ಬೆಂಗಳೂರು, ಸೆಪ್ಟೆಂಬರ್ 27: ಸಾಲ ಮತ್ತು ವಿವಾದಗಳಿಂದ ಬಾಧಿತವಾಗಿರುವ ಭಾರತದ ಪ್ರಮುಖ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (BYJU’S) ಮತ್ತೊಂದು ಸುತ್ತಿನ ಲೇ ಆಫ್ಗೆ ಕೈ ಹಾಕಲು ನಿರ್ಧರಿಸಿದೆ. ಬಿಸಿನೆಸ್ ಟುಡೇ ವಾಹಿನಿಯಲ್ಲಿ ಬಂದಿರುವ ವರದಿ ಪ್ರಕಾರ ವೆಚ್ಚ ಕಡಿತ ಮತ್ತು ಕಂಪನಿ ಪುನಾರಚನೆಯ (Restructuring) ಭಾಗವಾಗಿ ಬೈಜುಸ್ನ ಬಹಳಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಕಂಪನಿಯ ಈ ಹೊಸ ಸುತ್ತಿನ ಲೇ ಆಫ್ ಪ್ರಕ್ರಿಯೆಯಲ್ಲಿ ಬರೋಬ್ಬರಿ 4,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ (Job Loss) ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ ಬೈಜುಸ್ನಲ್ಲಿರುವ 35 ಸಾವಿರ ಮಂದಿ ಉದ್ಯೋಗಿಗಳಲ್ಲಿ ಶೇ. 11ರಷ್ಟು ಮಂದಿ ಕೆಲಸ ಕಳೆದುಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿಯಲ್ಲಿ ಹೇಳಿದೆ.
ಇಷ್ಟು ಅಗಾಧ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಬೈಜುಸ್ನಿಂದ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. ಆದರೆ, ಬಿಸಿನೆಸ್ ರೀಸ್ಟ್ರಕ್ಚರಿಂಗ್ ಕಾರ್ಯದ ಅಂತಿಮ ಹಂತದಲ್ಲಿದ್ದೇವೆ ಎಂದು ಮಾಧ್ಯಮಗಳಿಗೆ ಬೈಜುಸ್ನ ವಕ್ತಾರರು ತಿಳಿಸಿದ್ದಾರೆ.
‘ಕಾರ್ಯಾಚರಣೆ ರಚನೆಯನ್ನು (Operational structure) ಸರಳಗೊಳಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಗದು ಹರಿವಿನ ನಿರ್ವಹಣೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವ್ಯವಹಾರ ಪುನಾರಚನೆ (business restructuring) ಕಾರ್ಯದ ಅಂತಿಮ ಹಂತದಲ್ಲಿದ್ದೇವೆ,’ ಎಂದು ಬೈಜುಸ್ನ ವಕ್ತಾರರು ಪ್ರತಿಕ್ರಿಯಿಸಿದರೆಂದು ಬಿಸಿನೆಸ್ ಟುಡೇ ವರದಿ ಮಾಡಿದೆ.
ಇದನ್ನೂ ಓದಿ: ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ
ಕೆಲ ವಾರಗಳ ಹಿಂದಷ್ಟೇ ಬೈಜುಸ್ನ ಭಾರತ ವಿಭಾಗಕ್ಕೆ ಹೊಸ ಸಿಇಒ ಆಗಿ ಬಂದಿರುವ ಅರ್ಜುನ್ ಮೋಹನ್ ಅವರ ನೇತೃತ್ವದಲ್ಲಿ ಮುಂದಿನ ಕೆಲ ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಲಾಗಿದೆ.
ಸಿಇಒ ಆಗಿ ಮೃಣಾಲ್ ಮೋಹಿತ್ ಅವರ ಸ್ಥಾನವನ್ನು ತುಂಬುವ ಮುನ್ನ ಅರ್ಜುನ್ ಮೋಹನ್ ಅವರು ಬೈಜುಸ್ನ ಚೀಫ್ ಬಿಸಿನೆಸ್ ಆಫೀಸರ್ ಆಗಿದ್ದರು. ಮೃಣಾಲ್ ಮೋಹಿತ್ ಅವರು ಬೈಜುಸ್ನ ಪ್ರತಿಸ್ಪರ್ಧಿ ಅಪ್ಗ್ರಾಡ್ ಅನ್ನು ಸೇರಿಕೊಂಡಿದ್ದಾರೆ. ಅವರಷ್ಟೇ ಅಲ್ಲ, ಬೈಜುಸ್ನ ಇತರ ನಾಲ್ವರು ಹಿರಿಯ ಎಕ್ಸಿಕ್ಯೂಟಿವ್ಗಳಾದ ಪ್ರತ್ಯುಶಾ ಅಗರ್ವಾಲ್, ಹಿಮಾಂಶು ಬಜಾಜ್, ಮುಕುತ್ ದೀಪಕ್ ಮತ್ತು ಚೆರಿಯನ್ ಥಾಮಸ್ ಅವರೂ ರಾಜೀನಾಮೆ ನೀಡಿದ್ದಾರೆ.
ಸಾಕಷ್ಟು ಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಬೈಜುಸ್ನ ಚುಕ್ಕಾಣಿ ಹಿಡಿದಿರುವ ಅರ್ಜುನ್ ಮೋಹನ್ ಅವರಿಗೆ ಗುರುತರ ಜವಾಬ್ದಾರಿಗಳಿವೆ. ಹಣಕಾಸು ಸಂಕಷ್ಟದಲ್ಲಿರುವ ಬೈಜುಸ್ಗೆ ಫಂಡಿಂಗ್ ತರುವುದು, ವೆಚ್ಚ ಕಡಿತ ಮಾಡುವುದು, ಬಿಸಿನೆಸ್ ಹೆಚ್ಚಿಸುವುದು ಹೇಗೆ ಕಠಿಣ ಸವಾಲುಗಳಿವೆ. ಈ ಹಿನ್ನೆಲೆಯಲ್ಲಿ ಉದ್ಯೋಗಕಡಿತದಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೈಜುಸ್ಗೆ ಅನಿವಾರ್ಯವಾಗಬಹುದು.
ಬೈಜುಸ್ ಈ ಮುಂಚೆ ಮೂರ್ನಾಲ್ಕು ಬಾರಿ ಲೇ ಆಫ್ ಮಾಡಿದ್ದಿದೆ. ಕಳೆದ ವರ್ಷ 2,500 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಈಗ 4,000 ಮಂದಿ ಕೆಲಸ ಕಳೆದುಕೊಳ್ಳುವುದು ನಿಜವೇ ಆದಲ್ಲಿ ಬೈಜುಸ್ನಿಂದ ಆಗಿರುವ ಅತಿದೊಡ್ಡ ಲೇ ಆಫ್ ಎನಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ