Patanjali: ಕೋರ್ಟ್ ತೀರ್ಪು ಪ್ರಶ್ನಿಸಿ ನ್ಯಾಯಮಂಡಳಿ ಮೊರೆ ಹೋಗಲಿರುವ ಪತಂಜಲಿ
Patanjali says its mild and ghee rigorously tested: 2020ರಲ್ಲಿ ಪತಂಜಲಿ ತುಪ್ಪದ ಸ್ಯಾಂಪಲ್ ಪರೀಕ್ಷೆಯೊಂದು ವಿಫಲವಾದ ಪ್ರಕರಣ ಸಂಬಂಧ ಕೋರ್ಟ್ವೊಂದು ಸಂಸ್ಥೆಗೆ ದಂಡ ಹಾಕಿದೆ. ಮಾನ್ಯತೆ ಇಲ್ಲದ ಮತ್ತು ಕಳಪೆ ಮಟ್ಟದ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ವಾದಿಸಿರುವ ಪತಂಜಲಿ, ಮರುಪರೀಕ್ಷೆಗೆ ಒತ್ತಾಯಿಸಿದೆ. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅದು ಆಹಾರ ಸುರಕ್ಷತೆ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

ನವದೆಹಲಿ, ಡಿಸೆಂಬರ್ 1: ಪತಂಜಲಿಯ ಹಸುವಿನ ತುಪ್ಪದ ಸ್ಯಾಂಪಲ್ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಹೇಳಿ 1 ಲಕ್ಷ ರೂ ದಂಡ ವಿಧಿಸಿರುವ ಸ್ಥಳೀಯ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆ ಕಂಪನಿಯು (Patanjali) ಆಹಾರ ಸುರಕ್ಷತೆ ನ್ಯಾಯಮಂಡಳಿಯ ಮೊರೆಹೋಗಲು ನಿರ್ಧರಿಸಿದೆ. ಉತ್ತರಾಖಂಡ್ ರಾಜ್ಯದ ಹರಿದ್ವಾರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ನವೆಂಬರ್ 27ರಂದು ಪತಂಜಲಿ ಆಯುರ್ವೇದ ಕಂಪನಿಯ ಮೇಲೆ 1 ಲಕ್ಷ ರೂ ದಂಡ ವಿಧಿಸಿದ್ದರು. ಹಸುವಿನ ತುಪ್ಪ ವಿತರಿಸಿದ ಬ್ರಹ್ಮ ಏಜೆನ್ಸಿಗೆ 25,000 ರೂ ಹಾಗೂ ಅದನ್ನು ಮಾರಾಟ ಮಾಡಿದ ಚಿಲ್ಲರೆ ವ್ಯಾಪಾರಿಯಾದ ಕರಣ್ ಜನರಲ್ ಸ್ಟೋರ್ಗೆ 15,000 ರೂ ಅನ್ನೂ ದಂಡ ಹಾಕಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ತೀರ್ಪು ನೀಡಿದ್ದರು.
ಐದು ವರ್ಷದ ಹಿಂದೆ ನಡೆದ ಸ್ಯಾಂಪಲ್ ಪರೀಕ್ಷೆಯಲ್ಲಿ ಗುಣಮಟ್ಟ ವಿಫಲವಾಗಿದ್ದುದು ಕಂಡು ಬಂದಿತ್ತು. ಆದರೆ, ತೀರ್ಪು ಈಗ ಬಂದಿದೆ. ಕೋರ್ಟ್ನ ಈ ತೀರ್ಪನ್ನು ಪತಂಜಲಿ ಸಂಸ್ಥೆ ಪ್ರಶ್ನಿಸುತ್ತಿದೆ. ತುಪ್ಪದ ಪರೀಕ್ಷೆ ಮಾಡಿದ ಲ್ಯಾಬೊರೇಟರಿಯು ಎನ್ಎಬಿಎಲ್ ಮಾನ್ಯತೆ ಹೊಂದಿರಲಿಲ್ಲ. ಪರೀಕ್ಷೆಗೆ ಬಳಸಲಾದ ಯಂತ್ರೋಪಕರಣವೂ ಹಾಳಾಗಿದೆ. ಇದನ್ನು ಆಧರಿಸಿ ಕೋರ್ಟ್ ನೀಡಿರುವ ತೀರ್ಪು ತಪ್ಪು ಎಂದು ಪತಂಜಲಿ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ದಂತ ಕಾಂತಿಯೋ, ಅಲೋವೆರಾ ಜೆಲ್ಲೋ, ಹಸುವಿನ ತುಪ್ಪವೋ… ಅತಿಹೆಚ್ಚು ಮಾರಾಟವಾಗುವ ಪತಂಜಲಿ ಉತ್ಪನ್ನಗಳಿವು
2020ರ ಅಕ್ಟೋಬರ್ 20ರಂದು ಆಹಾರ ಸುರಕ್ಷತೆ ಅಧಿಕಾರಿ ದಿಲೀಪ್ ಜೈನ್ ಅವರು ಕರಣ್ ಜನರಲ್ ಸ್ಟೋರ್ನಿಂದ ಒಂದು ತುಪ್ಪದ ಸ್ಯಾಂಪಲ್ ಪಡೆದು, ಅದನ್ನು ರುದ್ರಾಪುರ್ನ ಸರ್ಕಾರಿ ಲ್ಯಾಬ್ವೊಂದರಲ್ಲಿ ಪರೀಕ್ಷೆಗೆ ಒಳಪಡಿಸಿದರು. ಗುಣಮಟ್ಟದ ಪರೀಕ್ಷೆಯಲ್ಲಿ ತುಪ್ಪ ವಿಫಲವಾಗಿದೆ. ನಂತರ ಪತಂಜಲಿಗೆ 2021ರಲ್ಲಿ ನೋಟೀಸ್ ಕೊಡಲಾಯಿತು.
ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಎಂದು ಪತಂಜಲಿ ಹೇಳಿದ ಬಳಿಕ ಘಾಜಿಯಾಬಾದ್ನಲ್ಲಿರುವ ನ್ಯಾಷನಲ್ ಫುಡ್ ಲ್ಯಾಬ್ನಲ್ಲಿ ಮರುಪರೀಕ್ಷೆ ಮಾಡಲಾಯಿತು. ಅದರಲ್ಲೂ ವಿಫಲವಾಯಿತು. ಆದರೆ, ಪತಂಜಲಿ ಸಂಸ್ಥೆ ಹೇಳುವ ಪ್ರಕಾರ ಮರುಪರೀಕ್ಷೆ ವೇಳೆ ಗಡುವು ಮೀರಿದ ತುಪ್ಪದ ಸ್ಯಾಂಪಲ್ ಅನ್ನು ಪಡೆಯಲಾಗಿತ್ತು. ಹೀಗಾಗಿ, ಎರಡನೇ ಪರೀಕ್ಷೆಯೂ ಅಸಮರ್ಪಕ ಎಂಬುದು ಅದರ ವಾದ.
ಇದನ್ನೂ ಓದಿ: ಆರ್ಗ್ಯಾನಿಂಗ್ ಫಾರ್ಮ್ನಿಂದ ಸೋಲಾರ್ ಎನರ್ಜಿವರೆಗೆ ಪರಿಸರ ಉಳಿಸುವ ಜವಾಬ್ದಾರಿ ಹೊತ್ತ ಪತಂಜಲಿ
ಪತಂಜಲಿ ಸಂಸ್ಥೆಯು ತನ್ನ ಹಾಲು ಹಾಗು ತುಪ್ಪದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಮರ್ಪಕ ವ್ಯವಸ್ಥೆ ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ತನ್ನ ತುಪ್ಪದ ಸ್ಯಾಂಪಲ್ ಅನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು ಎಂಬುದು ಅದರ ಆಗ್ರಹವಾಗಿದೆ. ಪತಂಜಲಿ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಅವರೂ ಕೂಡ ವಿಡಿಯೋವೊಂದರಲ್ಲಿ ಈ ವಿಚಾರ ಪ್ರಸ್ತಾಪಿಸಿ, ದೇಶದಲ್ಲೆಡೆ ಇರುವ ಪತಂಜಲಿ ತುಪ್ಪದ ಯಾವುದೇ ಸ್ಯಾಂಪಲ್ ಅನ್ನು ತೆಗೆದು, ಗುಣಮಟ್ಟ ಪರೀಕ್ಷೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




