ಇ-ಸ್ಟ್ಯಾಂಪ್ ಹೋಯ್ತು, ಡಿಜಿಟಲ್ ಇ-ಸ್ಟ್ಯಾಂಪ್ ಬಂತು: ಅಗ್ರಿಮೆಂಟ್ಗೆ ಇದೇ ಕಡ್ಡಾಯ
ಇ-ಸ್ಟಾಂಪಿಂಗ್ ಎನ್ನುವುದು ವಿವಿಧ ವಹಿವಾಟುಗಳು ಮತ್ತು ಒಪ್ಪಂದಗಳ ಮೇಲೆ ನ್ಯಾಯಾಂಗವಲ್ಲದ ಪುರಾವೆಯಾಗಿದ್ದು, ಆಸ್ತಿ ಖರೀದಿ ಅಥವಾ ಮಾರಾಟದ ಪ್ರತಿಯೊಂದು ವಹಿವಾಟಿಗೆ, ವ್ಯವಹಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಹಾಗೂ ಒಪ್ಪಂದಕ್ಕಾಗಿ ಇ ಸ್ಟ್ಯಾಂಪ್ ಮುಖ್ಯವಾಗಿದೆ. ಆದರೆ, ಇದೀಗ ಇ-ಸ್ಟ್ಯಾಂಪ್ ಮರೆಯಾಗಲಿದ್ದು, ಡಿಜಿಟಲ್ ಇ ಸ್ಟ್ಯಾಂಪ್ ಬಂದಿದೆ. ಏನಿದು ಡಿಜಿಟಲ್ ಇ-ಸ್ಟ್ಯಾಂಪ್? ಏಕೆ ಇ-ಸ್ಟ್ಯಾಂಪ್ ಅನ್ನು ಏಕೆ ರದ್ದು ಮಾಡಲಾಗಿದೆ. ಎಲ್ಲಾ ವಿವರ ಈ ಕೆಳಗಿನಂತಿದೆ.

ಬೆಂಗಳೂರು, ಡಿಸೆಂಬರ್ 01): ಇ-ಸ್ಟ್ಯಾಂಪಿಂಗ್ (E-Stamp) ವ್ಯವಸ್ಥೆಗೆ ರಾಜ್ಯ ಸರ್ಕಾರ ಗುಡ್ ಬೈ ಹೇಳಿದ್ದು, ಇ-ಸ್ಟ್ಯಾಂಪ್ ಕಾಗದಗಳಿಗೆ ಡಿಜಿಟಲ್ ಸ್ಪರ್ಶ ಕೊಟ್ಟಿದೆ. ಕಳೆದ ಅಕ್ಟೋಬರ್‌ನಿಂದಲೇ ಕರ್ನಾಟಕದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ (Digital E-Stamping) ಜಾರಿಗೆ ಬಂದಿದೆ. ಇ-ಸ್ಟ್ಯಾಂಪ್ ಬದಲು ಇನ್ಮುಂದೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆಗೆ ಸೂಚಿಸಲಾಗಿದೆ. ಆದ್ರೆ, ಜನರಲ್ಲಿ ಅರಿವು ಮೂಡುವವರೆಗೆ ಹಳೆಯ ಇ-ಸ್ಟ್ಯಾಂಪ್ ಬಳಕೆಯಲ್ಲಿರುತ್ತೆ. ಈ ಬಗ್ಗೆ ಸ್ವತಃ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ಮಾಹಿತಿ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು (ಡಿಸೆಂಬರ್ 01) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇನ್ನು ಮುಂದೆ ಡಿಜಿಟಲ್ ಛಾಪಾ ಕಾಗದಗಳ ಬಳಕೆಗೇ ಹೆಚ್ಚು ಒತ್ತು ಕೊಡಲಾಗುತ್ತದೆ. ಹಂತಹಂತವಾಗಿ ಇ-ಸ್ಟ್ಯಾಂಪ್ ಗಳನ್ನು ನಿಲ್ಲಿಸಲಾಗುವುದು. ಡಿಜಿಟಲ್ ಇ ಛಾಪಾಕ್ಕೆ ಮತ್ತಷ್ಟು ಬಲ ತುಂಬಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2025 ಜಾರಿಯಾಗಿದೆ ಎಂದರು.
ಇದನ್ನೂ ಓದಿ: ಹಳ್ಳಿ ಹಳ್ಳಿಗೂ ಬಂತು ಇ-ಸ್ವತ್ತು; ಸುಲಭವಾಗಿ ಇ-ಖಾತಾ ಮಾಡಿಸುವುದು ಹೇಗೆ?
ಆಧಾರ್ ದೃಢೀಕರಣ ಕಡ್ಡಾಯ
ಇನ್ನು ಮಂದೆ ಇ-ಸ್ಟ್ಯಾಂಪ್ ಬದಲಿಗೆ ಡಿಜಿಟಲ್ ಇ-ಸ್ಟ್ಯಾಂಪ್ ವಿತರಿಸಲಾಗುತ್ತದೆ. ಸ್ಟಾಂಪಿಂಗ್ ದುರ್ಬಳಕೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಚಲನ್ ಕೊಟ್ಟು ಉಪ ನೋಂದಣಾಧಿಕಾರಿಗಳಿಂದ ಛಾಪಾ ಕಾಗದ ಪಡೆಯುವುದಕ್ಕೆ ಕಡಿವಾಣ ಹಾಕಲು, ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಮತ್ತು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದೆ. ಇದಕ್ಕೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಮನೆಯಲ್ಲಿ ಕೂತು ಡಿಜಿಟಲ್ ಇ ಸ್ಟ್ಯಾಂಪ್ ಖರೀದಿಸಬಹುದು
ನೋಂದಣಿಯಾಗದ ಅಗ್ರಿಮೆಂಟ್‌ಗಳಿಗೂ ಡಿಜಿಟಲ್ ಇ ಸ್ಟ್ಯಾಂಪ್ ಅನ್ವಯಿಸಲಿದೆ. ಛಾಪಾ ಕಾಗದ ತೆಗೆದುಕೊಳ್ಳಲು ಅವುಗಳನ್ನು ಮಾರಾಟ ಮಾಡುವ ಸ್ಥಳಗಳಿಗೆ ಜನ ಹೋಗಬೇಕಾಗಿತ್ತು. ಈಗ ಮನೆಯಲ್ಲಿ ಕೂತು ಛಾಪಾ ಕಾಗದ ಖರೀದಿ ಮಾಡಬಹುದು. ಮಧ್ಯವರ್ತಿಗಳ ಮೇಲೆ ಅವಲಂಬಿತವಾಗಬೇಕಿಲ್ಲ. ಇದು ಪೂರ್ತಿ ಆನ್‌ಲೈನ್ ನಲ್ಲಿ ಭದ್ರತೆಯಲ್ಲಿರುತ್ತೆ. ಈ ಮೊದಲು ಕಳೆದು ಹೋದರೆ ದಾಖಲೆ ಇರುತ್ತಿರಲಿಲ್ಲ. ಈಗ ಒಂದು ಬಾರಿ ಅಗ್ರಿಮೆಂಟ್ ಮಾಡಿಕೊಂಡ್ರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿ ಇರಲಿದೆ. ಬೇಕಾದಾಗ ಇದನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಎಲ್ಲಾ ಸ್ವರೂಪದ ಡಿಜಿಟಲ್ ಅಗ್ರಿಮೆಂಟ್ ಮಾಡಲು ಅವಕಾಶ ಇದೆ. ನಂಬರ್, ಕ್ಯೂರ್ ಕೋಡ್ ಇರುತ್ತದೆ. ಡಿಜಿಟಲ್ ಛಾಪಾಕಾಗದದ ಫೀಸ್ ಕೂಡ ಹೆಚ್ಚಾಗುವುದಿಲ್ಲ. ಆಧಾರ್ ಕೊಟ್ಟು ಒಟಿಪಿ ಬಂದ ನಂತರ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಯಾರ ನಡುವೆ ಅಗ್ರಿಮೆಂಟ್ ಆಗುತ್ತೆ ಅವರು ಆಧಾರ್ ಕೊಟ್ಟು ಒಟಿಪಿ ಬಂದ್ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತೆ ಎಂದು ಮಾಹಿತಿ ನೀಡಿದರು.
ಇ ಸ್ಟ್ಯಾಂಪ್ ಹೇಗೆ ದುರುಪಯೋಗವಾಗ್ತಿತ್ತು?
ಛಾಪಾ ಕಾಗದ ಹಿಂದೆ ದೊಡ್ಡ ಹಗರಣವಾಗಿತ್ತು. ಹೀಗಾಗಿ ಇ ಸ್ಟ್ಯಾಂಪ್ ಚಲಾವಣೆಗೆ ಬಂತು. ಇ ಸ್ಟ್ಯಾಂಪ್‌ನಲ್ಲೂ ದುರುಪಯೋಗ ಕಂಡುಬಂದಿದೆ. ಕಳೆದ ಎರಡು ವರ್ಷಗಳಿಂದ ಯಾವ ರೀತಿ ದುರುಪಯೋಗ ಆಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಕಲರ್ ಜೆರಾಕ್ಸ್ , ಕಲರ್ ಪ್ರಿಂಟ್ ಮೂಲಕ ದುರುಪಯೋಗ ಕಂಡುಬರ್ತಿದೆ. ಛಾಪಾ ಕಾಗದವನ್ನ ಸುಮಾರು 54 ವಿಷಯಗಳಲ್ಲಿ ಬಳಸಲಾಗ್ತಿದೆ. ಕೆಲ ಛಾಪಾ ಕಾಗದಕ್ಕೆ 100ರೂ., 500 ರೂ. ಹಾಗೆ ಸ್ವತ್ತಿನ ಮೌಲ್ಯ ಇರುತ್ತದೆ. ಇದರಲ್ಲಿ100 ರೂ. ಇ ಸ್ಟ್ಯಾಂಪ್ ತಗೊಂಡು 1 ಸಾವಿರ ರೂ. ಮೌಲ್ಯದ ಕೆಲಸಗಳಿಗೆ ಬಳಕೆ ಆಗುತ್ತಿದೆ. ಈ ರೀತಿಯ ದುರುಪಯೋಗಕ್ಕೆ ಕಡಿವಾಣ ಹಾಕಬೇಕಿದೆ.
ಇ ಸ್ಟ್ಯಾಂಪ್ ನಿಲ್ಲಿಸಲಾಗುವುದು ಜನರಿಗೆ ಅರಿವು ಮೂಡುವವರೆಗೆ ಇ ಸ್ಟ್ಯಾಂಪ್ ಇರಲಿದ್ದು, ನಾಗರಿಕರ ಆದ್ಯತೆಗೆ ಹೆಚ್ಚಿನ ಒತ್ತುನೀಡಬೇಕಿದೆ. ಹೀಗಾಗಿ ಡಿಜಿಟಲ್ ಇ ಸ್ಟ್ಯಾಂಪ್ ಜಾರಿ ಮಾಡಿದ್ದೇವೆ. ಸರ್ಕಾರಿ ಉದ್ಯೋಗ ಸೇರಿ ಅನೇಕ ವಿಚಾರಗಳಿಗೆ ಅಫಿಡೆವಿಟ್ ಕೇಳ್ತಾರೆ.. ಮನೆ ಬಾಡಿಗೆ ಅಗ್ರಿಮೆಂಟ್ ಗೂ ಬಳಕೆಯಾಗ್ತಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



