B ಖಾತೆಯಿಂದ A ಖಾತೆಗೆ ಕನ್ವರ್ಟ್ ಮಾಡಲು ಬೇಕೇ ಬೇಕು E ಖಾತೆ
ನವೆಂಬರ್ 1ರಿಂದ ಬಿ-ಖಾತಾ ಆಸ್ತಿ ದಾಖಲೆಗಳ ಎ-ಖಾತಾ ಪರಿವರ್ತನೆಗೆ ಇ- ಖಾತಾ ಹೊಂದಿರುವುದು ಅಗತ್ಯ ಎಂದು ಗ್ರೇಟರ್ ಬೆಂಗಳೂರು ಸುಮಾರು 7.5 ಲಕ್ಷ ಬಿ-ಖಾತಾ ಆಸ್ತಿಗಳಲ್ಲಿ 2.6 ಲಕ್ಷ ಮಾತ್ರ ಈಗಾಗಲೇ ಇ-ಖಾತಾಗೆ ಪರಿವರ್ತನೆಗೊಂಡಿದ್ದು, ಈ ಕ್ರಮವು ಪಾರದರ್ಶಕತೆ ಮತ್ತು ಆಸ್ತಿ ತೆರಿಗೆ ವಸೂಲಾತಿ ಸುಧಾರಣೆಗೆ ಸಹಾಯಕವಾಗಲಿದೆ.

ಬೆಂಗಳೂರು, ಅಕ್ಟೋಬರ್ 29: ನವೆಂಬರ್ 1 ರಿಂದ ಪ್ರಾರಂಭವಾಗುವ ಹೊಸ ಸರ್ಕಾರಿ ಯೋಜನೆಯಡಿಯಲ್ಲಿ ಬಿ-ಖಾತಾ ಹೊಂದಿರುವ ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಎ-ಖಾತಾ ಆಗಿ ಪರಿವರ್ತಿಸುವ ಮೊದಲು ಶೀಘ್ರದಲ್ಲೇ ಇ-ಖಾತಾ ಪಡೆಯಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೇಳಿದೆ. ಈ ಕ್ರಮವು ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸಲು ಈಗಾಗಲೇ ಇರುವ ಸುದೀರ್ಘ ಪ್ರಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸಲಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.
2.6 ಲಕ್ಷ ಆಸ್ತಿಗಳು ಮಾತ್ರ ಇ-ಖಾತಾಗೆ ಅಪ್‌ಗ್ರೇಡ್
ಮಾರ್ಗಸೂಚಿಗಳ ಪ್ರಕಾರ, 21,527 ಚದರ ಅಡಿವರೆಗಿನ ಬಿ-ಖಾತಾ ಪ್ಲಾಟ್‌ಗಳು ಮತ್ತು ಅದಕ್ಕೆ ಹೊಂದಿಕೊಂಡ ಸಾರ್ವಜನಿಕ ರಸ್ತೆಗಳು ಮಾತ್ರ ಪರಿವರ್ತನೆಗೆ ಅರ್ಹವಾಗಿವೆ. ಆಸ್ತಿ ಮಾಲೀಕರು ಭೂಮಿ ರೂಪಾಂತರ ಮತ್ತು ನಕ್ಷೆ ಅನುಮೋದನೆಗೆ ಶುಲ್ಕಗಳನ್ನು ಪಾವತಿಸುವುದರ ಜೊತೆಗೆ ಶೇಕಡಾ 5 ರಷ್ಟು ಪರಿವರ್ತನೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಸುಮಾರು 7.5 ಲಕ್ಷ ಬಿ-ಖಾತಾ ಆಸ್ತಿಗಳಿವೆ, ಆದರೆ ಇಲ್ಲಿಯವರೆಗೆ ಕೇವಲ 2.6 ಲಕ್ಷ ಮಾತ್ರ ಇ-ಖಾತಾಗೆ ಅಪ್‌ಗ್ರೇಡ್ ಆಗಿವೆ. ಪಶ್ಚಿಮ ವಲಯವು 72,000 ರೊಂದಿಗೆ ಅತಿ ಹೆಚ್ಚು ಪರಿವರ್ತನೆಗಳನ್ನು ಹೊಂದಿದ್ದರೆ, ಉತ್ತರ ವಲಯದಲ್ಲಿ 69,000 ಮತ್ತು ಪೂರ್ವ ವಲಯದಲ್ಲಿ 62,816 ಆಸ್ತಿ ದಾಖಲೆಗಳು ಪರಿವರ್ತಿಸಲ್ಪಟ್ಟಿವೆ.
ಬೆಂಗಳೂರಿನಲ್ಲಿ ಈಗಾಗಲೇ ಹಲವು ದಾಖಲೆಗಳು ಇ ಖಾತಾಗೆ ಕನ್ವರ್ಟ್
ಕಳೆದ ವರ್ಷ ಈ ಹೊತ್ತಿಗೆ ಇ-ಖಾತಾ ಷರತ್ತು ಘೋಷಿಸಲಾಗಿತ್ತು. ಆ ಸಮಯದಿಂದಲೇ ರಾಜರಾಜೇಶ್ವರಿನಗರ ಸೇರಿದಂತೆ ಬೆಂಗಳೂರಿನ ಹಲವು ನಿವಾಸಿಗಳು ದಾಖಲೆಗಳ ಪರಿವರ್ತನೆಯ ಕೆಲಸ ಪ್ರಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜರಾಜೇಶ್ವರಿನಗರವು ಒಟ್ಟಾರೆಯಾಗಿ 1.23 ಲಕ್ಷ ಬಿ-ಖಾತಾ ಆಸ್ತಿಗಳನ್ನು ಇ-ಖಾತಾಗೆ ಪರಿವರ್ತಿಸುವ ಮೂಲಕ ಮುಂಚೂಣಿಯಲ್ಲಿದ್ದು, ನಂತರ ಬೆಂಗಳೂರು ದಕ್ಷಿಣ ಮತ್ತು ಆನೇಕಲ್ನ 1.03 ಲಕ್ಷ, ಚಿಕ್ಕಪೇಟೆಯ 84,000, ಮತ್ತು ಶಿವಕುಮಾರ ನಗರದ 78,000 ಆಸ್ತಿಗಳನ್ನು ಪರಿವರ್ತಿಸಲಾಗಿದೆ.
ಇ ಖಾತಾದಿಂದ ತೆರಿಗೆ ಮೂಲ ವಿಸ್ತರಣೆ
ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ, ಜಿಬಿಎ ವಿಶೇಷ ಆಯುಕ್ತ (ಆದಾಯ) ಮುನೀಶ್ ಮೌದ್ಗಿಲ್ ಮಾತನಾಡಿ, ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಪೂರ್ವಾಪೇಕ್ಷಿತ ಅಗತ್ಯವಾಗಿದೆ. ಈ ಉಪಕ್ರಮವು ಅಪಾರ್ಟ್ಮೆಂಟ್ ಮಾಲೀಕರನ್ನು ಹೊರತುಪಡಿಸಿ, ವೈಯಕ್ತಿಕ ಸೈಟ್ ಮಾಲೀಕರಿಗೆ ಅಥವಾ ಸೈಟ್ ಮತ್ತು ಕಟ್ಟಡ ಆಸ್ತಿಗಳನ್ನು ಹೊಂದಿರುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಆಸ್ತಿ ತೆರಿಗೆ ಅನುಸರಣೆಯನ್ನು ಸುಧಾರಿಸುವುದು ಕೂಡ ಈ ಪರಿವರ್ತನೆ ಅಭಿಯಾನದ ಗುರಿಯಾಗಿದೆ ಎಂದು ಹಿರಿಯ GBA ಅಧಿಕಾರಿಯೊಬ್ಬರು ಹೇಳಿದ್ದು, ಹಲವು ಬಿ-ಖಾತಾ ಆಸ್ತಿಗಳ ಅಧಿಕೃತ ದಾಖಲೆಗಳಿಲ್ಲ, ಇದರಿಂದಾಗಿ ಆಸ್ತಿ ತೆರಿಗೆ ಆದಾಯ ನಷ್ಟವಾಗುತ್ತದೆ. ಅವುಗಳನ್ನು ಎ-ಖಾತಾ ಚೌಕಟ್ಟಿನ ಅಡಿಯಲ್ಲಿ ತರುವುದರಿಂದ ನಗರದ ತೆರಿಗೆ ಮೂಲವನ್ನು ವಿಸ್ತರಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:31 am, Wed, 29 October 25




