೆ ಮಾರಲಾಗುತ್ತಿತ್ತು.
ಮೂಲಬೆಲೆ 26.5 ಲಕ್ಷ ರೂ ಇದ್ದ ಒಂದು ಫ್ಲಾಟ್ ಅನ್ನು 40ರಿಂದ 50 ಲಕ್ಷ ರೂಗೆ ಮರು ಮಾರಾಟ ಮಾಡಲಾಗುತ್ತಿತ್ತು. ಈ ಅಕ್ರಮ ಇದಷ್ಟೇ ಅಲ್ಲ, ಮೊದಲಿನ ಅರ್ಜಿದಾರರು ಮಾಡಿದ್ದ ಹಣವನ್ನೂ ಈ ಕಂಪನಿ ಗುಳುಂ ಮಾಡುತ್ತಿತ್ತು. ಒಂದೇ ಫ್ಲಾಟ್ ಅನ್ನು ಇಬ್ಬರಿಗೆ ಮಾರಿ ಭಾರೀ ಲಾಭ ಮಾಡುತ್ತಿತ್ತು ಈ ಕಂಪನಿ ಎನ್ನಲಾಗಿದೆ.
ಇದನ್ನೂ ಓದಿ: ನಕಲಿ ವಜ್ರ ಗುರುತಿಸುವುದು ಹೇಗೆ? ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಪರೀಕ್ಷೆಗಳು
ಒಎಸ್ಬಿಪಿಎಲ್ನ ಎಂಡಿ ಸ್ವರಾಜ್ ಸಿಂಗ್ ಯಾದವ್ ಅವರು ಖರೀದಿದಾರರಿಂದ ಅಕ್ರಮವಾಗಿ ಪಡೆದ 222 ಕೋಟಿ ರೂ ಹಣವನ್ನು ಶೆಲ್ ಕಂಪನಿಗಳ ಮೂಲಕ ಹೊರಗೆ ಸಾಗಿಸುತ್ತಿದ್ದ. ಗುರುಗ್ರಾಮ್, ಮಹಾರಾಷ್ಟ್ರ, ಹಾಗೂ ರಾಜಸ್ಥಾನದಲ್ಲಿ ಇವರು ಹಾಗೂ ಇವರ ಕಂಪನಿಯ ಆಸ್ತಿಗಳನ್ನು ಮಾರಿ ಹವಾಲ ಮೂಲಕ ವಿದೇಶಕ್ಕೆ ಕಳುಹಿಸಲಾಗುತ್ತಿತ್ತು. ಅಮೆರಿಕಕ್ಕೆ ಹೋಗಿದ್ದ ಈತನ ಹೆಂಡತಿಯ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆ ಮೂಲಕ ವಿದೇಶಕ್ಕೆ ಹೋಗುತ್ತಿತ್ತು ಆ ಹಣ. ಇದೀಗ, ಒಎಸ್ಬಿಪಿಎಲ್ನ ಆಸ್ತಿಗಳನ್ನು ಜಫ್ತಿ ಮಾಡಿಕೊಳ್ಳಲು ಇಡಿ ಯತ್ನಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




