ನಿಮಗೆ ಪ್ರವಾಸ ಎಂದರೆ ಇಷ್ಟವಾ? ಹಾಗೆಯೇ ಚಿನ್ನ (Gold) ಖರೀದಿಸಬೇಕೆಂಬ ಆಸೆಯಾ? ಈ ಎರಡಕ್ಕೂ ಉತ್ತರ ಹೌದಾದರೆ ಕೂಡಲೇ ಭೂತಾನ್ಗೆ ಹೋಗಲು ಅಣಿಯಾಗಿ. ವಿಶ್ವದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಸಿಗುವ ದೇಶಗಳಲ್ಲಿ ಭೂತಾನ್ ಒಂದು. ನೀವು ಇಲ್ಲಿ ಯಾವುದೇ ಸುಂಕ, ತೆರಿಗೆ ಇಲ್ಲದೇ ಚಿನ್ನವನ್ನು ಖರೀದಿಸಬಹುದು. ಭೂತಾನ್ನ ಕೆಲ ನಿರ್ದಿಷ್ಟ ನಗರಗಳಲ್ಲಿ ಪ್ರವಾಸಿಗರಿಗೆಂದು ಡ್ಯೂಟಿ ಫ್ರೀ ಚಿನ್ನವನ್ನು (Tax Free Gold) ಮಾರಲಾಗುತ್ತದೆ. ಹಲವು ಭಾರತೀಯರು ದುಬೈ ಪ್ರವಾಸಕ್ಕೆ ಹೋಗಿ, ಅಲ್ಲಿಂದ ಬರುವಾಗ ಚಿನ್ನ ತರುವುದು ಇದೆ. ಅದೇ ಅವಕಾಶ ಈ ಭೂತಾನ್ ವಿಚಾರದಲ್ಲೂ ಇದೆ. ಭೂತಾನ್ನಲ್ಲಿ ನೋಡಬಹುದಾದ ಹಲವು ಆಕರ್ಷಣೀಯ ಪ್ರವಾಸೀ ತಾಣಗಳೂ ಇವೆ.
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್ಗೆ 60,000 ರೂಗಿಂತ ಹೆಚ್ಚಿದೆ. ಭೂತಾನ್ನಲ್ಲಿ ಇದರ ಬೆಲೆ 43,000 ಬಿಟಿಎನ್ (ಭೂತಾನ್ ಕರೆನ್ಸಿ) ಆಸುಪಾಸಿನಲ್ಲಿದೆ. ಭೂತಾನ್ನ ನುಗುಲ್ಟ್ರುಮ್ ಕರೆನ್ಸಿ ಮತ್ತು ರುಪಾಯಿ ಹೆಚ್ಚೂಕಡಿಮೆ ಸಮಾನ ಬೆಲೆ ಹೊಂದಿವೆ. ಹೀಗಾಗಿ, ಭೂತಾನ್ನಲ್ಲಿ 24 ಕ್ಯಾರೆಟ್ನ 10 ಗ್ರಾಮ್ ಚಿನ್ನವನ್ನು 43,000 ರುಪಾಯಿಗೆ ಖರೀದಿಸಬಹುದು.
ಭೂತಾನ್ನ ಮಹಾರಾಜರ ಜನ್ಮದಿನ ಮತ್ತು ಭೂತಾನೀ ಹೊಸ ವರ್ಷದ ಪ್ರಯುಕ್ತ ಫೆಬ್ರುವರಿ 21ರಂದು ಅಲ್ಲಿನ ಸರ್ಕಾರ ಚಿನ್ನದ ಮೇಲಿದ್ದ ತೆರಿಗೆಯನ್ನು ತೆಗೆದಿದೆ.
ಭೂತಾನ್ನಲ್ಲಿ ಪ್ರವಾಸಿಗರಿಗೆ ಎಲ್ಲೆಂದರಲ್ಲಿ ಚಿನ್ನ ಖರೀದಿಸಲು ಆಗುವುದಿಲ್ಲ. ಭೂತಾನ್ನಲ್ಲಿ ನೀವಿರುವಷ್ಟೂ ಅವಧಿಯಲ್ಲಿ ದಿನಕ್ಕೆ ಎಸ್ಡಿಎಫ್ ಶುಲ್ಕ ಪಾವತಿಸಬೇಕು. ಎಸ್ಡಿಎಫ್ ಎಂಬುದು ಸಸ್ಟೈನಬಲ್ ಡೆವಲಪ್ಮೆಂಟ್ ಫೀಸ್ ಅಥವಾ ಸುಸ್ಥಿರ ಅಭಿವೃದ್ಧಿ ಶುಲ್ಕವಾಗಿದೆ. ಭಾರತೀಯರಾದರೆ ಒಬ್ಬ ವ್ಯಕ್ತಿಗೆ ದಿನಕ್ಕೆ 1,200 ರೂನಿಂದ 1,800 ರೂ ಪಾವತಿಸಬೇಕು. ಬೇರೆ ದೇಶಗಳವರಾದರೆ ಒಬ್ಬ ವ್ಯಕ್ತಿ ದಿನಕ್ಕೆ ಪಾವತಿಸಬೇಕಾದ ಎಸ್ಡಿಎಫ್ 65ರಿಂದ 200 ಡಾಲರ್ ಆಗಿದೆ. ಅಂದರೆ 5,350 ರೂನಿಂದ 16,500 ರೂನವರೆಗೆ ಶುಲ್ಕ ಪಾವತಿಸಬೇಕು.
ಅಷ್ಟೇ ಅಲ್ಲ, ಭೂತಾನ್ ಸರ್ಕಾರ ನಿರ್ದಿಷ್ಟಪಡಿಸಿದ ಟೂರಿಸ್ಟ್ ಹೋಟೆಲ್ನಲ್ಲಿ ಕನಿಷ್ಠ 1 ರಾತ್ರಿಯಾದರೂ ಉಳಿಯಬೇಕು. ಇನ್ನು, ಚಿನ್ನ ಬೇಕೆನ್ನುವವರು ಭೂತಾನ್ನ ಥಿಂಫು ಮತ್ತು ಫ್ಯೂಂಟ್ಶೋಲಿಂಗ್ ಪಟ್ಟಣಗಳಿಗೆ ಹೋಗಬೇಕು. ಅಲ್ಲಿ ಹಣಕಾಸು ಸಚಿವಾಲಯದ ವತಿಯಿಂದ ನಡೆಸಲಾಗುವ ಕೆಲ ಮಳಿಗೆಗಳಲ್ಲಿ ಡ್ಯೂಟಿ ಫ್ರೀ ಚಿನ್ನವನ್ನು ಮಾರಲಾಗುತ್ತದೆ. ಅಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿಸಬಹುದು. ಈ ಚಿನ್ನಕ್ಕೆ ಹಣದ ಪಾವತಿಯನ್ನು ರುಪಾಯಿಯಲ್ಲಾಗಲೀ ಅಥವಾ ಭೂತಾನೀ ಕರೆನ್ಸಿಯಲ್ಲಾಗಲೀ ಮಾಡದೇ ಡಾಲರ್ನಲ್ಲೇ ಆಗಬೇಕು. ಯಾಕೆಂದರೆ, ಇದೇ ಡಾಲರ್ ಬಳಸಿ ಭೂತಾನ್ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸುತ್ತದೆ.
ಇದನ್ನೂ ಓದಿ: TTD Assets, Gold: ತಿರುಪತಿ ತಿಮ್ಮಪ್ಪನ ಬಳಿಯಿದೆ 11 ಟನ್ ಚಿನ್ನ, 17 ಸಾವಿರ ಕೋಟಿ ರೂ ನಗದು
ಭೂತಾನ್ನಲ್ಲಿರುವ ಕಾನೂನಿನ ಪ್ರಕಾರ, ಭಾರತದ ಪುರುಷನೊಬ್ಬ 50,000 ರೂ, ಹಾಗು ಭಾರತೀಯ ಮಹಿಳೆ 1 ಲಕ್ಷ ರೂವರೆಗೂ ಚಿನ್ನವನ್ನು ಖರೀದಿಸಬಹುದು.
ಗಂಡ ಮತ್ತು ಹೆಂಡತಿ ಭೂತಾನ್ ಪ್ರವಾಸಕ್ಕೆ ಹೋದರೆ 1.5 ಲಕ್ಷ ರೂವರೆಗೂ ಚಿನ್ನ ಪಡೆಯಬಹುದು. ಈಗಿನ ಬೆಲೆಯಲ್ಲಿ ಇದಕ್ಕೆ 35 ಗ್ರಾಮ್ನಷ್ಟು ಅಪರಂಜಿ ಚಿನ್ನ ಸಿಗುತ್ತದೆ. ಭಾರತದಲ್ಲಿ ಈಗಿನ ದರದಲ್ಲಿ 35 ಗ್ರಾಮ್ ಚಿನ್ನ ಖರೀದಿಸಲು 2,00,000 ರೂಗಿಂತ ಹೆಚ್ಚು ವೆಚ್ಚ ಆಗುತ್ತದೆ. ಅಂದರೆ ಚಿನ್ನದ ಖರೀದಿಯಿಂದ 50,000 ರೂ ಉಳಿಸಬಹುದು. ಇದರಿಂದ ನಿಮಗೆ ಭೂತಾನ್ ಪ್ರವಾಸದ ವೆಚ್ಚ ಹೆಚ್ಚು ಹೊರೆ ಆಗದು.
ಭೂತಾನ್ ದೇಶ ಭಾರತದ ಈಶಾನ್ಯ ಭಾಗದ ಮೇಲ್ಭಾಗದ ಗಡಿಯಲ್ಲಿದೆ. ಇದು ಚೀನಾ ಮತ್ತು ಭಾರತ ಗಡಿಗಳಿಗೆ ಹೊಂದಿಕೊಂಡಂತಿದೆ. ಸಮೀಪದಲ್ಲಿ ನೇಪಾಳ ಮತ್ತು ಬಾಂಗ್ಲಾದೇಶ ಇವೆ. ಅರುಣಾಚಲಪ್ರದೇಶದ ಜೊತೆ ಭೂತಾನ್ ಗಡಿ ಹಂಚಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ