APY scheme: ಅಟಲ್ ಪೆನ್ಷನ್ ಯೋಜನೆ ಪಡೆದ 8 ಕೋಟಿ ಜನರು; ಏನಿದು ಪಿಂಚಣಿ ಸ್ಕೀಮ್? ಎಷ್ಟು ಸಿಗುತ್ತೆ ಲಾಭ?
Atal Pension Yojana benefits and other details: 2015ರಲ್ಲಿ ಆರಂಭವಾದ ಅಟಲ್ ಪಿಂಚಣಿ ಯೋಜನೆಗೆ ಈವರೆಗೆ ನೊಂದಾಯಿಸಿದವರ ಸಂಖ್ಯೆ 8.34 ಕೋಟಿಗೂ ಅಧಿಕ ಇದೆ. ಬಡವರು ಮತ್ತು ಕೆಳ ಮಧ್ಯಮ ವರ್ಗದವರಿಗೆಂದು ಸರ್ಕಾರ ಈ ಪೆನ್ಷನ್ ಸ್ಕೀಮ್ ನಡೆಸುತ್ತಿದೆ. ತಿಂಗಳಿಗೆ ಕೇವಲ 42 ರೂನಿಂದ ಹೂಡಿಕೆಯ ಮೊತ್ತ ಆರಂಭವಾಗುತ್ತದೆ. 60ರ ನಂತರ ಪಿಂಚಣಿ ಸಿಗುತ್ತಾ ಹೋಗುತ್ತದೆ.

ಕಡಿಮೆ ಆದಾಯ ಗುಂಪಿನ ಜನರಿಗೆ ಅಟಲ್ ಪೆನ್ಷನ್ ಯೋಜನೆ (Atal Pension Yojana) ಉಪಯುಕ್ತವಾಗಿರುವ ಪಿಂಚಣಿ ಸ್ಕೀಮ್ ಎನಿಸಿದೆ. ಇಲ್ಲಿಯವರೆಗೆ (2025ರ ಅ. 31) ಈ ಪಿಂಚಣಿಗೆ ನೊಂದಾಯಿಸಿದ ವ್ಯಕ್ತಿಗಳ ಸಂಖ್ಯೆ 8.34 ಕೋಟಿಗೆ ಏರಿದೆ. ಈ ಪೈಕಿ 4.04 ಕೋಟಿ ಮಹಿಳೆಯರೇ ಇದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಈ ಮಾಹಿತಿಯನ್ನು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಹಂಚಿಕೊಂಡಿದ್ದಾರೆ. 2015ರಲ್ಲಿ ಆರಂಭವಾದ ಈ ಪಿಂಚಣಿಯ ಯೋಜನೆಯ ಮೊದಲ ಫಲಾನುಭವಿಗಳಿಗೆ ಪೆನ್ಷನ್ ಸಿಗುವುದು 2035ರಿಂದ ಆರಂಭವಾಗುತ್ತದೆ.
ಅಟಲ್ ಪೆನ್ಷನ್ ಯೋಜನೆ ಯಾರು ಮಾಡಿಸಬಹುದು?
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ಯಾರು ಬೇಕಾದರೂ ಈ ಎಪಿವೈ ಅಥವಾ ಅಟಲ್ ಪೆನ್ಷನ್ ಯೋಜನೆಯನ್ನು ಮಾಡಿಸಬಹುದು.
ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಗರಿಷ್ಠ ವಯಸ್ಸು 40 ವರ್ಷ ಆಗಿರಬೇಕು. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಸ್ಕೀಮ್ ಪಡೆಯಬಹುದು. ವ್ಯಕ್ತಿಯ ವಯಸ್ಸು 60 ವರ್ಷ ಆದ ಬಳಿಕ ನಿಗದಿತ ಮಾಸಿಕ ಪಿಂಚಣಿ ಸಿಗುತ್ತಾ ಹೋಗುತ್ತದೆ.
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್
ಎಷ್ಟು ಪಿಂಚಣಿ ಸಿಗುತ್ತದೆ? ಎಷ್ಟು ಹಣ ಕಟ್ಟಬೇಕು?
ಅಟಲ್ ಪಿಂಚಣಿ ಯೋಜನೆಯಲ್ಲಿ ಐದು ವಿವಿಧ ಪಿಂಚಣಿ ಮೊತ್ತ ಇದೆ. ಮಾಸಿಕ 1,000 ರೂ, 2,000 ರೂ, 3,000 ರೂ, 4,000 ರೂ ಮತ್ತು 5,000 ರೂಗಳ ಕನಿಷ್ಠ ಗ್ಯಾರಂಟಿ ಪೆನ್ಷನ್ ಸಿಗುತ್ತದೆ. ಕಟ್ಟುವ ಹಣವೂ ಕೂಡ ಪ್ರವೇಶದ ವಯಸ್ಸು, ಕನಿಷ್ಠ ಪಿಂಚಣಿ ಮೊತ್ತ ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.
ಉದಾಹರಣೆಗೆ, ಮಾಸಿಕ 1,000 ರೂ ಪಿಂಚಣಿ ಬೇಕೆಂದರೆ, 18 ವರ್ಷ ವಯಸ್ಸಿನಲ್ಲೇ ನೀವು ಯೋಜನೆ ಪಡೆದರೆ ತಿಂಗಳಿಗೆ 42 ರೂ ಮಾತ್ರವೇ ಕಟ್ಟುತ್ತಾ ಹೋಗಬಹುದು. ಒಂದು ವರ್ಷದಲ್ಲಿ 504 ರೂ ಕಟ್ಟುತ್ತೀರಿ. ಈ 42 ವರ್ಷದಲ್ಲಿ ನೀವು ಕಟ್ಟುವ ಒಟ್ಟು ಮೊತ್ತ ಸುಮಾರು 21,168 ರೂ ಮಾತ್ರವೇ. ಈ ಹೂಡಿಕೆಯಿಂದ ನಿಮಗೆ ಮಾಸಿಕವಾಗಿ 1,000 ರೂ ಪಿಂಚಣಿ ಸಿಗತ್ತಿರುತ್ತದೆ. ನಿಮ್ಮ ನಿಧನದ ಬಳಿಕ ನಾಮಿನಿಗೆ 1.7 ಲಕ್ಷ ರೂ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: SIP Magic: ಸಖತ್ತಾಗಿ ಲಾಭ ತಂದ ಫಂಡ್; 2,000 ರೂ ಎಸ್ಐಪಿ; 5 ಕೋಟಿ ರೂ ಲಾಭ
ಹಾಗೆಯೇ, ಐದು ಸಾವಿರ ರೂ ಪಿಂಚಣಿ ಪಡೆಯುವ ಪ್ಲಾನ್ ಆರಿಸಿಕೊಂಡು 18ರ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ ತಿಂಗಳಿಗೆ 210 ರೂ ಕಟ್ಟುತ್ತಾ ಹೋಗಬೇಕು. ಈ 42 ವರ್ಷದಲ್ಲಿ ನೀವು ಕಟ್ಟುವ ಹಣ 1,05,840 ರೂ ಆಗಿರುತ್ತದೆ. ಈ ಪ್ಲಾನ್ನಲ್ಲಿ ನಿಮಗೆ ಮಾಸಿಕವಾಗಿ 5,000 ರೂ ಪಿಂಚಣಿ ಸಿಗುತ್ತಾ ಹೋಗುತ್ತದೆ. ನೀವು ನಿಧನ ಹೊಂದಿದರೆ ನಾಮಿನಿಗೆ 8.5 ಲಕ್ಷ ರೂ ಪರಿಹಾರ ಸಿಗುತ್ತದೆ.
ಒಂದು ವೇಳೆ, 40ನೇ ವಯಸ್ಸಿನಲ್ಲಿ 5,000 ರೂ ಪಿಂಚಣಿ ಪ್ಲಾನ್ ಪಡೆದರೆ 20 ವರ್ಷ ಅವಧಿ ತಿಂಗಳಿಗೆ 1,454 ರೂ ಹೂಡಿಕೆ ಮಾಡಬೇಕಾಗುತ್ತದೆ.
ಈ ಸ್ಕೀಮ್ನಲ್ಲಿ ಇಪಿಎಫ್ ರೀತಿಯಲ್ಲಿ ಸರ್ಕಾರವೂ ಕೂಡ ನಿಧಿಗೆ ಕೊಡುಗೆ ನೀಡುತ್ತದೆ. ಒಟ್ಟಾರೆ, ಇದರಲ್ಲಿ ಮಾಡುವ ಹೂಡಿಕೆಯು ಶೇ. 8ರಿಂದ ಶೇ. 8.50ರಷ್ಟು ಸಿಎಜಿಆರ್ನಲ್ಲಿ ಬೆಳವಣಿಗೆ ಕಾಣುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




