ನೆಟ್ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್ನಿಂದ ಭಾರತೀಯ ಚಿತ್ರೋದ್ಯಮ ಕಂಗಾಲು; ಸಿನಿಮಾ ರಂಗದ ಆತಂಕವೇನು?
Why Indian film industry worried over Netflix acquiring Warner Bros: ವಾರ್ನರ್ ಬ್ರೋಸ್ ಡಿಸ್ಕವರಿ ಸಂಸ್ಥೆಯನ್ನು ನೆಟ್ಫ್ಲಿಕ್ಸ್ ಖರೀದಿಸಲಾಗುತ್ತಿರುವ ಸುದ್ದಿಗೆ ಭಾರತದ ಮಲ್ಟಿಪ್ಲೆಕ್ಸ್ಗಳು ಆತಂಕಗೊಂಡಿವೆ. ಈ ಬೆಳವಣಿಗೆಯಿಂದ ಚಿತ್ರಮಂದಿರಗಳಿಗೆ ಹಿನ್ನಡೆಯಾಗಬಹುದು ಎಂಬುದು ಮಲ್ಟಿಪ್ಲೆಕ್ಸ್ಗಳ ಸಂಘಟನೆಯಾದ ಎಂಎಐ ಹೇಳಿಕೊಂಡಿದೆ. ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಕಂಪನಿಯಾದ ನೆಟ್ಫ್ಲಿಕ್ಸ್ 83 ಬಿಲಿಯನ್ ಡಾಲರ್ಗೆ ವಾರ್ನರ್ ಬ್ರೋಸ್ ಅನ್ನು ಖರೀದಿಸುತ್ತಿದೆ.

ನವದೆಹಲಿ, ಡಿಸೆಂಬರ್ 8: ವಿಶ್ವದ ನಂಬರ್ ಒನ್ ಸ್ಟ್ರೀಮಿಂಗ್ ಕಂಪನಿ ಎನಿಸಿದ ನೆಟ್ಫ್ಲಿಕ್ಸ್ (Netflix) ಇದೀಗ ಜಾಗತಿಕ ಚಿತ್ರೋದ್ಯಮ ದೈತ್ಯ ವಾರ್ನರ್ ಬ್ರೋಸ್ ಡಿಸ್ಕವರಿಯನ್ನು (Warner Bros. Discovery) 83 ಬಿಲಿಯನ್ ಡಾಲರ್ ಹಣಕ್ಕೆ ಖರೀದಿಸುತ್ತಿರುವುದಾಗಿ ಡೀಲ್ (Netflix Warner Bros deal) ಘೋಷಿಸಿದೆ. ವಾರ್ನರ್ ಬ್ರೋಸ್ನ ಹಿರಿತೆರೆ ಮತ್ತು ಕಿರುತೆರೆ ಸ್ಟುಡಿಯೋಗಳು ನೆಟ್ಫ್ಲಿಕ್ಸ್ ತೆಕ್ಕೆಗೆ ಜಾರಲಿವೆ. ಬರೋಬ್ಬರಿ ಏಳೂವರೆ ಲಕ್ಷ ಕೋಟಿ ರೂ ಮೊತ್ತದ ಈ ಡೀಲ್ ಅನ್ನು ಭಾರತೀಯ ಸಿನಿಮಾ ರಂಗ ಕಳವಳದಿಂದ ನೋಡುತ್ತಿದೆ. ಭಾರತದ ಚಿತ್ರಮಂದಿರಗಳ ಒಕ್ಕೂಟಗಳಲ್ಲಿ ಪ್ರಮುಖವಾಗಿರುವ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ (MAI- Multiplex Association of India) ಮೊನ್ನೆ ಬಹಿರಂಗವಾಗಿಯೇ ತನ್ನ ದುಗುಡವನ್ನು ಹೊರಹಾಕಿದೆ.
ನೆಟ್ಫ್ಲಿಕ್ಸ್ ವಾರ್ನರ್ ಬ್ರೋಸ್ ಡೀಲ್ನಿಂದ ಭಾರತದ ಚಿತ್ರಮಂದಿರಗಳಿಗೆ ಏನು ಹಿನ್ನಡೆ?
ವಾರ್ನರ್ ಬ್ರೋಸ್ ವಿಶ್ವದ ಅತ್ಯಂತ ಪ್ರತಿಷ್ಠಿತ ಫಿಲಂ ಸ್ಟುಡಿಯೋ ಎನಿಸಿದೆ. ಹಾಲಿವುಡ್ನ ಅದ್ಭುತ ಸಿನಿಮಾಗಳನ್ನು ತೆರೆಗೆ ಕೊಟ್ಟ ಖ್ಯಾತಿ ಅದರದ್ದು. ಹ್ಯಾರಿ ಪಾಟರ್ ಸರಣಿಯ ಸಿನಿಮಾಗಳು, ದಿ ಲಾರ್ಡ್ ಆಫ್ ದಿ ರಿಂಗ್ಸ್, ಬ್ಯಾಟ್ಮ್ಯಾನ್, ಸೂಪರ್ಮ್ಯಾನ್ ಇತ್ಯಾದಿ ಸರಣಿಯ ಸಿನಿಮಾಗಳು, ಕೆಸಬ್ಲಾಂಕಾ (Casablanca), ಸಿಟಿಜನ್ ಕೇನ್, ಬಾರ್ಬೀ ಇತ್ಯಾದಿ ಕ್ಲಾಸಿಕ್ ಸಿನಿಮಾಗಳು ವಾರ್ನರ್ ಬ್ರೋಸ್ ಸ್ಟುಡಿಯೋದಿಂದ ನಿರ್ಮಾಣವಾಗಿವೆ.
ಭಾರತೀಯ ಚಿತ್ರರಂಗದಲ್ಲೂ ವಾರ್ನರ್ ಬ್ರೋಸ್ ಛಾಪು ಇದೆ. ಹಲವು ಬಾಲಿವುಡ್ ಸಿನಿಮಾಗಳನ್ನು ಈ ಸ್ಟುಡಿಯೋ ಬಿಡುಗಡೆ ಮಾಡಿದೆ. ವಾರ್ನರ್ ಬ್ರೋಸ್ನಂತಹ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುವ ದೊಡ್ಡ ಹಾಲಿವಡ್ ಸಿನಿಮಾಗಳು ಭಾರತದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಒಳ್ಳೆಯ ಸರಕಾಗಿರುತ್ತವೆ.
ಇದನ್ನೂ ಓದಿ: ಹಾಲಿವುಡ್ ಫೇಮಸ್ ಸ್ಟುಡಿಯೋನ 7.4 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ ನೆಟ್ಫ್ಲಿಕ್ಸ್
ಭಾರತೀಯ ಮಲ್ಟಿಪ್ಲೆಕ್ಸ್ಗಳಿಗೆ ಆತಂಕ ಹುಟ್ಟಿರುವುದು ಇಲ್ಲೇ. ನೆಟ್ಫ್ಲಿಕ್ಸ್ ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್. ಒಟಿಟಿಯಲ್ಲಿ ಇದು ನಂಬರ್ ಒನ್. ಇದರ ವೆಬ್ ಸೀರೀಸ್ಗಳು ಸಿನಿಮಾ ಕಂಟೆಂಟ್ ಅನ್ನೇ ಮೀರಿಸುವಂತಿರುತ್ತವೆ. ಸಿನಿಮಾಗಳನ್ನು ನಿರ್ಮಾಣ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆಯೇ ನೇರವಾಗಿ ಒಟಿಟಿಗೆ ರಿಲೀಸ್ ಮಾಡುವುದುಂಟು. ನೆಟ್ಫ್ಲಿಕ್ಸ್ ಅನೇಕ ಬಾರಿ ಇದನ್ನು ಹೇಳಿದ್ದಿದೆ. ಸಿನಿಮಾ ಮಾದರಿಯಲ್ಲಿ ತನಗೆ ನಂಬಿಕೆ ಇಲ್ಲ. ಥಿಯೇಟರ್ನಲ್ಲೇ ಕಂಟೆಂಟ್ ರಿಲೀಸ್ ಮಾಡುವ ಆಸೆ ಇಲ್ಲ ಎಂದು ಬಾರಿ ಬಾರಿ ಹೇಳಿದೆ.
ನೆಟ್ಫ್ಲಿಕ್ಸ್ನ ಈ ನಿಲುವೇ ಭಾರತದ ಮಲ್ಟಿಪ್ಲೆಕ್ಸ್ಗಳನ್ನು ಆತಂಕಕ್ಕೆ ನೂಕಿರುವುದು. ಥಿಯೇಟರ್ಗಳಿಗೆ ಬೇಕಾಗುವ ಸರಕುಗಳು ವಾರ್ನರ್ ಬ್ರೋಸ್ನಿಂದ ನಿರ್ಮಾಣ ಆಗುವುದು ನಿಂತು ಹೋದರೆ ತಮ್ಮ ಚಿತ್ರಮಂದಿರಗಳ ಗತಿ ಏನು ಎಂಬುದು ಇವರ ದುಗುಡಕ್ಕೆ ಇರುವ ಕಾರಣ.
ಡೀಲ್ನಿಂದ ಏನೂ ಬದಲಾಗಲ್ಲ: ನೆಟ್ಫ್ಲಿಕ್ಸ್ ಸಮಜಾಯಿಷಿ
ವಾರ್ನರ್ ಬ್ರೋಸ್ ಖರೀದಿಸುವ ಡೀಲ್ನಿಂದ ಯಾವ ಕಾರ್ಯಚಟುವಟಿಕೆ ಬದಲಾಗಲ್ಲ ಎಂದು ನೆಟ್ಫ್ಲಿಕ್ಸ್ ಸ್ಪಷ್ಟಪಡಿಸಿದೆ. ನೆಟ್ಫ್ಲಿಕ್ಸ್ ಮತ್ತು ವಾರ್ನರ್ ಬ್ರೋಸ್ ಎರಡೂ ಕೂಡ ಈಗಿರುವ ರೀತಿಯಲ್ಲೇ ಪ್ರತ್ಯೇಕವಾಗಿ ಚಟುವಟಿಕೆ ಮುಂದುವರಿಸುತ್ತವೆ ಎಂದು ನೆಟ್ಫ್ಲಿಕ್ಸ್ ಹೇಳಿದೆ.
ಇದನ್ನೂ ಓದಿ: ಚಾಟ್ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ
ಈ ಡಿಸೆಂಬರ್ನೊಳಗೆ ಡೀಲ್ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವಾರ್ನರ್ ಬ್ರೋಸ್ನ ಫಿಲಂ ಮತ್ತು ಟಿವಿ ಸ್ಟುಡಿಯೋಗಳು ನೆಟ್ಫ್ಲಿಕ್ಸ್ ಪಾಲಾಗುತ್ತದೆ. ಎಚ್ಬಿಒದ ಕೇಬಲ್ ನೆಟ್ವರ್ಕ್ ಮತ್ತಿತರ ಕೆಲ ಬ್ಯುಸಿನೆಸ್ಗಳು ಈ ಡೀಲ್ನ ಭಾಗವಾಗಿರುವುದಿಲ್ಲ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




