ಹಳ್ಳಿ ಹಳ್ಳಿಗೂ ಬಂತು ಇ-ಸ್ವತ್ತು; ಸುಲಭವಾಗಿ ಇ-ಖಾತಾ ಮಾಡಿಸುವುದು ಹೇಗೆ?
ಕರ್ನಾಟಕ ಸರ್ಕಾರವು ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಇ-ಸ್ವತ್ತು 2.0 ಅನ್ನು ಪರಿಚಯಿಸಿದೆ. ಇದು 97 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈ ಆನ್‌ಲೈನ್ ಪೋರ್ಟಲ್ ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿ, ವಂಚನೆಗಳನ್ನು ತಡೆಯುಯಲಿದ್ದು, ಫಾರ್ಮ್ 9 ಮತ್ತು 11B ನಂತಹ ಪ್ರಮುಖ ಇ-ಖಾತಾ ದಾಖಲೆಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ.

ಬೆಂಗಳೂರು, ಡಿಸೆಂಬರ್ 1: ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ (E-KHATA) ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಇ- ಸ್ವತ್ತು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಗ್ರಾಮ ಪಂಚಾಯಿತಿಗಳಲ್ಲಿ 97 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಪರಿವರ್ತನೆಗೆ ಇದು ಸಹಾಯ ಮಾಡುತ್ತದೆ. ಸರ್ಕಾರ ಪಂಚತಂತ್ರ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡಿ ಇ- ಸ್ವತ್ತು 2.0 ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಅಧಿಕೃತವಾಗಿ ಉದ್ಘಾಟಿಸಿದ್ದಾರೆ.
ಇ- ಸ್ವತ್ತು ಎಂದೇನು?
ಗ್ರಾಮೀಣ ಪ್ರದೇಶದ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ನಿರ್ವಹಿಸಲು ಕರ್ನಾಟಕ ಸರ್ಕಾರ ಇ- ಸ್ವತ್ತು ಎಂಬ ಆನ್‌ಲೈನ್ ಪೋರ್ಟಲ್ ಪ್ರಾರಂಭಿಸಿದ್ದು, ಇದರಿಂದಾಗಿ ಆಸ್ತಿ ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ಬರುವುದಲ್ಲದೆ ವಂಚನೆ, ಅನಧಿಕೃತ ನಿವೇಶನಗಳ ನೋಂದಣಿಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸಲಿದ್ದು, ಇದರಲ್ಲಿ ಫಾರ್ಮ್-9 ಮತ್ತು ಫಾರ್ಮ್-11 ಎಂಬ ಎರಡು ಪ್ರಮುಖ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತಾದ್ಯಂತ 6.5 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಮೇಲೆ ಇಲಾಖೆ ಗಮನಹರಿಸುತ್ತಿದೆ.
ಗ್ರಾಮ ಪಂಚಾಯತ್‌ನಲ್ಲಿ ಇ-ಖಾತಾ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿದುವುದು ಹೇಗೆ?
ಇ-ಖಾತಾ ಅರ್ಜಿ ಪ್ರಕ್ರಿಯೆಯನ್ನು ಗ್ರಾಮ ಪಂಚಾಯತ್ ಕಚೇರಿಯ ಮೂಲಕ ನಿರ್ವಹಿಸಲಾಗುತ್ತದೆ. ಅಲ್ಲಿನ ಸಿಬ್ಬಂದಿ ತಮ್ಮ ಅಧಿಕೃತ ಲಾಗಿನ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಇ- ಸ್ವತ್ತು ಪೋರ್ಟಲ್‌ನಲ್ಲಿ (https://eswathu.karnataka.gov.in/) ಪ್ರಕ್ರಿಯೆ ನಡೆಸುತ್ತಾರೆ.
- ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ: ಸೇಲ್ ಡೀಡ್ (Sale Deed), ಇತ್ತೀಚಿನ ಆಸ್ತಿ ತೆರಿಗೆ ರಶೀದಿಗಳು, ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (EC), ಭೂ ಸರ್ವೇ ದಾಖಲೆಗಳು, ಗುರುತು/ವಿಳಾಸ ಪುರಾವೆಗಳು (ಆಧಾರ್, ವೋಟರ್ ಐಡಿ, PAN), ಮತ್ತು ಭಾವಚಿತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ.
- ಅರ್ಜಿ ಸಲ್ಲಿಸಿ: ನಿಮ್ಮ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ. ಜಿಪಿ ಸಿಬ್ಬಂದಿ ಇ- ಸ್ವತ್ತು ಪೋರ್ಟಲ್‌ನಲ್ಲಿ ಆಸ್ತಿ ಮತ್ತು ಮಾಲೀಕರ ವಿವರಗಳನ್ನು ಭರ್ತಿ ಮಾಡಬೇಕು. ಅಲ್ಲಿನ ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಾರೆ.
- ಅರ್ಜಿ ಪರಿಶೀಲನೆ: ಅರ್ಜಿಯನ್ನು ಜಿಪಿ ಕಾರ್ಯದರ್ಶಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆಯು 45 ದಿನಗಳವರೆಗೂ ನಡೆಯುವ ಸಾಧ್ಯತೆಯಿದೆ.
- ಇ-ಖಾತಾ ಡೌನ್‌ಲೋಡ್: ಒಮ್ಮೆ ಅನುಮೋದನೆಯಾದ ನಂತರ, PDO ಡಿಜಿಟಲ್ ಸಹಿ ಮಾಡುತ್ತಾರೆ. ನಂತರ ಇ- ಸ್ವತ್ತು ಪೋರ್ಟಲ್‌ನಲ್ಲಿ ನಿಮ್ಮ ಆಸ್ತಿ ವಿವರಗಳನ್ನು ಹುಡುಕಿ, ಫಾರ್ಮ್ 9 ಅಥವಾ ಫಾರ್ಮ್11B ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇ-ಖಾತಾ (Form 9/11B) ಪಡೆಯಲು ಯಾರು ಅರ್ಹರು?
ಇ-ಖಾತಾ, ನಿರ್ದಿಷ್ಟವಾಗಿ ಫಾರ್ಮ್ 9 ಮತ್ತುಫಾರ್ಮ್ 11B ಅನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೃಷಿಯೇತರ ಆಸ್ತಿಗಳಿಗೆ ನೀಡಲಾಗುತ್ತದೆ. ಆಸ್ತಿ ಗ್ರಾಮೀಣ ಪ್ರದೇಶದೊಳಗಿದ್ದು, ತಹಶೀಲ್ದಾರರಿಂದ ದೃಢೀಕರಿಸಿದ ನಕ್ಷೆಯನ್ನು ಹೊಂದಿರಬೇಕು. ಆಸ್ತಿಯು ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯಿದೆಯಡಿಯಲ್ಲಿ ಅನುಮೋದಿಸಲಾದ ನಕ್ಷೆಗಳೊಂದಿಗೆ ಅಧಿಕೃತ ಲೇಔಟ್ ಹೊಂದಿರಬೇಕು. ಬಸವ ವಸತಿ, ಅಂಬೇಡ್ಕರ್, ಅಥವಾ ಇಂದಿರಾ ಆವಾಸ್ ಯೋಜನೆಗಳಂತಹ ಸರ್ಕಾರದ ವಸತಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾದ ಆಸ್ತಿಯಾಗಿರಬೇಕು. ಇವೆಲ್ಲಾ ಅರ್ಹತೆಗಳಿದ್ದರೆ ಇ-ಖಾತಾ ಪಡೆಯುವುದು ಸುಲಭ.
11B ಖಾತಾ (Form 11B) ಪಡೆಯುವುದು ಹೇಗೆ?
ಫಾರ್ಮ್ 11B ಕೃಷಿಯೇತರ ಬಳಕೆಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ನೀಡಲಾಗುವ ಒಂದು ದಾಖಲೆಯಾಗಿದೆ. ಈಗಾಗಲೇ ಇರುವ ಫಾರ್ಮ್11B ಅನ್ನು ಪಡೆಯಲು ನೀವು ಈ ಹಂತಗಳನ್ನು ಅನುಸರಿಸಬೇಕು.
- ಅಧಿಕೃತ ಇ-ಸ್ವತ್ತು ಪೋರ್ಟಲ್‌ಗೆ ಭೇಟಿ ನೀಡಿ
- ಮುಖಪುಟದಲ್ಲಿ ಕಾಣುವ “ನಿಮ್ಮ ಆಸ್ತಿಯ ಮಾಹಿತಿಯನ್ನು ಹುಡುಕಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಮೂನೆ ಪ್ರಕಾರವನ್ನು “Form 11B” ಎಂದು ಆಯ್ಕೆಮಾಡಿ
- ಡ್ರಾಪ್‌ಡೌನ್ ಮೆನುಗಳಿಂದ ನಿಮ್ಮ ಜಿಲ್ಲೆ, ಬ್ಲಾಕ್ (ತಾಲೂಕು), ಗ್ರಾಮ ಪಂಚಾಯತ್, ಮತ್ತು ಗ್ರಾಮವನ್ನು ಆಯ್ಕೆಮಾಡಿ
- ನಿಮ್ಮ ಆಸ್ತಿ ಐಡಿ ಅಥವಾ ಸರ್ವೇ ಸಂಖ್ಯೆಯನ್ನು ನಮೂದಿಸಿ ಮತ್ತು “ಹುಡುಕಿ” ಬಟನ್ ಮೇಲೆ ಕ್ಲಿಕ್ ಮಾಡಿ
ಆಸ್ತಿ ವಿವರಗಳು ಪರದೆಯ ಮೇಲೆ ಕಾಣಿಸಿದಾಗ ಡಾಕ್ಯುಮೆಂಟ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ Form 11B PDF ಡೌನ್‌ಲೋಡ್ ಮಾಡಬಹುದು. PDF ತೆರೆಯಲು ಪಾಸ್‌ವರ್ಡ್ ಸಾಮಾನ್ಯವಾಗಿ ನಿಮ್ಮ ಆಸ್ತಿ ಐಡಿಯೇ ಆಗಿರುತ್ತದೆ.
ಇ- ಸ್ವತ್ತು ಆನ್‌ಲೈನ್ ಸಹಾಯವಾಣಿ ಸಂಖ್ಯೆಗಳು
ಇ-ಸ್ವತ್ತು ಪೋರ್ಟಲ್ ಅಥವಾ ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದ ಸಹಾಯಕ್ಕಾಗಿ, ನೀವು ಈ ಅಧಿಕೃತ ಸಹಾಯವಾಣಿಗಳನ್ನು ಸಂಪರ್ಕಿಸಬಹುದು:
ಸಹಾಯವಾಣಿ ಸಂಖ್ಯೆಗಳು: 080-22032754, 080-22370281, 080-22032130.
ಇಮೇಲ್ ID: eswathuhelpdesk@gmail.com
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




