5 ಪಾಲಿಕೆಗಳಿಂದ ಜಿಬಿಎ ಆರ್ಥಿಕ ದಿವಾಳಿ! ಅಂಕಿಅಂಶ ಸಹಿತ ಕಾರಣ ಬಿಚ್ಚಿಟ್ಟ ಬಿಜೆಪಿ ಮುಖಂಡ, ಸಿಎಂಗೆ ಪತ್ರ
5 ಹೊಸ ಬೆಂಗಳೂರು ಮಹಾನಗರ ಪಾಲಿಕೆಗಳ ರಚನೆಯಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿದ ಸಿಬ್ಬಂದಿ ವೇತನ ಮತ್ತು ನಿರ್ವಹಣಾ ವೆಚ್ಚಗಳು ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತೆ ಮಾಡಿ, ಬೆಂಗಳೂರಿನ ಭವಿಷ್ಯಕ್ಕೆ ದೊಡ್ಡ ಸವಾಲಾಗಲಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು, ಡಿಸೆಂಬರ್ 1: ಐದು ಮಹಾನಗರ ಪಾಲಿಕೆಗಳ ರಚನೆಯಿಂದಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅಲ್ಲದೆ, ಯಾವ ರೀತಿಯಲ್ಲಿ ಜಿಬಿಎಗೆ ನಷ್ಟ ಆಗಲಿದೆ ಎಂಬ ಬಗ್ಗೆ ಅಂಕಿಅಂಶ ಸಮೇತ ಮಾಹಿತಿ ನೀಡಿ ವಿವರಿಸಿದ್ದಾರೆ.
ಜಿಬಿಎ ದಿವಾಳಿಯಾಗಲು ಹೇಗೆ ಸಾಧ್ಯ? ಕಾರಣ ಏನು?
ಪತ್ರದಲ್ಲಿ ಎನ್.ಆರ್. ರಮೇಶ್ ಅವರು ತಿಳಿಸಿರುವಂತೆ, ಐದು ಪಾಲಿಕೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗಬೇಕಿದೆ. 5 ಪಾಲಿಕೆಗಳಿಗೆ ಕನಿಷ್ಠ 6326 ಅಧಿಕಾರಿ ಹಾಗೂ ಸಿಬ್ಬಂದಿ ಬೇಕಾಗುತ್ತಿದೆ. ಬಿಬಿಎಂಪಿಯಲ್ಲಿ ಇದ್ದ ಅಧಿಕಾರಿ ಮತ್ತು ಸಿಬ್ಬಂದಿ ಸಂಖ್ಯೆ 2818. ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ. ವೆಚ್ಚ ಆಗುತ್ತಿತ್ತು. ಆದರೆ ಈಗ 6326 ಅಧಿಕಾರಿ ಹಾಗೂ ಸಿಬ್ಬಂದಿಯ ವೇತನ, ಇಎಸ್ಐ, ಪಿಎಫ್ ಸೇರಿದಂತೆ ಕನಿಷ್ಠ 250 ಕೋಟಿ ರೂ. ಖರ್ಚು ಆಗುತ್ತದೆ. ಪ್ರತಿ ಮಪಾಲಿಕೆಗೂ 17 ಇಲಾಖೆಗಳು ಇರಲಿವೆ. ಈ ಎಲ್ಲಾ ಇಲಾಖೆಗಳಿಗೂ ಎಲ್ಲಾ ಪಾಲಿಕೆಗಳು ಸಿಬ್ಬಂದಿ ನೇಮಿಸಬೇಕು. ಇದರಿಂದ ಆರ್ಥಿಕ ನಷ್ಟ ಎದುರಾಗಿ, ದಿವಾಳಿಯಾಗಬೇಕಾಗುತ್ತದೆ.
ಇಂತಹ ಭಾರೀ ವೆಚ್ಚಗಳಿಂದ ಪಾಲಿಕೆಗಳ ಆದಾಯ ಕಡಿಮೆಯಾಗುತ್ತದೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ದಿವಾಳಿಯಾಗಬಹುದು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಎನ್.ಆರ್. ರಮೇಶ್ ಎಚ್ಚರಿಸಿದ್ದಾರೆ.
ಭಾರೀ ವೆಚ್ಚದ ಪರಿಣಾಮವಾಗಿ ಪಾಲಿಕೆಗಳು ಯಾವುದೇ ಅಭಿವೃದ್ಧಿ ಯೋಜನೆಗಳನ್ನೂ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟು ತುರ್ತು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಎನ್ಆರ್ ರಮೇಶ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಹಾನಗರ ಪಾಲಿಕೆಗಳಲ್ಲಿ ಇನ್ನು ಇರಲ್ಲ ಆರೋಗ್ಯಾಧಿಕಾರಿ ಹುದ್ದೆ: ಕಾರಣ ಇಲ್ಲಿದೆ
ಪೂರ್ವಾಪರ ಯೋಚಿಸದೆಯೇ, ನಿಮ್ಮ ಸರ್ಕಾರದ ಸ್ವಾರ್ಥಕ್ಕಾಗಿ ಮತ್ತು ನಿಮ್ಮ ಪಕ್ಷದ ಸ್ವಹಿತಾಸಕ್ತಿಗಾಗಿ ಅಖಂಡ ಬೆಂಗಳೂರು ಮಹಾನಗರವನ್ನು 05 ತುಂಡು ತುಂಡುಗಳಾಗಿ ವಿಭಜಿಸಿರುವುದರಿಂದಾಗಿ ಹಾಗೂ ಈ ಹಿಂದಿನ 198 ವಾರ್ಡುಗಳನ್ನು ಪುರಸಭೆ ಅಥವಾ ಪಟ್ಟಣ ಪಂಚಾಯಿತಿಗಳಿಗಿಂತಲೂ ಸಣ್ಣ ಪ್ರಮಾಣದ 369 ವಾರ್ಡುಗಳನ್ನಾಗಿ ವಿಂಗಡಿಸಿರುವುದರಿಂದಾಗಿ ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು ಮಹಾನಗರದ 05 ಪಾಲಿಕೆಗಳು ಎಲ್ಲಾ ರೀತಿಯಿಂದಲೂ ದಿವಾಳಿಯ ಅಂಚಿನತ್ತ ಸಾಗುತ್ತಿದೆ. ಇದರಿಂದ ವಿಶ್ವದ ಮುಂದೆ ನಗೆಪಾಟಲಿಗೀಡಾಗುವ ಪರಿಸ್ಥಿತಿಗೆ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿರುವ ಬೆಂಗಳೂರು ಮಹಾನಗರವನ್ನು ದೂಡಿರುವ ತಮ್ಮ ಸರ್ಕಾರವನ್ನು, ಪಕ್ಷವನ್ನು ಕನ್ನಡಿಗರು ಎಂದೆಂದಿಗೂ ಕ್ಷಮಿಸಲಾರರು ಎಂಬ ಮಹಾಸತ್ಯವನ್ನು ತಮಗೆ ತಿಳಿಸಲಿಚ್ಛಿಸುತ್ತೇನೆ ಎಂದು ಪತ್ರದಲ್ಲಿ ಎನ್ಆರ್ ರಮೇಶ್ ಉಲ್ಲೇಖಿಸಿದ್ದಾರೆ.



