ನಕಲಿ ವಜ್ರ ಗುರುತಿಸುವುದು ಹೇಗೆ? ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಪರೀಕ್ಷೆಗಳು
Find the purity of diamond through simple tests: ವಜ್ರ ಮಾರುಕಟ್ಟೆಯಲ್ಲಿ ಇತ್ತೀಚೆಗೆ ವಂಚನೆಗಳಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ಯಾವ್ಯಾವುವೋ ಹರಳು, ಕಲ್ಲುಗಳನ್ನು ವಜ್ರದಂತೆ ಹೊಳಪು ಕೊಟ್ಟು ಮಾರಲಾಗುತ್ತಿದೆ. ನಕಲಿ ವಜ್ರವನ್ನು ಲ್ಯಾಬ್ಗಳಲ್ಲಿ ಪರೀಕ್ಷೆಗೆ ಕೊಟ್ಟು ಗುರುತಿಸಬಹುದು. ಆದರೆ, ಮನೆಯಲ್ಲೇ ಕೂತು ವಜ್ರದ ಶುದ್ಧತೆ ಪರಿಶೀಲಿಸಬಹುದಾದ ಮಾರ್ಗೋಪಾಯಗಳಿವೆ. ಅದರ ವಿವರ ಇಲ್ಲಿದೆ.

ವಜ್ರವು (Diamond) ಅತ್ಯಂತ ದುಬಾರಿ ರತ್ನಗಳಲ್ಲಿ ಒಂದಾಗಿದೆ. ಇವುಗಳ ಉಪಯೋಗ ಬಹಳ ಇದೆ. ಗಾಜು, ಟೈಲ್ಸ್ ಇತ್ಯಾದಿಯನ್ನು ನಿಖರವಾಗಿ ಕತ್ತರಿಸಲು ಇದರ ಬಳಕೆ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ಆಭರಣಕ್ಕೆ ವಜ್ರ ಫೇಮಸ್. ವಜ್ರಾಭರಣವನ್ನು ಮಹಿಳೆಯರು ತುಂಬಾ ಇಷ್ಟಪಡುತ್ತಾರೆ. ಅದಕ್ಕಾಗಿಯೇ ಪುರುಷರು ತಾವು ಇಷ್ಟಪಡುವ ಮಹಿಳೆಗೆ ಮದುವೆ ಪ್ರಸ್ತಾಪ ಮಾಡುವಾಗ ವಜ್ರದ ಉಂಗುರಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದಾಗ್ಯೂ, ವಜ್ರವನ್ನು ಖರೀದಿಸುವ ಮೊದಲು ಅಥವಾ ಹೊಳೆಯುವ ಕಲ್ಲನ್ನೇ ವಜ್ರ ಎಂದು ಭಾವಿಸುವ ಮೊದಲು, ಅದು ನೈಜ ವಜ್ರವಾ ಅಥವಾ ಅದರ ಶುದ್ಧತೆ ಎಷ್ಟು ಎಂದು ಪರಿಶೀಲಿಸುವುದು ಮುಖ್ಯ.
ಅಮೂಲ್ಯ ಕಲ್ಲುಗಳ ಜಗತ್ತಿನಲ್ಲಿ ವಜ್ರ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ಲ್ಯಾಬ್ನಲ್ಲೂ ಡೈಮಂಡ್ ತಯಾರಿಸಲಾಗುತ್ತದೆ. ನಕಲಿ ವಜ್ರಗಳು ಬಿಳಿ ಜಿರ್ಕಾನ್, ಸ್ಫಟಿಕ ಶಿಲೆ, ಗಾಜು, ಬಿಳಿ ನೀಲಮಣಿ ಮತ್ತು ಬಿಳಿ ಸ್ಪಿನೆಲ್ ಆಗಿರಬಹುದು. ವಜ್ರದ ಶುದ್ಧತೆಯನ್ನು ಜಿಐಎ, ಐಜಿಐ ಇತ್ಯಾದಿ ಲ್ಯಾಬ್ಗಳಲ್ಲಿ ಪರೀಕ್ಷಿಸಿ ಪತ್ತೆ ಮಾಡಬಹುದು. ಮನೆಯಲ್ಲಿ ನಾವೇ ಸುಲಭವಾಗಿ ಮಾಡಬಹುದಾದ ಪರೀಕ್ಷೆಗಳೂ ಇವೆ.
ಇದನ್ನೂ ಓದಿ: ಕೋರ್ಟ್ ತೀರ್ಪು ಪ್ರಶ್ನಿಸಿ ನ್ಯಾಯಮಂಡಳಿ ಮೊರೆ ಹೋಗಲಿರುವ ಪತಂಜಲಿ
ನೀರಿನಲ್ಲಿ ಮುಳುಗಿಸಿ: ವಜ್ರವು ನಿಜವಾದದ್ದೇ ಎಂದು ನಿರ್ಧರಿಸಲು, ಒಂದು ಲೋಟ ನೀರನ್ನು ತೆಗೆದುಕೊಂಡು ಅದರಲ್ಲಿ ವಜ್ರದ ತುಂಡನ್ನು ಇರಿಸಿ. ವಜ್ರವು ನೀರಿನಲ್ಲಿ ಮುಳುಗಿದರೆ, ಅದು ಶುದ್ಧವಾಗಿರುತ್ತದೆ.
ಸ್ಯಾಂಡ್ಪೇಪರ್ನಿಂದ ಉಜ್ಜಿರಿ: ಸ್ಯಾಂಡ್ಪೇಪರ್ನಿಂದ ವಜ್ರದ ಸ್ಯಾಂಪಲ್ ಅನ್ನು ಉಜ್ಜಿರಿ. ನೈಜ ವಜ್ರವಾಗಿದ್ದರೆ ಏನೂ ಆಗದು. ನಕಲಿಯಾಗಿದ್ದರೆ ಗೀರುಗಳಾಗಬಹುದು.
ಕತ್ತಲೆಯಲ್ಲಿ ಪರಿಶೀಲಿಸಿ: ಕೋಣೆಯ ಲೈಟ್ ಎಲ್ಲಾ ಬಂದ್ ಮಾಡಿ ಕತ್ತಲಾದ ವಾತಾವರಣದಲ್ಲಿ ಕಲ್ಲನ್ನು ಗಮನಿಸಿ ನೋಡಿ. ನೈಜ ವಜ್ರವಾಗಿದ್ದರೆ ಗಾಢ ನೀಲಿ ಬಣ್ಣ ಕಾಣುತ್ತದೆ. ನಕಲಿಯಾಗಿದ್ದರೆ ಹಳದಿ, ಕಂದು, ಹಸಿರು ಇತ್ಯಾದಿ ಬಣ್ಣಗಳು ಕಾಣಿಸುತ್ತವೆ.
ಇದನ್ನೂ ಓದಿ: ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್
ಬಾಯಿಂದ ಊದಿರಿ: ವಜ್ರವನ್ನು ಎರಡು ಬೆರಳುಗಳಿಂದ ಹಿಡಿದು ಅದರ ಮೇಲೆ ಸ್ವಲ್ಪ ಊದಿರಿ. ಬಾಯಿಯಿಂದ ಬರುವ ತೇವದ ಗಾಳಿಯು ಕಲ್ಲಿನ ಮೇಲೆ ಕೂರುತ್ತದೆ. ನೈಜ ವಜ್ರವಾಗಿದ್ದರೆ ಕೂಡಲೇ ಆ ಆವಿ ಮಾಯವಾಗುತ್ತದೆ. ನಕಲಿಯಾಗಿದ್ದರೆ ಕೆಲ ಕ್ಷಣಗಳವರೆಗೆ ಆವಿ ಉಳಿದಿರುತ್ತದೆ.
ಓದಲು ಯತ್ನಿಸಿ: ಕಪ್ಪು ಬಣ್ಣದ ಅಕ್ಷರಗಳಿರುವ ಬಿಳಿ ಹಾಳೆಯನ್ನು ತೆಗೆದುಕೊಳ್ಳಿ. ವಜ್ರದ ಕಲ್ಲನ್ನು ಉಲ್ಟಾ ಹಿಡಿದುಕೊಂಡು ಪೇಪರ್ನಲ್ಲಿರುವ ಅಕ್ಷರಗಳನ್ನು ಓದಲು ಯತ್ನಿಸಿ. ನೈಜ ವಜ್ರವಾಗಿದ್ದರೆ ಓದಲು ಆಗದು. ನಕಲಿಯಾಗಿದ್ದರೆ ಓದಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




