ಇಂಡಿಗೋ ಏರ್ಲೈನ್ಸ್ ದಿಢೀರ್ ಬಿಕ್ಕಟ್ಟಿಗೆ ಸಿಲುಕಲು ಹೊಸ ಎಫ್ಡಿಟಿಎಲ್ ನಿಯಮಗಳೇ ಕಾರಣ; ಏನಿದೆ ರೂಲ್ಸ್?
Indigo Airlines crisis explained: ದಕ್ಷತೆಗೆ ಹೆಸರಾಗಿದ್ದ ಮತ್ತು ಗುಣಮಟ್ಟದ ವಿಮಾನ ಸೇವೆಗೆ ಖ್ಯಾತಿ ಪಡೆದಿದ್ದ ಇಂಡಿಗೋ ಏರ್ಲೈನ್ಸ್ ಇದೀಗ ಬಿಕ್ಕಟ್ಟಿಗೆ ಸಿಲುಕಿದೆ. ಹೊಸ ಎಫ್ಡಿಟಿಎಲ್ ನಿಯಮಗಳಿಂದಾಗಿ ಈ ವಿಮಾನ ಸಂಸ್ಥೆಗೆ ಪೈಲಟ್ಗಳ ಕೊರತೆ ಎದುರಾಗಿದೆ. ಇದರಿಂದಾಗಿ ಸಾವಿರಕ್ಕೂ ಅಧಿಕ ಫ್ಲೈಟ್ಗಳು ರದ್ದಾಗಿವೆ. ಹಾಗಾದರೆ, ಏನಿವೆ ಎಫ್ಡಿಟಿಎಲ್ ನಿಯಮಗಳು?

ನವದೆಹಲಿ, ಡಿಸೆಂಬರ್ 8: ಭಾರತದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆ ಎನಿಸಿರುವ ಮತ್ತು ಜಾಗತಿಕವಾಗಿಯೂ ದೈತ್ಯ ಏರ್ಲೈನ್ ಕಂಪನಿಗಳಲ್ಲಿ ಒಂದೆನಿಸಿರುವ ಇಂಡಿಗೋ ಏರ್ಲೈನ್ಸ್ (Indigo Airlines) ಕಳೆದ ಕೆಲ ದಿನಗಳಿಂದ ವಿಲವಿಲ ಒದ್ದಾಡುತ್ತಿದೆ. ದಿನವೂ ನೂರಾರು ಫ್ಲೈಟ್ಗಳು ರದ್ದಾಗುತ್ತಿವೆ. ಫ್ಲೈಟ್ ತಪ್ಪಿರುವ ಸಾವಿರಾರು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ಕೂಡ ತನಿಖೆ ನಡೆಸತೊಡಗಿದೆ. ಉಗುರಿನಲ್ಲಿ ಹೋಗಬೇಕಾದ ಸಮಸ್ಯೆಗೆ ಕೊಡಲಿ ಎತ್ತಬೇಕಾದ ಸ್ಥಿತಿ ಬಂತೆಂದು ಹಲವು ಹೇಳತೊಡಗಿದ್ದಾರೆ. ಅಷ್ಟಕ್ಕೂ ಇಂಡಿಗೋ ಏರ್ಲೈನ್ಸ್ನ ಬಿಕ್ಕಟ್ಟಿಗೆ ಕಾರಣಗಳೇನು?
ಇಂಡಿಗೋ ಏರ್ಲೈನ್ಸ್ನ ಬಿಕ್ಕಟ್ಟಿಗೆ ಕಾರಣಗಳೇನು?
ಪೈಲಟ್ಗಳ ಲಭ್ಯತೆ ಇಲ್ಲದೇ ಹೋಗಿದ್ದು ಇಂಡಿಗೋ ಫ್ಲೈಟ್ಗಳು ಸ್ಥಗಿತಗೊಳ್ಳಲು ಪ್ರಮುಖ ಕಾರಣ? ಪೈಲಟ್ಗಳ ಕೊರತೆ ಯಾಕೆ ಎದುರಾಯಿತು? ಇದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವಾದ ಡಿಜಿಸಿಎ ಇತ್ತೀಚೆಗೆ ಹೊರಡಿಸಿದ ಕೆಲ ನಿಯಮಗಳೇ ಕಾರಣ.
ಎಫ್ಡಿಟಿಎಲ್ ನಿಯಮಗಳಿವು…
- ಫ್ಲೈಟ್ ಸಿಬ್ಬಂದಿಗೆ (ಪೈಲಟ್) ವಾರದಲ್ಲಿ ಸಿಗಬೇಕಾದ ವಿಶ್ರಾಂತಿ ಅವಧಿ 36 ಗಂಟೆಯಿಂದ 48 ಗಂಟೆಗೆ ಹೆಚ್ಚಳ.
- ರಾತ್ರಿ 12ರಿಂದ 5ರ ಬದಲು ರಾತ್ರಿ 12ರಿಂದ 6 ಗಂಟೆ ಅವಧಿಯನ್ನು ನೈಟ್ ಡ್ಯೂಟಿ ಎಂದು ಪರಿಗಣಿಸಲಾಗುತ್ತದೆ.
- ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ (ರಾತ್ರಿ 12ರಿಂದ ಬೆಳಗ್ಗೆ 6) ಒಬ್ಬ ಪೈಲಟ್ ಮಾಡಬೇಕಾದ ಫ್ಲೈಟ್ ಲ್ಯಾಂಡಿಂಗ್ ಅನ್ನು ಆರರ ಬದಲು ಎರಡಕ್ಕೆ ಮಿತಿಗೊಳಿಸಬೇಕು.
- ಪೈಲಟ್ಗೆ ಸತತ ಎರಡಕ್ಕಿಂತ ಹೆಚ್ಚು ನೈಟ್ ಡ್ಯೂಟಿ ಕೊಡುವಂತಿಲ್ಲ.
- ರಾತ್ರಿ ಕಾರ್ಯಾಚರಣೆಗಳಲ್ಲಿ ಒಬ್ಬ ಪೈಲಟ್ನಿಂದ 8 ಗಂಟೆಗಿಂತ ಹೆಚ್ಚು ಅವಧಿ ವಿಮಾನ ಹಾರಾಟ ಮಾಡಿಸುವಂತಿಲ್ಲ.
ಇದನ್ನೂ ಓದಿ: ಇಂಡಿಗೋ ಮಾಲೀಕ ಯಾರು? ಅವರ ಬಳಿ ಎಷ್ಟಿದೆ ಆಸ್ತಿ? ದಿಢೀರ್ ಬಿಕ್ಕಟ್ಟಿಗೆ ಕಾರಣ ಏನು ಗೊತ್ತೇ? ಇಲ್ಲಿದೆ ಸಮಗ್ರ ಮಾಹಿತಿ
ಪರಿಸ್ಥಿತಿ ಗ್ರಹಿಸಲು ಇಂಡಿಗೋ ವಿಫಲವಾಯಿತೆ? ಅಥವಾ ಉದ್ಧಟನ ತೋರಿತೆ?
ವಿಮಾನ ಹಾರಿಸುವಾಗ ಪೈಲಟ್ಗಳು ಬಳಲಬಾರದೆಂದು ಡಿಜಿಸಿಎ ಈ ವಿಮಾನ ಕರ್ತವ್ಯ ಸಮಯದ ಮಿತಿ (ಎಫ್ಡಿಟಿಎಲ್) ನಿಯಮಗಳನ್ನು ರೂಪಿಸಿದೆ. ಜಾಗತಿಕವಾಗಿಯೂ ಈ ಸ್ಟ್ಯಾಂಡರ್ಡ್ ಇದೆ. 2024ರ ಜನವರಿಯಲ್ಲೇ ಡಿಜಿಸಿಎ ಈ ನಿಯಮಗಳನ್ನು ತಂದಿತ್ತಾದರೂ ಅದರ ಅನುಷ್ಠಾನವನ್ನು ನವೆಂಬರ್ನಲ್ಲಿ ಕಡ್ಡಾಯಗೊಳಿಸಲಾಯಿತು.
ಈ ನಿಯಮಗಳನ್ನು ಜಾರಿಗೆ ತರಬೇಕಾದರೆ ಹೆಚ್ಚುವರಿ ಪೈಲಟ್ಗಳನ್ನು ಇಂಡಿಗೋ ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ, ಈ ಸಂಸ್ಥೆಯು ಹೆಚ್ಚುವರಿ ವಿಮಾನಗಳನ್ನು ಖರೀದಿಸಲು ಮುಂದಾಗಿತ್ತೇ ವಿನಃ ಪೈಲಟ್ಗಳನ್ನು ನೇಮಕ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ.
ಕಡಿಮೆ ಸಂಖ್ಯೆಯ ಪೈಲಟ್ಗಗಳನ್ನು ಹೊಂದಿದ್ದ ಇಂಡಿಗೋ ಸಂಸ್ಥೆಯ ನೆತ್ತಿ ಮೇಲೆ ಮೊದಲೇ ಅಪಾಯದ ಕತ್ತಿ ತೂಗುತ್ತಿತ್ತು. ಈಗ ಎಫ್ಡಿಟಿಎಲ್ ನಿಯಮಗಳನ್ನು ಜಾರಿಗೆ ತರಲು ಹೊರಟಾಗ ಇಡೀ ವ್ಯವಸ್ಥೆಯ ಬುಡವೇ ಅಲುಗಾಡಗೊಡಗಿತು. ಪೈಲಟ್ಗಳಿಗೆ ಹೆಚ್ಚು ವಿಶ್ರಾಂತಿ ಅವಧಿ ಕೊಡಬೇಕಿದ್ದರಿಂದ ಸಾಕಷ್ಟು ಫ್ಲೈಟ್ಗಳಿಗೆ ಪೈಲಟ್ಗಳೇ ಇಲ್ಲದಂತಾಯಿತು. ಹೀಗಾಗಿ, ನಾಲ್ಕೈದು ದಿನದಲ್ಲೇ ಸಾವಿರಕ್ಕೂ ಹೆಚ್ಚು ಫ್ಲೈಟ್ಗಳು ರದ್ದಾಗಿವೆ.
ಇದನ್ನೂ ಓದಿ: ಇಂಡಿಗೋ ಬಿಕ್ಕಟ್ಟು, ಪ್ರಯಾಣಿಕರಿಗೆ 610 ಕೋಟಿ ರೂ.ಮೊತ್ತದ ಟಿಕೆಟ್ ಹಣ ಮರುಪಾವತಿಸಿದ ವಿಮಾನಯಾನ ಸಂಸ್ಥೆ
ಇಂಡಿಗೋ ಏರ್ಲೈನ್ಸ್ ಸಂಸ್ಥೆಯು ಹಲವು ತಿಂಗಳ ಮೊದಲೇ ಡಿಜಿಸಿಎ ನೀಡಿದ್ದ ಎಫ್ಡಿಟಿಎಲ್ ನಿಯಮಗಳನ್ನು ಲಘುವಾಗಿ ಪರಿಗಣಿಸಿದ್ದಿರಬೇಕು. ಪರಿಸ್ಥಿತಿ ಎದುರಿಸಲು ಹೆಚ್ಚುವರಿ ಪೈಲಟ್ಗಳ ನೇಮಕಾತಿ ಬದಲು, ಈ ಎಫ್ಡಿಟಿಎಲ್ ನಿಯಮಗಳನ್ನು ಸಡಿಲಿಕೆ ಮಾಡಲು ಸರ್ಕಾರದ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರಬೇಕು ಎಂದು ಕೆಲವರು ಅನುಮಾನಿಸಿದ್ದಾರೆ. ಒಟ್ಟಾರೆ, ಸರ್ಕಾರ ಕೂಡ ಇಂಡಿಗೋ ಏರ್ಲೈನ್ಸ್ನ ಈ ಬಿಕ್ಕಟ್ಟಿನ ಪ್ರಕರಣದಲ್ಲಿ ತನಿಖೆ ನಡೆಸಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




