ನವದೆಹಲಿ, ಫೆಬ್ರುವರಿ 22: ವಿವಾದ ಮತ್ತು ಬಿಕ್ಕಟ್ಟುಗಳಿಗೆ ಸಿಲುಕಿರುವ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರನ್ನು ದೇಶ ಬಿಟ್ಟುಹೋಗದಂತೆ ತಡೆಯಲು ಜಾರಿ ನಿರ್ದೇಶನಾಲಯ ಯತ್ನಿಸುತ್ತಿದೆ. ಬೈಜು ಅವರಿಗೆ ಲುಕೌಟ್ ಸರ್ಕುಲಾರ್ (LoC) ನೀಡುವಂತೆ ಇಮೈಗ್ರೇಶನ್ ಬ್ಯೂರೋಗೆ (BoI) ಇಡಿ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಫೆಬ್ರುವರಿ ಮೊದಲ ವಾರದಲ್ಲೇ ಜಾರಿ ನಿರ್ದೇಶನಾಲಯವು ವಲಸೆ ಪ್ರಾಧಿಕಾರವನ್ನು ಸಂಪರ್ಕಿಸಿ ಬೈಜುಗೆ ಲುಕ್ ಔಟ್ ನೋಟೀಸ್ ಕೊಡುವಂತೆ ಕೋರಿಕೊಂಡಿತ್ತು ಎನ್ನಲಾಗಿದೆ. ಬೆಂಗಳೂರಿನ ಇಡಿ ಕಚೇರಿಯಿಂದ ಈ ಮನವಿ ಹೋಗಿರುವುದು ತಿಳಿದುಬಂದಿದೆ.
ಆದರೆ, ಬೈಜು ರವೀಂದ್ರನ್ ಅವರಿಗೆ ಈ ಹಿಂದೆ ಲುಕೌಟ್ ನೋಟೀಸ್ ನೀಡಲಾಗಿತ್ತು. ಆದರೆ, ಅದು ಆನ್ ಇಂಟಿಮೇಶನ್ ನೋಟೀಸ್ ಮಾತ್ರವೇ ಆಗಿತ್ತು. ಕೇರಳದ ಕೊಚ್ಚಿ ವಿಭಾಗದ ಇಡಿ ಕಚೇರಿಯಿಂದ ಆ ನೋಟೀಸ್ಗೆ ಮನವಿ ಹೋಗಿತ್ತು. ಆದರೆ, ತನಿಖೆಯ ಹೊಣೆಯನ್ನು ಜಾರಿ ನಿರ್ದೇಶನಾಲಯದ ಬೆಂಗಳೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಹೀಗಾಗಿ, ಬೆಂಗಳೂರಿನ ಇಡಿ ಕಚೇರಿ ಹೊಸದಾಗಿ ಲುಕ್ ಔಟ್ ನೋಟೀಸ್ ಹೊರಡಿಸಬೇಕೆಂದು ವಲಸೆ ದಳಕ್ಕೆ ಮನವಿ ಮಾಡಿದೆ.
ಒಬ್ಬ ವ್ಯಕ್ತಿ ಹೊರ ದೇಶಕ್ಕೆ ಹೋಗದಂತೆ ತಡೆಯಲು ಈ ನೋಟೀಸ್ ನೀಡಲಾಗುತ್ತದೆ. ಹೊರದೇಶಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲೂ ಅಧಿಕಾರಿಗಳಿಗೆ ಆ ವ್ಯಕ್ತಿಯ ಮಾಹಿತಿ ಕೊಟ್ಟಿರಲಾಗುತ್ತದೆ. ವಿಮಾನ ನಿಲ್ದಾಣ, ರಸ್ತೆ ಮಾರ್ಗ, ಬಂದರು ಹೀಗೆ ಬೇರೆ ಬೇರೆ ಕಡೆಗಳಲ್ಲಿ ಅಧಿಕಾರಿಗಳು ಈ ವ್ಯಕ್ತಿ ಹೊರಹೋಗದಂತೆ ತಡೆಯುತ್ತಾರೆ. ಅಲ್ಲಿಗೆ ಈ ವ್ಯಕ್ತಿ ಬಂದರೆ, ಸಂಬಂಧಿತ ತನಿಖಾ ಸಂಸ್ಥೆಗೆ ಅಲರ್ಟ್ ಹೊರಡಿಸುತ್ತಾರೆ. ಅಗತ್ಯ ಬಿದ್ದರೆ ಆ ವ್ಯಕ್ತಿಯನ್ನು ಬಂಧಿಸಿ ತನಿಖಾ ಸಂಸ್ಥೆಯ ವಶಕ್ಕೆ ಒಪ್ಪಿಸಲಾಗುತ್ತದೆ.
ಇದನ್ನೂ ಓದಿ: ಅಮೆರಿಕದ ‘ದರ್ಪ’ ಶಕ್ತಿ; ಬೇಡದ ಸರ್ಕಾರಗಳ ಉರುಳಿಸಲು ಹೊಸ ಮೀಡಿಯಾ ಅಸ್ತ್ರಗಳು; ಮಾಜಿ ಅಧಿಕಾರಿ ಸ್ಫೋಟಕ ಮಾಹಿತಿ
ಒಬ್ಬ ವ್ಯಕ್ತಿ ವಿರುದ್ಧ ಆನ್ ಇಂಟಿಮೇಶನ್ ಲುಕೌಟ್ ಸರ್ಕುಲಾರ್ ಹೊರಡಿಸಲಾಗಿದ್ದರೆ, ಆ ವ್ಯಕ್ತಿಯನ್ನು ವಿದೇಶಕ್ಕೆ ಹೋಗದಂತೆ ತಡೆಯಲಾಗುವುದಿಲ್ಲ. ಆದರೆ, ಅವರು ಹೊರಹೋಗಿರುವ ಅಥವಾ ಒಳಗೆ ಬಂದಿರುವ ಮಾಹಿತಿಯನ್ನು ಸಂಬಂಧಿತ ತನಿಖಾ ಸಂಸ್ಥೆಗೆ ಅಲರ್ಟ್ ಆಗಿ ನೀಡಲಾಗುತ್ತದೆ.
ಬೈಜುಸ್ನ ಮಾತೃ ಸಂಸ್ಥೆಯಾದ ಥಿಂಕ್ ಅಂಡ್ ಲರ್ನ್ ಪ್ರೈ ಲಿ ಕಂಪನಿಯ ಕೆಲ ಹೂಡಿಕೆದಾರರು ಕರೆ ನೀಡಿರುವ ಷೇರುದಾರರ ತುರ್ತು ಸಭೆಗೆ ತಡೆ ನೀಡುವಂತೆ ಬೈಜು ರವೀಂದ್ರನ್ ಮತ್ತವರ ಕುಟುಂಬದವರು ಮಾಡಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಆದರೆ, ಬೀಸೋ ದೊಣ್ಣೆಯಿಂದ ತಾತ್ಕಾಲಿಕವಾಗಿ ಪಾರಾಗುವ ಒಂದು ಆದೇಶ ಕೂಡ ಕೋರ್ಟ್ ನೀಡಿದೆ.
ಇದನ್ನೂ ಓದಿ: ನಲವತ್ತಕ್ಕೂ ಹೆಚ್ಚು ಕಂಪನಿಗಳ ಒಡೆಯರಾಗಿದ್ದಾರೆ ಫ್ಲಿಪ್ಕಾರ್ಟ್ನ ಮಾಜಿ ಉದ್ಯೋಗಿಗಳು
ಅದೇನೆಂದರೆ, ಎಮರ್ಜೆನ್ಸಿ ಸಭೆಯಲ್ಲಿ ತೆಗೆದುಕೊಳ್ಳಲಾಗುವ ಯಾವುದೇ ನಿರ್ಣಯವನ್ನು ಮುಂದಿನ ಕೋರ್ಟ್ ವಿಚಾರಣೆಗಿಂತ ಮುಂಚೆ ಜಾರಿಗೆ ತರುವಂತಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಮುಂದಿನ ಕೆಲ ದಿನಗಳಲ್ಲಿ ನಡೆಯುವ ಥಿಂಕ್ ಅಂಡ್ ಲರ್ನ್ನ ಎಕ್ಸ್ಟ್ರಾರ್ಡಿನರಿ ಜನರಲ್ ಮೀಟಿಂಗ್ನಲ್ಲಿ ಆಡಳಿತ ಮಂಡಳಿಯನ್ನು ಉಚ್ಛಾಟಿಸುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಈ ನಿರ್ಣಯದ ಮೇಲೆ ಷೇರುದಾರರು ವೋಟಿಂಗ್ ನಡೆಸಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ