ಬೈಜುಸ್ ಸಿಎಫ್​ಒ ಅಜಯ್ ಗೋಯಲ್ ರಾಜೀನಾಮೆ; ನಿತಿನ್ ಗೋಲಾನಿಗೆ ಜವಾಬ್ದಾರಿ

|

Updated on: Oct 24, 2023 | 6:38 PM

BYJU'S CFO Ajay Goel Quits: ಆರು ತಿಂಗಳ ಹಿಂದೆ ವೇದಾಂತದಿಂದ ಬೈಜುಸ್​ಗೆ ಸಿಎಫ್​ಒ ಆಗಿ ಸೇರ್ಪಡೆಯಾಗಿದ್ದ ಅಜಯ್ ಗೋಯಲ್ ಅವರು ಕೆಲಸ ತೊರೆದಿದ್ದಾರೆ. ಅವರು ವೇದಾಂತ ಸಂಸ್ಥೆಗೆ ಮರಳಿ ಹೋಗಲಿದ್ದಾರೆ. ಗೋಯಲ್ ಅವರು ಏಪ್ರಿಲ್ ತಿಂಗಳಲ್ಲಿ ಸಿಎಫ್​ಒ ಆಗಿ ಬೈಜುಸ್​ಗೆ ಬಂದಿದ್ದರು. ಬೈಜುಸ್​ನ ಫೈನಾನ್ಸ್ ವಿಭಾಗದ ಪ್ರೆಸಿಡೆಂಟ್ ಆಗಿರುವ ನಿತಿನ್ ಗೋಲಾನಿ ಅವರು ಇಂಡಿಯಾ ಸಿಎಫ್​ಒ ಆಗಿ ಜವಾಬ್ದಾರಿ ಪಡೆಯಲಿದ್ದಾರೆ.

ಬೈಜುಸ್ ಸಿಎಫ್​ಒ ಅಜಯ್ ಗೋಯಲ್ ರಾಜೀನಾಮೆ; ನಿತಿನ್ ಗೋಲಾನಿಗೆ ಜವಾಬ್ದಾರಿ
ಅಜಯ್ ಗೋಯಲ್ (ಮಧ್ಯದಲ್ಲಿರುವವರು)
Follow us on

ಬೆಂಗಳೂರು, ಅಕ್ಟೋಬರ್ 24: ಹಲವು ವಿವಾದ ಮತ್ತು ಬಿಕ್ಕಟ್ಟುಗಳಿಗೆ ಒಳಗಾಗಿರುವ ಬೈಜುಸ್ (Byju’s) ಸಂಸ್ಥೆಯಿಂದ ಹೊರಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಆರು ತಿಂಗಳ ಹಿಂದೆ ವೇದಾಂತದಿಂದ ಬೈಜುಸ್​ಗೆ ಸಿಎಫ್​ಒ ಆಗಿ ಸೇರ್ಪಡೆಯಾಗಿದ್ದ ಅಜಯ್ ಗೋಯಲ್ (Ajay Goel) ಅವರು ಕೆಲಸ ತೊರೆದಿದ್ದಾರೆ. ಅವರು ವೇದಾಂತ ಸಂಸ್ಥೆಗೆ ಮರಳಿ ಹೋಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 2021-22ರ ಹಣಕಾಸು ವರ್ಷಕ್ಕೆ ಬೈಜುಸ್​ನ ಹಣಕಾಸು ವರದಿಯನ್ನು (financial results) ಅಜಯ್ ಗೋಯಲ್ ನೇತೃತ್ವದಲ್ಲೇ ಸಿದ್ಧಪಡಿಸಲಾಗಿದೆ. ಆ ವರದಿ ಬಿಡುಗಡೆ ಬಳಿಕ ಅಜಯ್ ಗೋಯಲ್ ನಿರ್ಗಮಿಸಲಿದ್ದಾರೆ. ಕಳೆದ ಮೂರು ತಿಂಗಳಿಂದಲೂ ಅವರು ಬೈಜುಸ್​ನ ಆಡಿಟಿಂಗ್ ಪ್ರಕ್ರಿಯೆ ಸಾಗಲು ವ್ಯವಸ್ಥೆ ಮಾಡಿದ್ದಾರೆ.

‘ಮೂರು ತಿಂಗಳಲ್ಲಿ ಆಡಿಟ್ ನಡೆಸಲು ಬೈಜುಸ್​ನ ಸಂಸ್ಥಾಪಕರು ಮತ್ತು ಸಹೋದ್ಯೋಗಿಗಳು ನನಗೆ ಸಹಕಾರ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನ ಹೇಳುತ್ತೇನೆ. ಹಾಗೆಯೇ, ಬೈಜುಸ್​ನಲ್ಲಿ ನನ್ನ ಕಿರು ಅವಧಿಯಲ್ಲಿ ಸಿಕ್ಕ ಬೆಂಬಲವನ್ನೂ ನಾನು ಮೆಚ್ಚುತ್ತೇನೆ’ ಎಂದು ಅವರು ಹೇಳಿದ್ದಾರೆ.

ಗೋಯಲ್ ಅವರು ಏಪ್ರಿಲ್ ತಿಂಗಳಲ್ಲಿ ಸಿಎಫ್​ಒ ಆಗಿ ಬೈಜುಸ್​ಗೆ ಬಂದಿದ್ದರು. ಅದಕ್ಕೂ ಮುಂಚೆ ಪಿವಿ ರಾವ್ ಅವರು ಬೈಜುಸ್​ನ ಸಿಎಫ್​ಒ ಆಗಿದ್ದರು. 2021ರ ಡಿಸೆಂಬರ್​ನಲ್ಲೇ ರಾವ್ ಅವರು ಸಿಎಫ್​ಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ 16 ತಿಂಗಳು ಯಾವ ಸಿಎಫ್​ಒ ನೇಮಕವಾಗಿರಲಿಲ್ಲ.

ಇದನ್ನೂ ಓದಿ: ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್

ಅಜಯ್ ಗೋಯಲ್ ಹೊರಹೋಗುತ್ತಿರುವ ಹಿನ್ನೆಲೆಯಲ್ಲಿ ಬೈಜುಸ್​ನಲ್ಲಿ ಹೊಸ ನೇಮಕಾತಿ ಮತ್ತು ಸ್ಥಾನ ಬದಲಾವಣೆಗಳಾಗುತ್ತಿವೆ. ಬೈಜುಸ್​ನ ಫೈನಾನ್ಸ್ ವಿಭಾಗದ ಪ್ರೆಸಿಡೆಂಟ್ ಆಗಿರುವ ನಿತಿನ್ ಗೋಲಾನಿ ಅವರು ಇಂಡಿಯಾ ಸಿಎಫ್​ಒ ಆಗಿ ಜವಾಬ್ದಾರಿ ಪಡೆಯಲಿದ್ದಾರೆ. ಪ್ರದೀಪ್ ಕನಾಕಿಯಾ ಅವರು ಹಿರಿಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ನಿತಿನ್ ಗೋಲಾನಿ ಅವರು ಈ ಹಿಂದೆ ಆಕಾಶ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಸ್ಟ್ರಾಟಿಜಿ ಆಫೀಸರ್ ಆಗಿದ್ದರು. 2021ರಲ್ಲಿ ಆಕಾಶ್ ಸಂಸ್ಥೆಯನ್ನು ಬೈಜುಸ್ ಖರೀದಿಸಿತ್ತು. ಆ ಪ್ರಕ್ರಿಯೆಯಲ್ಲಿ ಗೋಲಾನಿ ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ: Walt Disney- Reliance Industries Deal: ಹಾಟ್​ಸ್ಟಾರ್ ಪಡೆಯಲು ಅಂಬಾನಿ ಕಸರತ್ತು; ರಿಲಾಯನ್ಸ್ ತೆಕ್ಕೆಗೆ ಬೀಳುತ್ತಾ ಡಿಸ್ನಿ ಇಂಡಿಯಾ ಬಿಸಿನೆಸ್?

ಇನ್ನು, ಅಜಯ್ ಗೋಯಲ್ ಅವರು ಮರಳಿ ಗೂಡಿಗೆ ಎಂಬಂತೆ ವೇದಾಂತ ಸಂಸ್ಥೆಗೆ ಮರಳುತ್ತಿದ್ದಾರೆ. ಭಾರತದ ಪ್ರಮುಖ ಗ್ರೂಪ್ ಕಂಪನಿಗಳಲ್ಲಿ ಒಂದಾದ ವೇದಾಂತ ಸಂಸ್ಥೆ ಇದೀಗ ತನ್ನ ಆರು ವ್ಯವಹಾರಗಳನ್ನು ಪ್ರತ್ಯೇಕಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಅಜಯ್ ಗೋಯಲ್ ಅವಶ್ಯಕತೆ ವೇದಾಂತಕ್ಕೆ ಹೆಚ್ಚು ಇದೆ. ಇದೇ ಕಾರಣಕ್ಕೆ ಅವರನ್ನು ಮರಳಿ ಬರಮಾಡಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ