Mutual Fund Charges: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…
Mutual Fund schemes and various charges: ಮ್ಯೂಚುವಲ್ ಫಂಡ್ ಸ್ಕೀಮ್ಗಳಲ್ಲಿ ನೀವು ಮಾಡುವ ಹೂಡಿಕೆ ಜೊತೆಗೆ ವಿವಿಧ ರೀತಿಯ ಶುಲ್ಕಗಳನ್ನೂ ತೆರಬೇಕಾಗುತ್ತದೆ. ಎಕ್ಸಿಟ್ ಲೋಡ್, ಟ್ರಾನ್ಸಾಕ್ಷನ್ ಚಾರ್ಜ್, ಎಕ್ಸ್ಪೆನ್ಸ್ ರೇಶಿಯೋ, ಸ್ವಿಚ್ ಪ್ರೈಸ್ ಇತ್ಯಾದಿ ಶುಲ್ಕಗಳಿರುತ್ತವೆ. ಇದರಲ್ಲಿ ಎಕ್ಸ್ಪೆನ್ಸ್ ರೇಶಿಯೋ ವಾರ್ಷಿಕವಾಗಿ ಪಡೆಯಲಾಗುವ ಶುಲ್ಕವಾಗಿರುತ್ತದೆ. ಎನ್ಎವಿಯಲ್ಲೇ ಇದು ಸೇರಿಕೊಳ್ಳುವುದರಿಂದ ಹೊರಗೆ ಕಾಣುವುದಿಲ್ಲ.

ಮ್ಯೂಚುವಲ್ ಫಂಡ್ಗಳು (Mutual Funds) ಬಹಳ ಜನಪ್ರಿಯವಾಗಿರುವ ಮತ್ತು ಸಾಮಾನ್ಯವಾಗಿ ಬಳಸಲಾಗುತ್ತಿರುವ ಹೂಡಿಕೆಸ್ಥಳಗಳಾಗಿವೆ. ವಿವಿಧ ಮ್ಯೂಚುವಲ್ ಫಂಡ್ ಸಂಸ್ಥೆಗಳು ಹಲವಾರು ರೀತಿಯ ಸ್ಕೀಮ್ಗಳನ್ನು ಆಫರ್ ಮಾಡುತ್ತವೆ. ಈ ಸ್ಕೀಮ್ಗಳಲ್ಲಿ ಹೂಡಿಕೆ ಮಾಡಲು ಸಂಸ್ಥೆಗಳು ವಿವಿಧ ಶುಲ್ಕಗಳನ್ನು ವಿಧಿಸುತ್ತವೆ. ಫಂಡ್ ನಿರ್ವಹಣೆಗೆ ತಗುಲುವ ಎಲ್ಲಾ ರೀತಿಯ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಶುಲ್ಕಗಳ ಮೂಲಕ ವಸೂಲಿ ಮಾಡಲಾಗುತ್ತದೆ.
ಮ್ಯೂಚುವಲ್ ಫಂಡ್ ಸ್ಕೀಮ್ಗಳಲ್ಲಿ ವಿಧಿಸಲಾಗುವ ಪ್ರಮುಖ ಶುಲ್ಕಗಳು
- ಎಂಟ್ರಿ ಲೋಡ್ (ಪ್ರವೇಶ ಶುಲ್ಕ)
- ಎಕ್ಸಿಟ್ ಲೋಡ್ (ನಿರ್ಗಮನ ಶುಲ್ಕ)
- ವಹಿವಾಟು ಶುಲ್ಕ (ಟ್ರಾನ್ಸಾಕ್ಷನ್ ಚಾರ್ಜ್)
- ನಿರ್ವಹಣಾ ವೆಚ್ಚ (ಎಕ್ಸ್ಪೆನ್ಸ್ ರೇಶಿಯೋ)
- ಬದಲಾವಣೆ ಶುಲ್ಕ (ಸ್ವಿಚ್ ಪ್ರೈಸ್)
ಮ್ಯೂಚುವಲ್ ಫಂಡ್ ಸ್ಕೀಮ್ನಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡುವಾಗ ಎಂಟ್ರಿ ಲೋಡ್ ಅಥವಾ ಪ್ರವೇಶ ಶುಲ್ಕ ತೆರಬೇಕಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಸೆಬಿ ಈ ಶುಲ್ಕ ವಸೂಲಿಯನ್ನು ನಿರ್ಬಂಧಿಸಿದೆ.
ಮ್ಯುಚುವಲ್ ಫಂಡ್ ಎಕ್ಸಿಟ್ ಲೋಡ್ ತಿಳಿದಿರಿ…
ನೀವು ಮ್ಯೂಚುವಲ್ ಫಂಡ್ ಸ್ಕೀಮ್ನಲ್ಲಿ ಹೂಡಿಕೆ ಮಾಡಿ, ನಿಗದಿತ ಅವಧಿಯೊಳಗೆ ನಿರ್ಗಮಿಸಿದರೆ ಎಕ್ಸಿಟ್ ಲೋಡ್ ಅಥವಾ ನಿರ್ಗಮನ ಶುಲ್ಕ ತೆರಬೇಕಾಗುತ್ತದೆ. ಸಾಮಾನ್ಯವಾಗಿ ಎಕ್ಸಿಟ್ ಲೋಡ್ಗೆ ಒಂದು ವರ್ಷ ಮಿತಿ ಇರುತ್ತದೆ. ಕೆಲ ಸ್ಕೀಮ್ಗಳಲ್ಲಿ ಇದು ಬದಲಾಗಬಹುದು.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ ಪಡೆದ 8 ಕೋಟಿ ಜನರು; ಏನಿದು ಪಿಂಚಣಿ ಸ್ಕೀಮ್? ಎಷ್ಟು ಸಿಗುತ್ತೆ ಲಾಭ?
ಎಕ್ಸಿಟ್ ಲೋಡ್ ಶೇ 1 ಎಂದಿಟ್ಟುಕೊಳ್ಳೋಣ. ನೀವು ಹೂಡಿಕೆ ಮಾಡಿ ಒಂದು ವರ್ಷದೊಳಗೆ ಹಣ ಹಿಂಪಡೆಯುತ್ತಿದ್ದರೆ ಎಕ್ಸಿಟ್ ಲೋಡ್ ಶುಲ್ಕ ಅನ್ವಯ ಆಗುತ್ತದೆ. ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಎಕ್ಸಿಟ್ ಲೋಡ್ 1,000 ರೂ ಅನ್ನು ಮುರಿದುಕೊಳ್ಳಲಾಗುತ್ತದೆ.
ಮ್ಯೂಚುವಲ್ ಫಂಡ್ ಟ್ರಾನ್ಸಾಕ್ಷನ್ ಶುಲ್ಕಗಳು
10,000 ರೂ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಹೂಡಿಕೆ ಮಾಡಿದಾಗ ಟ್ರಾನ್ಸಾಕ್ಷನ್ ಫೀ ಪಡೆಯಲಾಗುತ್ತದೆ. ಸಾಮಾನ್ಯವಾಗಿ ಇದು 100ರಿಂದ 150 ರೂ ಇರುತ್ತದೆ. 10,000 ರೂ ಒಳಗಿನ ಹೂಡಿಕೆಗೆ ಈ ಶುಲ್ಕ ಇರುವುದಿಲ್ಲ.
ಮ್ಯೂಚುವಲ್ ಫಂಡ್ ಎಕ್ಸ್ಪೆನ್ಸ್ ರೇಶಿಯೋ ಬಹಳ ಮುಖ್ಯ…
ಮ್ಯೂಚುವಲ್ ಫಂಡ್ ಸಂಸ್ಥೆಗಳು ಹೂಡಿಕೆದಾರರಿಂದ ಪಡೆಯುವ ಪ್ರಮುಖ ಶುಲ್ಕ ಇದು. ಮ್ಯೂಚುವಲ್ ಫಂಡ್ ಸ್ಕೀಮ್ನ ಡಿಸ್ಟ್ರಿಬ್ಯೂಶನ್, ಕಮಿಷನ್, ಮಾರ್ಕೆಟಿಂಗ್, ಸೇಲ್ಸ್, ಫಂಡ್ ಮ್ಯಾನೇಜರ್ ಫೀ, ಅಕೌಂಟ್ ಫೀ, ಸರ್ವಿಸ್ ಫೀ ಇತ್ಯಾದಿ ಎಲ್ಲಾ ರೀತಿಯ ವೆಚ್ಚಗಳನ್ನು ಪರಿಗಣಿಸಿ ಎಕ್ಸ್ಪೆನ್ಸ್ ರೇಶಿಯೋ ನಿರ್ಧರಿಸುತ್ತದೆ. ವಾರ್ಷಿಕವಾಗಿ ಇದನ್ನು ವಸೂಲಿ ಮಾಡಲಾಗುತ್ತದೆ. ಶೇ 2.25ರವರೆಗೂ ಎಕ್ಸ್ಪೆನ್ಸ್ ರೇಶಿಯೋ ಇರುತ್ತದೆ. ಸೆಬಿ ಇಲ್ಲಿಯೂ ಫಂಡ್ ಸಂಸ್ಥೆಗಳಿಗೆ ಒಂದು ಮಿತಿ ಹಾಕಿರುತ್ತದೆ. ಫಂಡ್ನ ಗಾತ್ರದ ಮೇಲೆ ಟಿಇಆರ್ ಅಥವಾ ಎಕ್ಸ್ಪೆನ್ಸ್ ರೇಶಿಯೋ ಅವಲಂಬಿತವಾಗಿರುತ್ತದೆ.
ಫಂಡ್ ಗಾತ್ರ ಹಾಗೂ ಎಕ್ಸ್ಪೆನ್ಸ್ ರೇಶಿಯೋ (ಈಕ್ವಿಟಿ ಫಂಡ್ಗಳಿಗೆ)
- 500 ಕೋಟಿ ರೂವರೆಗೆ: ಶೇ. 2.25 ಟಿಇಆರ್
- 500-750 ಕೋಟಿ ರೂ: ಶೇ. 2
- 750-2,000 ಕೋಟಿ ರೂ: ಶೇ. 1.75
- 2,000-5,000 ಕೋಟಿ ರೂ: ಶೇ. 1.60
- 5,000-10,000 ಕೋಟಿ ರೂ: ಶೇ 1.50
- 10,000-50,000 ಕೋಟಿ ರೂ: ಶೇ. 1.05ರಿಂದ ಶೇ 1.50ರವರೆಗೆ.
- 50,000 ಕೋಟಿ ರೂ ಮೇಲ್ಪಟ್ಟು: ಶೇ 1.05
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಎಕ್ಸ್ಪೆನ್ಸ್ ರೇಶಿಯೋ ಎಂಬುದು ಮೇಲ್ನೋಟಕ್ಕೆ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇದು ಮ್ಯೂಚುವಲ್ ಫಂಡ್ ಸ್ಕೀಮ್ನ ಎನ್ಎವಿಯೊಳಗೆಯೇ ಅಡಕವಾಗುತ್ತದೆ. ಅಂದರೆ, ನಿತ್ಯ ಬದಲಾಗುವ ಎನ್ಎವಿಗೆ ಈ ವೆಚ್ಚವನ್ನೂ ಸೇರಿಸಲಾಗಿರುತ್ತದೆ. ಶೇ. 1ರಷ್ಟು ಎಕ್ಸ್ಪೆನ್ಸ್ ರೇಶಿಯೋ ಅಥವಾ ಟಿಇಆರ್ ಇದ್ದರೆ ನಿಮ್ಮ ಒಂದು ಲಕ್ಷ ರೂ ಹೂಡಿಕೆಗೆ ನೀವು ಪ್ರತೀ ವರ್ಷ 1,000 ರೂ ಅನ್ನು ಟಿಇಆರ್ ಆಗಿ ನೀಡಬೇಕಾಗುತ್ತದೆ.
ಡೈರೆಕ್ಸ್ ಸ್ಕೀಮ್ ವರ್ಸಸ್ ರೆಗ್ಯುಲರ್ ಸ್ಕೀಮ್
ಮ್ಯುಚುವಲ್ ಫಂಡ್ನ ಯಾವುದೇ ಸ್ಕೀಮ್ ಹುಡುಕಿ ನೋಡಿದರೆ ನಿಮಗೆ ರೆಗ್ಯುಲರ್ ಪ್ಲಾನ್ ಮತ್ತು ಡೈರೆಕ್ಟ್ ಪ್ಲಾನ್ ಎನ್ನುವ ಎರಡು ಆಯ್ಕೆಗಳಿರುತ್ತವೆ. ಎರಡೂ ಕೂಡ ಒಂದೆಯೇ. ಆದರೆ, ರೆಗ್ಯುಲರ್ ಪ್ಲಾನ್ನಲ್ಲಿ ಹೆಚ್ಚಿನ ಶುಲ್ಕ ಇರುತ್ತದೆ. ಇದಕ್ಕೆ ಕಾರಣ, ಮಧ್ಯವರ್ತಿಗಳಿಗೆ ನೀಡಲಾಗುವ ಶುಲ್ಕ. ಡೈರೆಕ್ಟ್ ಪ್ಲಾನ್ನಲ್ಲಿ ನೀವೇ ನೇರವಾಗಿ ಹೂಡಿಕೆ ಮಾಡಿರುತ್ತೀರಿ. ರೆಗ್ಯುಲರ್ ಪ್ಲಾನ್ನಲ್ಲಿ ಹಣಕಾಸು ಸಲಹೆಗಾರರು ಅಥವಾ ಡಿಸ್ಟ್ರಿಬ್ಯೂಟರ್ಗಳ ಸಹಾಯದಿಂದ ಹೂಡಿಕೆ ಮಾಡಿರುತ್ತೀರಿ. ಇವರಿಗೆ ಕಮಿಷನ್ ಕೊಡಬೇಕಾಗುವುದರಿಂದ ರೆಗ್ಯುಲರ್ ಪ್ಲಾನ್ನಲ್ಲಿ ಹೆಚ್ಚಿನ ಎಕ್ಸ್ಪೆನ್ಸ್ ರೇಶಿಯೋ ಇರುತ್ತದೆ.
ಡೈರೆಕ್ಟ್ ಪ್ಲಾನ್ನಲ್ಲಿ ನಿಮ್ಮ ಫಂಡ್ ಶೇ 12 ಸಿಎಜಿಆರ್ ನೀಡಿದರೆ, ರೆಗ್ಯುಲರ್ ಪ್ಲಾನ್ ಶೇ. 11 ಸಿಎಜಿಆರ್ ನೀಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




