ಹಾಟ್ಸ್ಟಾರ್ ಪಡೆಯಲು ಅಂಬಾನಿ ಕಸರತ್ತು; ರಿಲಾಯನ್ಸ್ ತೆಕ್ಕೆಗೆ ಬೀಳುತ್ತಾ ಡಿಸ್ನಿ ಇಂಡಿಯಾ ಬಿಸಿನೆಸ್?
Walt Disney- Reliance Industries Deal: ವಾಲ್ಟ್ ಡಿಸ್ನಿಯ ಇಂಡಿಯಾ ಬಿಸಿನೆಸ್ಗಳನ್ನು ಖರೀದಿಸಲು ರಿಲಾಯನ್ಸ್ ಇಂಡಸ್ಟ್ರೀಸ್ ಮುಂದಾಗಿದೆ. ಇದು ನೆರವೇರಿದರೆ ಡಿಸ್ನಿ ಹಾಟ್ಸ್ಟಾರ್ ರಿಲಾಯನ್ಸ್ ಸುಪರ್ದಿಗೆ ಸೇರಲಿದೆ. ಇದು 50,000 ಕೋಟಿ ರೂಗೂ ಹೆಚ್ಚು ಮೊತ್ತದ ಡೀಲ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ವಾಲ್ಟ್ ಡಿಸ್ನಿ ಕಂಪನಿ ತನ್ನ ಭಾರತ ಕಾರ್ಯಾಚರಣೆಗಳನ್ನು ಮಾರಲು ಹೊರಟಿರುವ ಸುದ್ದಿ ಕೆಲ ತಿಂಗಳ ಹಿಂದಿನಿಂದಲೂ ಇತ್ತು. ಅದಾನಿ ಗ್ರೂಪ್ ಮತ್ತು ಸನ್ ಗ್ರೂಪ್ ಜೊತೆ ಅದು ಮಾತನಾಡಿತ್ತು ಎಂದೂ ಹೇಳಲಾಗಿದೆ.
ಮುಂಬೈ, ಅಕ್ಟೋಬರ್ 23: ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮತ್ತೊಂದು ದೊಡ್ಡ ಖರೀದಿಯ ಹೊಸ್ತಿಲಲ್ಲಿದೆ. ಪ್ರಮುಖ ಎಂಟರ್ಟೈನ್ಮೆಂಟ್ ಮೀಡಿಯಾ ಕಂಪನಿಯಾದ ವಾಲ್ಟ್ ಡಿಸ್ನಿಯ ಭಾರತದ ಬಿಸಿನೆಸ್ಗಳು (Walt Disney’s India business) ರಿಲಾಯನ್ಸ್ ಪಾಲಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಡೀಲ್ ಅಂತಿಮ ಹಂತದಲ್ಲಿರುವುದು ತಿಳಿದುಬಂದಿದೆ. ಮುಂದಿನ ತಿಂಗಳಿನೊಳಗೆಯೇ (ನವೆಂಬರ್) ಇದನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ವಾಲ್ಟ್ ಡಿಸ್ನಿ ತನ್ನ ಭಾರತದ ಕಾರ್ಯಾಚರಣೆಗಳ ಮೌಲ್ಯ 10 ಬಿಲಿಯನ್ ಡಾಲರ್ ಎಂದು ಪರಿಗಣಿಸಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಪ್ರಕಾರ, ಇದರ ಮೌಲ್ಯ ಏಳರಿಂದ ಎಂಟು ಬಿಲಿಯನ್ ಡಾಲರ್ ಇರಬಹುದು. ಅಂತಿಮವಾಗಿ ಎಷ್ಟಕ್ಕೆ ಡೀಲ್ ಕುದುರುತ್ತದೆ ಎಂಬುದು ಕುತೂಹಲ ಮೂಡಿಸುತ್ತದೆ.
ಮೂಲಗಳ ಪ್ರಕಾರ, ಆರಂಭಿಕ ಮಾತುಕತೆಗಳಲ್ಲಿ ಹಂತ ಹಂತವಾಗಿ ವಾಲ್ಟ್ ಡಿಸ್ನಿಯ ಇಂಡಿಯಾ ಬಿಸಿನೆಸ್ಗಳನ್ನು ರಿಲಾಯನ್ಸ್ಗೆ ಬಿಟ್ಟುಕೊಡಬೇಕೆಂದು ಪ್ರಸ್ತಾಪಿಸಲಾಗಿತ್ತು. ಅಂತಿಮವಾಗಿ, ವಾಲ್ಟ್ ಡಿಸ್ನಿ ತನ್ನ ಬಹುಪಾಲು ಷೇರನ್ನು ರಿಲಾಯನ್ಸ್ಗೆ ಮಾರಬಹುದು. ಅಂದರೆ, ವಾಲ್ಟ್ ಡಿಸ್ನಿಯ ಇಂಡಿಯಾ ಬಿಸಿನೆಸ್ ಅನ್ನು ರಿಲಾಯನ್ಸ್ಗೆ ಮಾರಾಟ ಮಾಡಿದರೂ ಒಂದಷ್ಟು ಪಾಲನ್ನು ವಾಲ್ಟ್ ಡಿಸ್ನಿ ಉಳಿಸಿಕೊಳ್ಳಲಿದೆ. ಸಂಸ್ಥೆಯ ಆಡಳಿತ ನಿಯಂತ್ರಣ ಮತ್ತು ಅಧಿಕಾರ ರಿಲಾಯನ್ಸ್ಗೆ ಇರಲಿದೆ.
ವಾಲ್ಟ್ ಡಿಸ್ನಿ ಭಾರತದಲ್ಲಿ ಹೊಂದಿರುವ ಪ್ರಮುಖ ಬಿಸಿನೆಸ್ ಡಿಸ್ನಿ ಹಾಟ್ಸ್ಟಾರ್ ಮತ್ತು ಸ್ಟಾರ್ ಇಂಡಿಯಾ. ಇದೀಗ ಇವು ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ತೆಕ್ಕೆಗೆ ಬರಲಿವೆ. ರಿಲಾಯನ್ಸ್ ಗ್ರೂಪ್ಗೆ ಸೇರಿದ ಜಿಯೋ ಇತ್ತೀಚೆಗಷ್ಟೇ ಐಪಿಎಲ್ ಟೂರ್ನಿಯ ಡಿಜಿಟಲ್ ಪ್ರಸಾರ ಹಕ್ಕನ್ನು ಖರೀದಿಸಿತ್ತು. ಅದನ್ನು ಉಚಿತವಾಗಿ ತನ್ನ ಜಿಯೋ ಪ್ಲಾಟ್ಫಾರ್ಮ್ನಲ್ಲಿ ಬಿತ್ತರಿಸಿ ಹೊಸ ಐಪಿಎಲ್ ವೀಕ್ಷಣೆಯ ದಾಖಲೆ ಬರೆದಿತ್ತು. ಇದು ಡಿಸ್ನಿ ಹಾಟ್ಸ್ಟಾರ್ ಮೇಲೆ ಒತ್ತಡ ಸೃಷ್ಟಿಸಿದ್ದು ಹೌದು. ಈ ಬಾರಿಯ ಐಸಿಸಿ ವಿಶ್ವಕಪ್ನ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕು ಎರಡೂ ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ಸ್ಟಾರ್ ಬಳಿ ಇವೆ. ಜಿಯೋದಲ್ಲಿ ಐಪಿಎಲ್ ಉಚಿತವಾಗಿ ಪ್ರಸಾರವಾದ ಪರಿಣಾಮ ಹಾಟ್ಸ್ಟಾರ್ನಲ್ಲೂ ವಿಶ್ವಕಪ್ ಪಂದ್ಯಗಳು ಉಚಿತವಾಗಿ ಪ್ರಸಾರವಾಗುತ್ತಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಗರಿಷ್ಠ 4.3 ಕೋಟಿ ಲೈವ್ ವೀಕ್ಷಕರಿದ್ದು ದಾಖಲೆ ಬರೆಯಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ